ಸಾರಾಂಶ
6 ತಿಂಗಳಿನಿಂದ ಸಮರ್ಪಕವಾಗಿ ಪೂರೈಕೆಯಾಗದ ಅಡುಗೆ ಅನಿಲ । ಮಧ್ಯಾಹ್ನದ ಬಿಸಿಯೂಟಕ್ಕಿಲ್ಲ ಎಣ್ಣೆ, ಬೇಳೆ, ಗೋಧಿಅನೀಲ್ ಬಿರಾದಾರ
ಕನ್ನಡಪ್ರಭ ವಾರ್ತೆ ಕೊಡೇಕಲ್ಕಳೆದ ನಾಲ್ಕೈದು ತಿಂಗಳಿನಿಂದ ಸರ್ಕಾರಿ ಶಾಲೆಗಳಿಗೆ ಅಡುಗೆ ಅನಿಲ ಹಾಗೂ ಅಡುಗೆ ಸಾಮಗ್ರಿಗಳು ಸಮರ್ಪಕವಾಗಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಹುಣಸಗಿ ತಾಲೂಕಿನ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಿಸಿಯೂಟ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ರೂಪಿತವಾದ ಸರ್ಕಾರದ ಮಹತ್ವಾಕಾಂಕ್ಷೆಯ ಬಿಸಿಯೂಟ ಯೋಜನೆಯು ಅಸಮರ್ಪಕ ಗ್ಯಾಸ್ ವಿತರಣೆ ಹಾಗೂ ಅಡುಗೆ ಸಾಮಗ್ರಿಗಳ ವಿಳಂಬ ಪೂರೈಕೆಯಿಂದಾಗಿ ತಾಲೂಕಿನಲ್ಲಿ ನನೆಗುದಿಗೆ ಬೀಳುವಂತಾಗಿದೆ.ಅಡುಗೆ ಎಣ್ಣೆ, ಗೋಧಿ, ಬೇಳೆ ಹಾಗೂ ಅಡುಗೆ ಅನಿಲದ ಸಂಪೂರ್ಣ ವೆಚ್ಚವನ್ನು ಆಯಾ ಶಾಲೆಯ ಮುಖ್ಯಗುರುಗಳೇ ಕೆಲ ತಿಂಗಳಿನಿಂದ ವ್ಯಯಿಸುತ್ತಿದ್ದು, ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.
ತಾಲೂಕಿನಲ್ಲಿ 181 ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 170 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 70 ಫ್ರೌಡಶಾಲೆಗಳು ಸೇರಿದಂತೆ ಒಟ್ಟು 411 ಶಾಲೆಗಳದ್ದು, ಬಹುತೇಕ ಎಲ್ಲಾ ಶಾಲೆಗಳಲ್ಲಿ ಜುಲೈನಿಂದ ಇಲ್ಲಿಯವರೆಗೆ ಅಡುಗೆ ಅನಿಲವು ಇಲಾಖೆ ವತಿಯಿಂದ ಪೂರೈಸಲಾಗಿಲ್ಲ.ಆರು ತಿಂಗಳಿನಿಂದ ಇದೇ ಸಮಸ್ಯೆ ತಲೆದೂರಿದ್ದರೂ ಸಹಿತ ಯಾವೊಬ್ಬ ಮೇಲಧಿಕಾರಿಗಳು ಸಹ ಇದರ ಬಗ್ಗೆ ಗಮನಹರಿಸದ ಕಾರಣ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸರಿಯಾಗಿ ದೊರೆಯುತ್ತಿಲ್ಲ. ಕೆಲವೆಡೆ ಶಿಕ್ಷಕರು ಸ್ವಂತ ಖರ್ಚಿನಿಂದ ವ್ಯವಸ್ಥೆ ಮಾಡುತ್ತಿದ್ದಾರೆ.
ಸ್ಥಗಿತವಾಗಿರುವ ಗ್ಯಾಸ್ ಪೂರೈಕೆ:ಕಳೆದ 6 ತಿಂಗಳಿನಿಂದ ರಾಜ್ಯ ಸರ್ಕಾರ ಹುಣಸಗಿ ತಾಲೂಕಿನ ಏಜೆನ್ಸಿಗಳಿಗೆ ಅನುದಾನ ಬಿಡುಗಡೆ ಮಾಡದ ಕಾರಣ ಏಜೆನ್ಸಿಯವರಿಗೆ ಲಕ್ಷಾಂತರ ರುಪಾಯಿ ಹಣ ಹೊಂದಿಸಲಾಗದೇ ಸಮರ್ಪಕವಾಗಿ ಶಾಲೆಗಳಿಗೆ ಅನಿಲ ಪೂರೈಸಲಾಗುತ್ತಿಲ್ಲ.
ಕೊಡೇಕಲ್ ವಲಯದ 71 ಶಾಲೆಗಳಿಗೆ ಪ್ರತಿ ತಿಂಗಳು 250ರಿಂದ 260 ಸಿಲಿಂಡರ್ ಬೇಡಿಕೆಯಿದೆ. ಈ ಸಮಸ್ಯೆಯನ್ನು ಮೇಲಾಧಿಕಾರಿಗಳಿಗೆ ಶಿಕ್ಷಕರು ತಿಳಿಸಿದರೆ ಸೌದೆಯಿಂದ ಅಡುಗೆ ಮಾಡಿ ಎಂಬ ಪರ್ಯಾಯ ಮಾರ್ಗ ಹೇಳುತ್ತಿದ್ದಾರೆಯೇ ವಿನಃ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂದು ಹಿರಿಯ ಮುಖ್ಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.ಅಡುಗೆ ಅನಿಲ ಜೊತೆಗೆ ಧಾನ್ಯದ ಕೊರತೆ:
ತಾಲೂಕಿನ ಶಾಲೆಗಳಿಗೆ ಅಡುಗೆ ಅನಿಲ ಸಮರ್ಪಕವಾಗಿ ಪೂರೈಕೆಯಾಗದೇ ಇರುವಾಗಲೇ ಇದರೊಟ್ಟಿಗೆ ಅಡುಗೆ ಎಣ್ಣೆ, ಗೋಧಿ, ಬೇಳೆ ಸಹಿತ ಕಳೆದ ಎರಡು ತಿಂಗಳಿನಿಂದ ಸರಬರಾಜು ಆಗದ ಕಾರಣ ವಿದ್ಯಾರ್ಥಿಗಳು ಹಸಿದ ಹೊಟ್ಟೆಯಿಂದಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಿಗೆಯಿಂದಾದದರೂ ಸಹಿತ ಅಡುಗೆ ತಯಾರಿಸಿ ಇರುವುದರಲ್ಲಿಯೇ ನಿಭಾಯಿಸಿ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಶಿಕ್ಷಕರಿಗೆ ತಾಕೀತು ಮಾಡುತ್ತಿದಾರೆ ಎಂದು ಹೆಸರು ಹೇಳಲಿಚ್ಚಿಸದ ಶಿಕ್ಷಕರು ತಿಳಿಸಿದ್ದಾರೆ.- - - -
ಯಾದಗಿರಿ ಹಾಗೂ ಶಹಾಪುರದಲ್ಲಿ ಅಡುಗೆ ಅನಿಲದ ತೊಂದರೆಯೇನಿಲ್ಲ. ಆದರೆ, ಸುರಪುರದಲ್ಲಿ ಕೆಲವೆಡೆ ಏಜೆನ್ಸಿಗಳಿಗೆ ಹಣ ಬಿಡುಗಡೆ ಬಾಕಿಯಿದ್ದು, ಶೀಘ್ರವೇ ಪರಿಹರಿಸಲಾಗುವುದು. ಅಡುಗೆ ಸಾಮಗ್ರಿಗಳ ಟೆಂಡರ್ ವಿಳಂಬವಾದ ಪ್ರಯುಕ್ತ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಸಾಮಗ್ರಿಗಳನ್ನು ತಲುಪಿಸಲಾಗಿಲ್ಲ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಎಂದಿನಂತೆ ಆಯಾ ಶಾಲೆಗಳಿಗೆ ಅವಶ್ಯಕ ಸರಬರಾಜನ್ನು ಮಾಡಲಾಗುವುದು.- ಈಶ್ವರಪ್ಪ ನೀರೋಡಗಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಯಾದಗಿರಿ