ಅಕ್ಷರ, ಅನ್ನ ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಪೂರಕ ಅಂಶಗಳು- ಎಂ.ಎ. ರಡ್ಡೇರ

| Published : Jan 29 2024, 01:31 AM IST

ಅಕ್ಷರ, ಅನ್ನ ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಪೂರಕ ಅಂಶಗಳು- ಎಂ.ಎ. ರಡ್ಡೇರ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ಮತ್ತು ಅನ್ನ ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಪೂರಕ ಅಂಶಗಳು. ಆದ್ದರಿಂದ ಅನ್ನ ಮಾಡುವ ಅಡುಗೆದಾರರು ಜಾಗೃತಿ, ಸ್ವಚ್ಛತೆ, ಸಹಕಾರ ಎಲ್ಲವುಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸುವುದು ಅವಶ್ಯವಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು.

ಮುಂಡರಗಿ: ಅಕ್ಷರ ಮತ್ತು ಅನ್ನ ಮನುಷ್ಯನ ಬೌದ್ಧಿಕ ವಿಕಾಸಕ್ಕೆ ಪೂರಕ ಅಂಶಗಳು. ಆದ್ದರಿಂದ ಅನ್ನ ಮಾಡುವ ಅಡುಗೆದಾರರು ಜಾಗೃತಿ, ಸ್ವಚ್ಛತೆ, ಸಹಕಾರ ಎಲ್ಲವುಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸುವುದು ಅವಶ್ಯವಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕ ಎಂ.ಎ. ರಡ್ಡೇರ ಹೇಳಿದರು. ಅವರು ಪಟ್ಟಣದ ಗಾಂಧಿ ಭವನದಲ್ಲಿ ಜಿಪಂ ಗದಗ, ತಾಪಂ ಮುಂಡರಗಿ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (ಮ.ಉ.ಯೋ.)ಮುಂಡರಗಿ ತಾಲೂಕಿನ ಅಡುಗೆ ಸಿಬ್ಬಂದಿಯವರಿಗೆ 2023-24ನೇ ಸಾಲಿನ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಸಿವು ಮುಕ್ತ ಭಾರತ ಮಾಡಬೇಕೆನ್ನುವ ಸರ್ಕಾರದ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಮುಖವಾದುದು. ಜೊತೆಗೆ ಅಪೌಷ್ಟಿಕವಾಗಿರುವ ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಕ್ಷೀರಭಾಗ್ಯ ಪ್ರಾರಂಭಿಸಿದೆ. ಇದು ಸರ್ಕಾರದ ಪ್ರಮುಖ ಉದ್ದೇಶವೂ ಆಗಿದೆ ಎಂದರು. ಎಲ್ಲಿ‌ ನಕಾರಾತ್ಮಕವಾದ ವಾತಾವರಣ ಇರುತ್ತದೆಯೋ‌ ಅದನ್ನು ಸಕಾರಾತ್ಮಕವಾಗಿ ಮಾಡುವುದೇ ಸರ್ಕಾರಿ ಯೋಜನೆಗಳ ಉದ್ದೇಶವಾಗಿದೆ. ಜೊತೆಗೆ ಮಕ್ಕಳ ಹಾಜರಾತಿ ಹೆಚ್ಚಾಗಬೇಕು ಎನ್ನುವುದು ಬಿಯೂಟ ಯೋಜನೆಯ ಉದ್ದೇಶವಾಗಿದೆ. ನಮ್ಮ ಮಕ್ಕಳು ಬಯಸುವಂತಹ ಶುಚಿ ಮತ್ತು ರುಚಿಯುಳ್ಳ ಅಡುಗೆಯನ್ನು ಮಾಡಬೇಕು. ಯಾವುದೇ ಶಾಲೆಗಳಲ್ಲಿ ಬಿಸಿಯೂಟ ಯಶಸ್ವಿಯಾಗಬೇಕಾದರೆ ಅಲ್ಲಿನ ಶಿಕ್ಷಕರು, ಸಾರ್ವಜನಿಕರ ಜೊತೆಗೆ ಅಕ್ಷರದಾಸೋಹದ ಎಲ್ಲ ಅಡುಗೆದಾರರ ಸಹಕಾರವೇ ಪ್ರಮುಖ ಕಾರಣವಾಗಿದೆ. ಪ್ರಜಾಪ್ರಭುತ್ವದ ಮೌಲ್ಯವನ್ನು ಹೆಚ್ಚಿಸಿದ ಯೋಜನೆ ಎಂದರೆ ಅದು ಬಿಸಿಯೂಟ ಯೋಜನೆಯಾಗಿದೆ ಎಂದರು. ಪೌಷ್ಟಿಕ ತರಕಾರಿಗಳನ್ನು ಅಡುಗೆಗೆ ಬಳಕೆ ಮಾಡಬೇಕು ಎಂದರು.

ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ರಂಜನಾ ತಳಗೇರಿ ಮಾತನಾಡಿ, 2003ರಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಕಡಿಮೆ ಮಾಡಲು ಬಿಸಿಯೂಟ ಪ್ರಾರಂಭಿಸಲಾಗಿದೆ. ಅಡುಗೆ ತಯಾರಕರು ಅಡುಗೆ ಮಾಡುವ ಸಂದರ್ಭದಲ್ಲಿ ಮಗು ಅಲ್ಲಿ ಬರದಂತೆ ನೋಡಿಕೊಳ್ಳುವುದು, ಗ್ಯಾಸ್ ಸಿಲಿಂಡರ್ ಲಿಕೇಜ್, ಅಡುಗೆ ತಯಾರಕರು ರಕ್ಷಣೆ ಸೇರಿದಂತೆ ಎಲ್ಲ ರೀತಿಯ ಸಂರಕ್ಷಣೆ ಅತ್ಯಂತ ಅವಶ್ಯವಾಗಿದೆ. ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಇರಬೇಕು. ಅಲ್ಲದೇ ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವ ಸೊಪ್ಪು, ತರಕಾರಿಗಳನ್ನು ಶಾಲಾ ಆವರಣದಲ್ಲಿಯೇ ಬೆಳೆಯಬೇಕು. ಇದರಿಂದ ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತವೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಪಡ್ನೇಶಿ, ಬಿ.ಬಾಬು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ, ಎಚ್.ಪಿ. ಗ್ಯಾಸ್ ಏಜೆನ್ಸಿಯ ಮಹೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಅಗ್ನಿ ಶಾಮಕದಳ ಇಲಾಖೆಯಿಂದ ಶಾಲೆಗಳಲ್ಲಿ ಸಿಲಿಂಡರ್‌ ಬೆಂಕಿ ಹೊತ್ತಿಕೊಂಡರೆ ಆರಿಸುವುದು ಹಾಗೂ ಸಿಲಿಂಡರ್ ಲೀಕ್ ಆದಾಗ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ ವಿವಿಧ ಶಾಲೆಗಳ ಅಡುಗೆದಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.