ಸಾರಾಂಶ
ಶಿಕ್ಷಣ ಸಮ ಸಮಾಜದ ರಚನೆಗೆ ಪ್ರೇಕರ ಶಕ್ತಿ, ಅಕ್ಷರ ತಮ್ಮೊಳೊಗಿನ ಅರಿವನ್ನು ವಿಸ್ತರಿಸಿ ಆತ್ಮವಿಶ್ವಾಸ ಬೆಳಸಿ ಅಜ್ಞಾನವನ್ನು ನೀಗಿಸಿ ವಿಶ್ವ ಪ್ರಜ್ಞೆಯನ್ನು ಬೆಳಸುತ್ತದೆ ಎಂದು ತುಮುಲ್ ನಿರ್ದೇಶಕ ಬಿ.ನಾಗೇಶಬಾಬು ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಶಿಕ್ಷಣ ಸಮ ಸಮಾಜದ ರಚನೆಗೆ ಪ್ರೇಕರ ಶಕ್ತಿ, ಅಕ್ಷರ ತಮ್ಮೊಳೊಗಿನ ಅರಿವನ್ನು ವಿಸ್ತರಿಸಿ ಆತ್ಮವಿಶ್ವಾಸ ಬೆಳಸಿ ಅಜ್ಞಾನವನ್ನು ನೀಗಿಸಿ ವಿಶ್ವ ಪ್ರಜ್ಞೆಯನ್ನು ಬೆಳಸುತ್ತದೆ ಎಂದು ತುಮುಲ್ ನಿರ್ದೇಶಕ ಬಿ.ನಾಗೇಶಬಾಬು ತಿಳಿಸಿದರು.ತಾಲೂಕಿನ ಕಸಬಾ ವ್ಯಾಪ್ತಿಯ ಗೋಪಗೊಂಡನಹಳ್ಳಿಯಲ್ಲಿ ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಏರ್ಪಡಿಸಿದ್ದ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಂಪ್ಯೂಟರ್ ಯುಗದಲ್ಲಿ ಮಕ್ಕಳಿಗೆ ಶಿಕ್ಷಣ ಅತಿ ಮುಖ್ಯ. ಶಿಕ್ಷಣದಿಂದ ಮಾತ್ರ ಎಲ್ಲ ಸಂಪತ್ತನ್ನು ಪಡೆಯಬಹುದು. ಶಿಕ್ಷಣವಿಲ್ಲದೆ ಗೌರವಯುತ ಸಮಾಜ ರಚನೆ ಸಾಧ್ಯವಾಗದು. ಆದ್ದರಿಂದ ಜನ್ಮ ಕೊಡುವುದಷ್ಟೇ ಪೋಷಕರ ಕರ್ತವ್ಯವಲ್ಲ. ಅವರಿಗೆ ಯೋಗ್ಯ ಮಾರ್ಗದರ್ಶನ ನೀಡಿ ಸಮಾಜದ ಅಭಿವೃದ್ಧಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದೇಶದ ಪ್ರಗತಿ ಬಗ್ಗೆ ಆಸಕ್ತಿ ಮೂಡಿಸಬೇಕು. ಬಾಲ್ಯದಿಂದಲೇ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಕಲಿಸಿ ದೇಶದ ಯೋಗ್ಯ ಸತ್ಪ್ರಜೆಯನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ ಎಂದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಕ್ಷೇತ್ರದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದು, ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಗುಣಮಟ್ಟದ ಶಿಕ್ಷಣ ಕಲಿತು ಹೆತ್ತವರಿಗೆ ಗುರು ಹಿರಿಯರಿಗೆ ಕೀರ್ತಿ ತರಬೇಕು ಎಂದು ತಿಳಿಸಿ, ಈ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘವನ್ನು ಸ್ಥಾಪಿಸಲು ಪ್ರಸ್ತುತ ಸರ್ವೆ ಕಾರ್ಯ ಮಾಡಿದ್ದು, ಮುಂಬರುವ ದಿನಗಳಲ್ಲಿ ಸಹಕಾರಿ ಸಂಘ ಸ್ಥಾಪಿಸಲಾಗುವುದು ಎಂದರು.ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಈ ನೆಲದ ಶ್ರಮಜೀವಿಗಳು ತಳ ಪದರದವರ ವಂಶಜರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂದಾಲೋಚನೆಯಿಂದ ರೂಪಿತಗೊಂಡ ಸಂವಿಧಾನ ಎಲ್ಲ ಜನಾಂಗದ ಹಿತ, ರಕ್ಷಣೆಯನ್ನು ಕಾಪಾಡಿದೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕ ಎಂ.ವೈ.ಶಿವಕುಮಾರ್, ತಾಲೂಕು ಸಂಚಾಲಕ ಹನುಮಂತರಾಯಪ್ಪ, ಸಂಘಟನಾ ಸಂಚಾಲಕ ವಿಜಯಕುಮಾರ್, ತಿಪ್ಪೇಸ್ವಾಮಿ, ಎಸ್.ಸಂಜೀವಯ್ಯ, ನಗರ ಸಂಚಾಲಕ ನಟರಾಜ್, ರವಿಕುಮಾರ್, ನವೀನ್, ವೆಂಕಟೇಶ್ ಕಸಬಾ ಸಂಚಾಲಕ ಗೋವಿಂದರಾಜು, ಸಂತೋಷ್ ಮತ್ತು ಗ್ರಾಮಸ್ಥರು ಇದ್ದರು.