ಶ್ರದ್ಧಾಭಕ್ತಿಯಿಂದ ನಡೆದ ಅಕ್ಷತಾರ್ಪಣೆ

| Published : Jan 15 2024, 01:45 AM IST

ಸಾರಾಂಶ

ಮಾಂಗಲ್ಯಧಾರಣೆ ಅಕ್ಷತಾರೋಪಣ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೆರವೇರಿಸಿದರು. ಸಂಪ್ರದಾಯದಂತೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಚರಿತ್ರೆ ಓದುವು ಕಾರ್ಯಕ್ರಮದೊಂದಿಗೆ ಶುಭ ಮಾಂಗಲ್ಯದ ಧಾರಣ, ಅಕ್ಷತಾರೋಪಣ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ತಮ್ಮ ಸಂಬಂಧಿಕರೊಡನೆ ಭಾಗಿಯಾದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿವಿಧ ಪುಷ್ಪಗಳಿಂದ ಅಲಂಕೃತ ಸಪ್ತ ನಂದಿಕೋಲುಗಳ ಸಾನ್ನಿಧ್ಯ, ಪಂಚ ಕಮೀಟಿ ಸದಸ್ಯರ ಸಮ್ಮುಖ, ಶ್ರದ್ಧಾಭಕ್ತಿಯೊಂದಿಗೆ ಮೊಳಗಿದ ವೇದಮಂತ್ರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಇಲ್ಲಿನ ಶ್ರೀ ಸಿದ್ದೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧರಾಮನ ಯೋಗ ದಂಡದೊಂದಿಗೆ ಭಾನುವಾರ ಮಧ್ಯಾಹ್ನ 12.30ಕ್ಕೆ ಕುಂಬಾರ ಗುಂಡಮ್ಮಳ ಅಕ್ಷತಾರ್ಪಣೆ ಬೋಗಿ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಮಾಂಗಲ್ಯಧಾರಣೆ ಅಕ್ಷತಾರೋಪಣ ಕಾರ್ಯಕ್ರಮವನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನೆರವೇರಿಸಿದರು. ಸಂಪ್ರದಾಯದಂತೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಚರಿತ್ರೆ ಓದುವು ಕಾರ್ಯಕ್ರಮದೊಂದಿಗೆ ಶುಭ ಮಾಂಗಲ್ಯದ ಧಾರಣ, ಅಕ್ಷತಾರೋಪಣ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ತಮ್ಮ ಸಂಬಂಧಿಕರೊಡನೆ ಭಾಗಿಯಾದರು.

ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರಮನ್‌ ಬಸಯ್ಯಾ ಹಿರೇಮಠ, ಕಾರ್ಯದರ್ಶಿ ಬಿ.ಎಸ್. ಸುಗೂರ, ಸದಾನಂದ ದೇಸಾಯಿ, ಕೋಶ್ಯಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಎಸ್. ಗಚ್ಚಿನಮಠ, ಅಮೃತ ತೋಸನಿವಾಲ, ಎಂ.ಪಾಟೀಲ ಬಬಲಾದಿ, ಪ್ರೇಮಾನಂದ ಬಿರಾದಾರ, ರಾಹುಲ ಜಾಧವ, ಪಾಂಡು ಸಾಹುಕಾರ ದೊಡಮನಿ, ಸದಾಶಿವ ಗುಡ್ಡೋಡಗಿ, ಎಂ.ಎನ್.ಗೋಲಾಯಿ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ, ಎಂ.ಎಸ್. ಕರಡಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಮಲ್ಕಪ್ಪ ಗಾಣಿಗೇರ, ಬಸವರಾಜ ಗೊಳಸಂಗಿ, ಶ್ರೀಶೈಲ ದೇವುರ, ವಿಶ್ವನಾಥ ಭೋರಗಿ, ಬಸವರಾಜ ಬೆಲ್ಲದ, ಸಾಯಿಬಣ ಭೋವಿ, ವಿಜಯಕುಮಾರ ಡೋಣಿ, ಮುರಗೆಪ್ಪ ಕಾಫಸೆ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಚಂದು ಹುಂಡೆಕಾರ, ವಿಶ್ವನಾಥ ನೀಲಾ, ಬಸವರಾಜ ಗಣಿ, ಚಂದ್ರು ಚೌಧರಿ, ನಾಗಪ್ಪ ಗುಗ್ಗರಿ, ಅನಿಲ ಸಬರದ, ಪ್ರಶಾಂತ ಚೌಧರಿ, ವಿರೇಶ ವಾಲಿ, ದ್ಯಾಮಗೊಂಡಪ್ಪ ಬೆನಕನಳ್ಳಿ, ಆನಂದ ಪಾಟೀಲ, ಸುರೇಶ ಇಟ್ಟಗಿ ಮುಂತಾದ ಪ್ರಮುಖರು ಹಾಗೂ ಭಕ್ತರು ಹಾಜರಿದ್ದರುಧಾರ್ಮಿಕ ಹಿನ್ನೆಲೆ:

ಅಕ್ಷತಾರ್ಪಣೆ - ಭೋಗಿ ಕಾರ್ಯಕ್ರಮಕ್ಕೆ ಧಾರ್ಮಿಕ ಹಿನ್ನೆಲೆ ಇದೆ. ಶಿವಯೋಗಿ ಸಿದ್ಧರಾಮೇಶ್ವರರು ಬಾಲ ಬ್ರಹ್ಮಾಚಾರಿಯಾಗಿದ್ದರು, ಅವರ ಕಾಯಕ ಯೋಗದ ನಿಷ್ಠೆ ಕಂಡು ಸಾವಿರಾರು ಶರಣ, ಶರಣೆಯರು ಅವರ ಶಿಷ್ಯತ್ವ ಪಡೆದರು. ಅವರಲ್ಲಿ ಕುಂಬಾರ ಗುಂಡವ್ವ ಸಹ ಒಬ್ಬರು. ಅತ್ಯಂತ ಶ್ರದ್ಧೆಯಿಂದ ಕಾಯಕ ನಿರ್ವಹಿಸುತ್ತಿದ್ದ ಕುಂಬಾರ ಗುಂಡವ್ವ ಅವರ ಕಾಯಕ ನಿಷ್ಠೆ ಮೆಚ್ಚಿ ನಿನಗೇನು ಬೇಕು ಕೇಳು ಎಂದು ವರ ಕೇಳಿದರಂತೆ. ಅದಕ್ಕೆ ಗುಂಡವ್ವ, ಸ್ವಾಮಿ ನಾನು ನಿಮ್ಮ ಚರಣದಾಸಿಯಾಗಬೇಕು, ನನ್ನನ್ನು ತಮ್ಮ ಧರ್ಮಪತ್ನಿಯಾಗಿ ಸ್ವೀಕರಿಸಿ ಮುತ್ತೈದೆ ಭಾಗ್ಯ ಕರುಣಿಸಿ ಎಂದು ಕೇಳಿದರಂತೆ.

ಅಖಂಡ ಬ್ರಹ್ಮಚಾರಿಯಾಗಿದ್ದ ಸಿದ್ಧರಾಮರು ಮದುವೆಯಾಗುವುದು ಸಾಧ್ಯವಿರಲಿಲ್ಲ. ಅದೇ ವೇಳೆಗೆ ತನ್ನ ಬಗ್ಗೆ ಅಪಾರ ಅನುರಾಗ ಹೊಂದಿದ್ದ ಗುಂಡವ್ವಳ ಮನಸ್ಸು ನೋಯಿಸುವುದಕ್ಕೂ ಅವರಿಗೆ ಮನಸ್ಸಾಗಲಿಲ್ಲ. ಈ ಹಿನ್ನೆಲೆ ನಾನು ಈ ಜನ್ಮದಲ್ಲಿ ಮದುವೆಯಾಗುವುದಿಲ್ಲ, ಇದು ನನ್ನ ಸಂಕಲ್ಪ, ನೀನು ನನ್ನ ಯೋಗದಂಡದೊಂದಿಗೆ ವಿವಾಹವಾಗಬಹುದು ಎಂದು ತಿಳಿಸಿದರು. ಈ ಮಾತನ್ನು ಅಕ್ಷರಶ: ಪಾಲಿಸಿದ ಕುಂಬಾರ ಗುಂಡವ್ವ ಶಾಸ್ತ್ರಬದ್ಧವಾಗಿ ಯೋಗದಂಡದೊಂದಿಗೆ ವಿವಾಹವಾಗುತ್ತಾರೆ.

ಅನಂತರ ವಾಸ್ತವ ಸ್ಥಿತಿ ಅವರ ಅರಿವಿಗೆ ಬರುತ್ತದೆ. ಮದುವೆಯಾದರೂ ತಾನು ಪತಿ ಜೊತೆ ಬಾಳಲು ಸಾಧ್ಯವಿಲ್ಲ, ಒತ್ತಾಯ ಮಾಡಿದರೆ ಶ್ರೀ ಸಿದ್ಧರಾಮರ ಕಾಯಕ ಯೋಗಕ್ಕೆ ಭಂಗ ಬರುತ್ತದೆ. ಅದನ್ನು ತಪ್ಪಿಸಿಕೊಳ್ಳಬೇಕೆಂದು ಗುಂಡವ್ವ ಚಿತೆಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಆತ್ಮಾಹುತಿ ಮಾಡಿಕೊಳ್ಳುತ್ತಾರೆ. ಈ ದೈವಿಕ ಪ್ರೇಮಕಥೆಯ ಸ್ಮರಣಾರ್ಥವಾಗಿ ಭೋಗಿಯ ಕೊನೆಯ ದಿನ ಸಿದ್ಧರಾಮರ ಯೋಗದಂಡದೊಂದಿಗೆ ಕುಂಬಾರ ಕನ್ಯೆಯ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಗುತ್ತದೆ.