ಜನವರಿ ೧೩ರಂದು ಹಾಲಕೆರೆಯಲ್ಲಿ ಅಕ್ಷರ ಜಾತ್ರೆ: ಮುಪ್ಪಿನ ಬಸವಲಿಂಗ ಶ್ರೀಗಳು

| Published : Jan 09 2024, 02:00 AM IST

ಸಾರಾಂಶ

ಹಾಲಕೆರೆಯಲ್ಲಿ ಈ ಸಾರಿ ಶ್ರೀಅನ್ನದಾನೇಶ್ವರ ಮಠದಲ್ಲಿ ಅಕ್ಷರ ಜಾತ್ರೆ ಎಂಬ ವಿನೂತನ ಜಾತ್ರೆಯು ಜ.೧೩ರಂದು ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮಿಗಳು ಹೇಳಿದರು.

ನರೇಗಲ್ಲ: ಹಾಲಕೆರೆಯಲ್ಲಿ ಈ ಸಾರಿ ಶ್ರೀಅನ್ನದಾನೇಶ್ವರ ಮಠದಲ್ಲಿ ಅಕ್ಷರ ಜಾತ್ರೆ ಎಂಬ ವಿನೂತನ ಜಾತ್ರೆಯು ಜ.೧೩ರಂದು ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮಿಗಳು ಹೇಳಿದರು.

ಸಮೀಪದ ಹಾಲಕೆರೆ ಗ್ರಾಮದ ಶ್ರೀಮಠದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಾಲಕೆರೆಯ ಶ್ರೀಮಠದ ೧೭೩ನೆ ಜಾತ್ರಾ ಮಹೋತ್ಸವವು ಇದಾಗಿದ್ದು, ಇದೇ ಜ.೧೩ ಮತ್ತು ೧೪ರಂದು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದ ಜನತೆಗೆ ವಿದ್ಯೆ ಎಂಬುದು ಮರೀಚಿಕೆಯಾಗಿದ್ದ ಕಾಲದಲ್ಲಿ ಶ್ರೀಅನ್ನದಾನೇಶ್ವರ ಸಂಸ್ಥೆಯ ವತಿಯಿಂದ ಶ್ರೀಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ಎಂಬ ಸಂಸ್ಥೆಯನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೆ ಸ್ಥಾಪಿಸಿ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸಿದ ಕೀರ್ತಿ ನಮ್ಮ ಶ್ರೀಮಠದ ಸಂಸ್ಥೆಗೆ ಸಲ್ಲುತ್ತದೆ. ಅಕ್ಷರ ಎಂದರೆ ಕ್ಷಯವಿಲ್ಲದ್ದು ಎಂದರ್ಥ. ಇಂತಹ ಅಕ್ಷರವನ್ನು ಗ್ರಾಮೀಣರೆಲ್ಲರ ಬಾಳಿನಲ್ಲಿ ಬೆಳಗಿದ ಶ್ರೀಮಠದ ಗುರು ಪರಂಪರೆಯ ಸವಿ ನೆನಪಿಗಾಗಿ ಈ ಸಾರೆಯ ಜಾತ್ರಾ ಮಹೋತ್ಸವವನ್ನು ಅಕ್ಷರ ಜಾತ್ರೆ ಎಂದು ಕರೆದು, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.

೧೯೧೩ರಲ್ಲಿ ಶ್ರೀಗುರು ಅನ್ನದಾನೇಶ್ವರ ಮಹಾ ಶಿವಯೋಗಿಗಳವರು ಮೊಟ್ಟ ಮೊದಲು ಪಾಠಶಾಲೆಯನ್ನು ಸ್ಥಾಪಿಸಿ ಗ್ರಾಮೀಣ ಜನತೆಯ ಅಕ್ಷರ ಜ್ಞಾನಕ್ಕೆ ಮುನ್ನುಡಿಯನ್ನು ಬರೆದರು. ಅವರು ಅಂದು ಹಚ್ಚಿದ ಜ್ಞಾನದ ದೀಪವು ಇಂದಿಗೂ ಜಾಜ್ವಲ್ಯಮಾನವಾಗಿ ಉರಿಯುತ್ತ ಲಕ್ಷಾಂತರ ಜನರ ಬಾಳಿನಲ್ಲಿ ಬೆಳಕನ್ನು ಬೀರುತ್ತಿದೆ. ಇದರ ಸವಿ ನೆನಪಿಗಾಗಿಯೆ ಈ ಸಾರೆಯ ಜಾತ್ರೆಯನ್ನು ಅಕ್ಷರ ಜಾತ್ರೆಯನ್ನಾಗಿ ಆಚರಿಸಲಾಗುತ್ತಿದೆ.

ಈ ಸಾರೆಯ ಅಕ್ಷರ ಜಾತ್ರೆಯು ವಿಶಿಷ್ಠತೆಯಿಂದ ಕೂಡಿದ್ದು, ಜ.೧೩ರಂದು ನಡೆಯುವ ಅಕ್ಷರ ಜಾತ್ರೆ ಉದ್ಘಾಟನೆಯ ಸಂದರ್ಭದಲ್ಲಿ ನಾಡಿನ ಖ್ಯಾತ ನಗೆ ಭಾಷಣಕಾರ ಗಂಗಾವತಿಯ ಬೀಚಿ ಎಂದೇ ಖ್ಯಾತರಾದ ಪ್ರಾಣೇಶ್, ಬಸವರಾಜ ಮಹಾಮನಿ, ನರಸಿಂಹ ಜೋಷಿ ಉಪಸ್ಥಿತರಿರುತ್ತಾರೆ. ಅಂದು ಸೇರುವ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ಅವರು ಪ್ರೇರಣಾತ್ಮಕ ನುಡಿಗಳನ್ನು ಹೇಳಲಿದ್ದಾರೆ. ಜೊತೆಗೆ ನಮ್ಮ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದಲೆ ಫುಡ್ ಫೆಸ್ಟ್ ಎಂಬ ವಿನೂತನ ಆಹಾರ ಮೇಳವೂ ಸಹ ಜಾತ್ರೆಯಲ್ಲಿ ಜರುಗಲಿದೆ. ಈ ವಿಶಿಷ್ಠಮಯವಾದ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಅಕ್ಷರ ಜಾತ್ರೆಗೆ ಸಂಬಂಧಿಸಿದ ಕರ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.

ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್.ಗೌಡರ, ಉಪನ್ಯಾಸಕ ಎಫ್.ಎನ್.ಹುಡೇದ, ಮುಖ್ಯ ಶಿಕ್ಷಕ ಎಂ.ವಿ.ವೀರಾಪೂರ, ಶಿಕ್ಷಕ ಎಂ.ವಿ. ಬಿಂಗಿ, ನ್ಯಾಯವಾದಿ ರಾಜಶೇಖರಗೌಡ ಪಾಟೀಲ, ತಾಲೂಕು ಕಸಾಪ ಅಧ್ಯಕ್ಷ ಅಮರೇಶ ಗಾಣಿಗೇರ, ಮಲ್ಲಿಕಾರ್ಜುನಪ್ಪ ಮೆಣಸಗಿ, ಹೊನ್ನಪಗೌಡ ಪೊಲೀಸ್‌ಪಾಟೀಲ, ಶರಣಪ್ಪ ಕರಮುಡಿ, ಅಶೋಕ ಮಾಳಗೌಡ್ರ, ಬಸವರಾಜ ಕೆಂಚರೆಡ್ಡಿ, ಹನುಮರೆಡ್ಡಿ ಹಳ್ಳಿ, ಬಸವರಾಜ ಮೇಟಿ ಮುಂತಾದವರು ಇದ್ದರು.