ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಆರೋಗ್ಯ, ಶಿಕ್ಷಣ, ಅಕ್ಷರ ದಾಸೋಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಇಡೀ ಭಾರತದ ಎರಡನೇ ವ್ಯಕ್ತಿಯಾಗಿ ಪ್ರತಿಬಿಂಬಿಸಿದ ರಾಜಕಾರಣಿ ಎಂದು ಮಾಜಿ ಸಚಿವ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಬಣ್ಣಿಸಿದರು.ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜು ಆವರಣದಲ್ಲಿ ನಡೆದ ಎಸ್.ಎಂ.ಕೃಷ್ಣರ 93ನೇ ಜನ್ಮದಿನೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿ, ಹಿಂದಿನ ತಮಿಳುನಾಡಿನ ಮುಖ್ಯಮಂತ್ರಿ ಕಾಮರಾಜ್ ಅಕ್ಷರ ದಾಸೋಹ ಯೋಜನೆಯನ್ನು ಜಾರಿಗೆ ತರುವ ಮೂಲಕ ಮೊದಲ ವ್ಯಕ್ತಿಯಾಗಿದ್ದರೆ. ಇದೇ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಮೂಲಕ ಎರಡನೇ ವ್ಯಕ್ತಿಯಾಗಿ ರೂಪುಗೊಂಡಿದ್ದರು ಎಂದರು.
ರಾಜ್ಯದ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ದುಬಾರಿಯಾಗಿದ್ದ ಅಂದಿನ ದಿನಗಳಲ್ಲಿ ಯಶಸ್ವಿ ಯೋಜನೆ, ಅಕ್ಷರ ದಾಸೋಹ ಯೋಜನೆ ಮೂಲಕ ಬಡವರ್ಗದ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗೆ ಆಕರ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು ಎಂದರು.ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚು ಒತ್ತು ನೀಡಿದ್ದರು. ಬೆಂಗಳೂರಿನ ಪೀಣ್ಯ, ಹುಟ್ಟೂರು ಸೋಮನಹಳ್ಳಿಯಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿಸಿದರು.
ಎಸ್.ಎಂ.ಕೃಷ್ಣರು ರಾಜಕಾರಣದಲ್ಲಿ ಸಿಕ್ಕ ಎಲ್ಲಾ ಅಧಿಕಾರ ಮತ್ತು ಅವಕಾಶಗಳನ್ನು ಬಳಸಿಕೊಂಡು ತಮ್ಮ ಹೆಸರು ತಿರಸ್ಥಾಯಿಯಾಗಿ ಉಳಿದಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ, ಜಿ. ಮಾದೇಗೌಡ ಎಲ್ಲರೂ ಎದುರಾಳಿಗಳಾಗಿ ರಾಜಕೀಯ ಶತ್ರುಗಳಾಗಿದ್ದರೂ ಸಹ ಆರೋಗ್ಯಕರ ರಾಜಕಾರಣ ಮಾಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.ನನಗೆ ಬಿ ಫಾರಂ ದೊರಕಿದಾನ ವಿರೋಧ ವ್ಯಕ್ತಪಡಿಸದ ಎಸ್.ಎಂ.ಕೃಷ್ಣ - ಕೆ.ಎಂ. ಉದಯ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ತಮ್ಮ ಕುಟುಂಬದವರ ಸ್ಪರ್ಧೆ ವಿಚಾರದಲ್ಲಿ ಸಾಕಷ್ಟು ಒತ್ತಡಗಳು ಇದ್ದರೂ ಸಹ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ನನಗೆ ಬಿ ಫಾರಂ ದೊರಕಿದಾಗ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ ಎಸ್.ಎಂ.ಕೃಷ್ಣ ಅವರ 93ನೇ ಜನ್ಮದಿನೋತ್ಸವದಲ್ಲಿ ಮಾತನಾಡಿ, ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ಅವರ ಕುಟುಂಬದ ಒಬ್ಬರು ಮತ್ತು ನನ್ನ ನಡುವೆ ಪೈಪೋಟಿ ಉಂಟಾಗಿತ್ತು. ಈ ಸಂಬಂಧ ಕೃಷ್ಣರ ನಿವಾಸದಲ್ಲಿ ಸಭೆ ನಡೆದು ಅಂತಿಮವಾಗಿ ಪಕ್ಷದ ವರಿಷ್ಠರು ನನ್ನನ್ನು ಆಯ್ಕೆ ಮಾಡಿದಾಗ ಎಸ್.ಎಂ. ಕೃಷ್ಣ ಅವರು ಯಾವುದೇ ವಿರೋಧ ವ್ಯಕ್ತಪಡಿಸದೆ ಎಲ್ಲವನ್ನು ಕೆಪಿಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟು ಮೌನಕ್ಕೆ ಶರಣಾದರು ಎಂದರು.