ಬಿಸಿಯೂಟ ಯೋಜನೆ ಜಾರಿಗೆ ಬಂದ ಮೇಲೆ ಶಾಲೆಗಳಲ್ಲಿ ಗೈರು ಹಾಜರಾತಿ, ಶಾಲಾ ಬಿಡುವಿಕೆ ಕಡಿಮೆಯಾಗಿ ಶಾಲಾ ಮಕ್ಕಳು ಮಧ್ಯಾಹ್ನದ ನಂತರದಲ್ಲಿಯೂ ಲವಲವಿಕೆಯಿಂದ ಅಭ್ಯಾಸದಲ್ಲಿ ತೊಡಗಿದ್ದರು. 2011ರಲ್ಲಿ ಬಂದ ಯೋಜನೆಯಿಂದ ಇಂದು 11.7 ಕೋಟಿ ಫಲಾನುಭವಿಗಳನ್ನೊಳಗೊಂಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬಿಸಿಯೂಟ ಯೋಜನೆ ನೌಕರರಿಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಬಳಿ ಸೇರಿದ ಕಾರ್ಯಕರ್ತೆಯರು, ಕೇಂದ್ರ ಸರ್ಕಾರದ ವಿರುದ್ಧ, ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಸುತ್ತಲು ಧರಣಿ ಕುಳಿತು ಜನರು, ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದರು.

ಬಿಸಿಯೂಟ ಯೋಜನೆ ಜಾರಿಗೆ ಬಂದ ಮೇಲೆ ಶಾಲೆಗಳಲ್ಲಿ ಗೈರು ಹಾಜರಾತಿ, ಶಾಲಾ ಬಿಡುವಿಕೆ ಕಡಿಮೆಯಾಗಿ ಶಾಲಾ ಮಕ್ಕಳು ಮಧ್ಯಾಹ್ನದ ನಂತರದಲ್ಲಿಯೂ ಲವಲವಿಕೆಯಿಂದ ಅಭ್ಯಾಸದಲ್ಲಿ ತೊಡಗಿದ್ದರು. 2011ರಲ್ಲಿ ಬಂದ ಯೋಜನೆಯಿಂದ ಇಂದು 11.7 ಕೋಟಿ ಫಲಾನುಭವಿಗಳನ್ನೊಳಗೊಂಡಿದೆ ಎಂದರು.

ಆದರೆ, ಈ ಯೋಜನೆ 2014ರಿಂದ ನೀತಿ ಆಯೋಗದ ಶಿಫಾರಸ್ಸಿನ ಮೇಲೆ ಕೇಂದ್ರ ಸರ್ಕಾರ ತನ್ನ ಪಾಲಿನ ವಂತಿಕೆಯನ್ನು ಶೇ.90 ರಿಂದ 60ಕ್ಕೆ ಇಳಿಸಿದೆ. 26 ಲಕ್ಷ ಮಹಿಳೆಯರು ಅಡುಗೆ ತಯಾರಕರಾಗಿ ನಿತ್ಯ ದುಡಿಯುತ್ತಿದ್ದಾರೆ. ಇವರಿಗೆ ತೊಂದರೆಯಾಗಿದೆ ಎಂದು ದೂರಿದರು.

2009 ರಿಂದ ಕೇವಲ 600 ರು.ಗಳಿಗೆ ದುಡಿಸಲಾಗುತ್ತಿದೆ. ಮುಂಬರುವ ಬಜೆಟ್‌ನಲ್ಲಿಯಾದರೂ ಕನಿಷ್ಠ ವೇತನ ನೀಡಬೇಕು. ಈಗಾಗಲೇ ಮಾಡುತ್ತಿರುವ 6 ಗಂಟೆಗೆ ಕೆಲಸದ ಅವಧಿ ಹೆಚ್ಚಳದ ಆದೇಶ ಹೊರಡಿಸಬೇಕು. ಯಾವುದೇ ಸ್ವರೂಪದಲ್ಲಿಯೂ ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು ಎಂದು ಆಗ್ರಹಿಸಿದರು.

ಐಎಲ್‌ಸಿ ಶಿಫಾರಸ್ಸಿನಂತೆ ಉದ್ಯೋಗಸ್ಥರೆಂದೂ ಪರಿಗಣಿಸಿ ಶಾಸನಬದ್ಧ ಸವಲತ್ತುಗಳನ್ನು ಕೊಡಬೇಕು. ಕೆಪಿಎಸ್ ಶಾಲೆಗಳ ಪರಿಕಲ್ಪನೆಯಿಂದ ಶಾಲೆಗಳು ವಿಲೀನವಾದಾಗ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದ್ದರಿಂದ ಅವರ ಕೆಲಸದ ಭದ್ರತೆ ಖಚಿತಪಡಿಸಬೇಕು. ಬಿಸಿಯೂಟ ನೌಕರರಿಗೆ ಆರೋಗ್ಯ ವಿಮೆ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.

ಡೀಸಿ ಕಚೇರಿ ಸುತ್ತಾ ದಿಗ್ಭಂಧನ:

ಅಕ್ಷರ ದಾಸೋಹ, ಅಂಗನವಾಡಿ ನೌಕರರ ಭಾರಿ ಪ್ರತಿಭಟನೆಯಿಂದಾಗಿ ನಗರದ ಜಿಲ್ಲಾಧಿಕಾರಿ ಕಚೇರಿಯ ಸುತ್ತ ದಿಗ್ಭಂಧನ ಉಂಟಾಗಿತ್ತು. ಆಹಾರ ಇಲಾಖೆ, ವಕೀಲರ ಸಂಘ, ಸರ್ಕಾರಿ ನೌಕರರ ಆವರಣ ಹೀಗೆ ಎಲ್ಲಾ ಮಹಿಳೆಯರು ಸರ್ಪಗಾಲು ಹಾಕಿ ಯಾವುದೇ ವಾಹನಗಳು ಹಾಗೂ ಯಾರು ಕೂಡ ಕಚೇರಿಗೆ ಹೋಗದಂತೆ ದಿಗ್ಭಂಧನ ಹಾಕಿ ಪ್ರತಿಭಟನೆ ಮಾಡಿದರು.

ಒಂದೆಡೆ ಪ್ರತಿಭಟನೆ ನೇತೃತ್ವ ವಹಿಸಿದ್ದವರು ಭಾಷಣ ಮಾಡುತ್ತಿದ್ದರೆ ಮತ್ತೆ ಕೆಲವರು ಗುಂಪು ಗುಂಪಾಗಿ ಮಧ್ಯಾಹ್ನ ಊಟ ಸವಿದರು. ಮತ್ತೆ ಕೆಲವರು ಪ್ರತಿಭಟನೆ ವೇಳೆ ಅಲ್ಲೇ ನಿದ್ದೆಗೆ ಜಾರಿದ್ದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಕೇಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಸ್.ವರಲಕ್ಷ್ಮಿ, ಲಕ್ಷ್ಮಿದೇವಿ, ಮಹದೇವಮ್ಮ, ಮಾಲಿನಿ ಮೆಸ್ತಾ, ಅರವಿಂದ್, ಶಶಿಕಲಾ, ಕುಸುಮ, ಮಂಜುಳ, ಶಿವಮ್ಮ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು.