ಅಕ್ಷರ ದೀಕ್ಷೆಯಿಂದ ಮಕ್ಕಳ ಬದುಕಿನಲ್ಲಿ ಬೆಳಕಿನ ದೀಪ ಅನಾವರಣ

| Published : Aug 27 2025, 01:00 AM IST

ಸಾರಾಂಶ

ಸರ್ವಸ್ವವನ್ನೂ ತ್ಯಾಗ ಮಾಡಿ ಏನು ಗಳಿಸಿದಿರಿ ಎಂಬ ಪ್ರಶ್ನೆಗೆ ಜ್ಞಾನೋದಯವಾದ ಬುದ್ಧನು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು ಎಂಬ ಉದಾತ್ತ ಚಿಂತನೆಯ ಸಾರವನ್ನು ತಿಳಿಸುತ್ತಾನೆ. ಹಾಗೆಯೇ ಒಂದು ಸಾವಿರ ಕೆಜಿ ಅದಿರನ್ನು ಅನುಕ್ರಮವಾಗಿ ಶೋಧಿಸಿದರೆ ಮೂರು ಗ್ರಾಂ ಚಿನ್ನ ಪಡೆಯಲು ಸಾಧ್ಯ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಕ್ಕಳ ಮನಸ್ಸಿಗೆ ಬಿತ್ತಿದ ಅಕ್ಷರ-ಜ್ಞಾನ ಉತ್ತಮ ಫಲ ಕೊಡಲು ಇಂದು ನಿಮ್ಮ ಮಡಿಲಲ್ಲಿರುವ ಮಗುವಿಗೆ ಪೂರಕ ಶಕ್ತಿ ಮತ್ತು ಸಂಸ್ಕಾರ ತುಂಬಿ ಬೆಳೆಸಿದರೆ ಅದು ಜ್ಞಾನಾಂಕುರವಾಗಿ, ಸಮಾಜದ ಬೆಳಕಾಗಿ ಹೊರಹೊಮ್ಮುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಹೇಳಿದರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಮಾಡೆಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಜ್ಞಾನಾಂಕುರ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಗೆ ಸಾಂಪ್ರದಾಯಿಕ ಅಕ್ಷರಾಭ್ಯಾಸ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಧಾರ್ಮಿಕ ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಅಕ್ಷರಾಭ್ಯಾಸ ಮಾಡಿಸಿ ಮಕ್ಕಳಲ್ಲಿ ಸಂಸ್ಕಾರಗಳನ್ನು ಬಿತ್ತುವ ಕಾರ್ಯ ಶುಭಾರಂಭವಾಗಿದೆ. ಜ್ಞಾನಕ್ಕೆ ಜಗತ್ತನ್ನು ಗೆಲ್ಲುವ ಸಾಮರ್ಥ್ಯವಿದೆ. ಅಕ್ಷರ ದೀಕ್ಷೆಯಿಂದ ಬೆಳಕಿನ ಅನಾವರಣವಾಗಬೇಕಿದೆ ಎಂದರು.

ಸರ್ವಸ್ವವನ್ನೂ ತ್ಯಾಗ ಮಾಡಿ ಏನು ಗಳಿಸಿದಿರಿ ಎಂಬ ಪ್ರಶ್ನೆಗೆ ಜ್ಞಾನೋದಯವಾದ ಬುದ್ಧನು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು ಎಂಬ ಉದಾತ್ತ ಚಿಂತನೆಯ ಸಾರವನ್ನು ತಿಳಿಸುತ್ತಾನೆ. ಹಾಗೆಯೇ ಒಂದು ಸಾವಿರ ಕೆಜಿ ಅದಿರನ್ನು ಅನುಕ್ರಮವಾಗಿ ಶೋಧಿಸಿದರೆ ಮೂರು ಗ್ರಾಂ ಚಿನ್ನ ಪಡೆಯಲು ಸಾಧ್ಯ. ಇಂದು ಈ ಸಣ್ಣ ಬೀಜದಲ್ಲಿ ದೊಡ್ಡ ಮರವಿರುವುದು ಕಾಣುತ್ತಿಲ್ಲ. ಆದರೆ ಬೀಜ ಬಿತ್ತಿ ಪೋಷಿಸಿದರೆ ದೊಡ್ಡ ಮಾರವಾಗುತ್ತದೆ ಎಂದರು.

ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ ಮಾತನಾಡಿ, ಧಾರ್ಮಿಕ ಆಚರಣೆ ಹಾಗೂ ಸಂಸ್ಕೃತಿ ಸಂಕೇತವಾಗಿ ಇಂತಹ ಅಕ್ಷರಾಭ್ಯಾಸ ಕಾರ್ಯಕ್ರಮಗಳು ಇತರ ಸಂಸ್ಥೆಗಳಲ್ಲಿ ನಡೆಯುವುದು ವಿರಳ. ನಾನು ಹಿಂದೆ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆ ನೌಕರರು ಈ ಸಂಸ್ಥೆಯ ಉತ್ತಮ ಅಂಶಗಳನ್ನು ತಿಳಿಸಿ ಎಂದು ಕರೆ ಮಾಡಿದಾಗ ನಿಯೋಗದೊಡನೆ ಆಗಮಿಸಿ ಇಲ್ಲಿನ ಮಕ್ಕಳಿಗಿರುವ ಸಂಸ್ಕೃತಿ ಅರಿವು, ಶಿಸ್ತುಬದ್ಧ ಕಲಿಕೆ ಇತ್ಯಾದಿಗಳನ್ನು ಸ್ವತಃ ವೀಕ್ಷಿಸಿದ್ದೆ ಎಂದು ಉಲ್ಲೇಖಿಸಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿ, ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳ ಆಶೀರ್ವಾದದಿಂದ ನಮ್ಮ ಶಿಕ್ಷಣ ಟ್ರಸ್ಟ್ ವತಿಯಿಂದ ಪ್ರತಿವರ್ಷ ಜ್ಞಾನಾಂಕುರ ಕಾರ್ಯಕ್ರಮವನ್ನು ಆಯೋಜಿಸಿ ಪೂಜ್ಯರು ಅಕ್ಷರ ದೀಕ್ಷೆಯನ್ನು ನೀಡುತ್ತಿದ್ದಾರೆ. ಇದು ಸಂಸ್ಕೃತಿ ಸಂಸ್ಕಾರಗಳ ಕಲಿಕೆಗೆ ಧಾರ್ಮಿಕ ಬುನಾದಿಯಾಗಿದೆ ಎಂದರು.

ಕಲಾ ಅಧ್ಯಾಪಕ ಬೊಮ್ಮರಾಯಸ್ವಾಮಿ ವಿನ್ಯಾಸಗೊಳಿಸಿದ ವಿಶೇಷ ವೇದಿಕೆಯಲ್ಲಿ ಸುಮಾರು 108 ಮಕ್ಕಳಿಗೆ ಪೋಷಕರ ಸಮ್ಮುಖದಲ್ಲಿ ಅಕ್ಷರಾಭ್ಯಾಸ ನೆರವೇರಿತು. ವಿಶಿಷ್ಟ ನೃತ್ಯ, ಭಜನೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

ಕಾರ್ಯಕ್ರಮದಲ್ಲಿ ಶ್ರೀಮಠದ ಸತ್ಕೀರ್ತಿನಾಥ ಸ್ವಾಮೀಜಿ, ಶ್ರೀಶೈಲನಾಥ ಸ್ವಾಮೀಜಿ, ಬಿಜಿಎಸ್ ಮಾಡೆಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ವಿ.ಪುಟ್ಟಸ್ವಾಮಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ.ಎನ್. ಶಿಲ್ಪ, ತಾಲೂಕಿನ ಮೈಲಾರಪಟ್ಟಣ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಎನ್. ಮಂಜುನಾಥ್, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ರವಿಕುಮಾರ್, ಬಿ.ಇಡಿ ಮತ್ತು ಪಿಯು ಕಾಲೇಜಿನ ಅಧ್ಯಾಪಕರು, ಶಾಲಾ ಸಂಯೋಜಕರು ಸೇರಿದಂತೆ ಹಲವರು ಇದ್ದರು.