ಅಳದಂಗಡಿ ಮಹಾಗಣಪತಿ ಕ್ಷೇತ್ರ: ಪ್ರತಿಷ್ಠಾ ವರ್ಧಂತಿ ಸಂಪನ್ನ

| Published : Feb 09 2025, 01:31 AM IST

ಸಾರಾಂಶ

ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಎರಡನೇ ವರ್ಷದ ಪ್ರತಿಷ್ಠಾ ವರ್ಧಂತಿ ಶುಕ್ರವಾರ ವಿಜೃಂಭಣೆಯಿದ ನೆರವೇರಿತು. ಪೊಳಲಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ತಂತ್ರಿವರ್ಯತ್ವದಲ್ಲಿ, ಪ್ರಧಾನ ಅರ್ಚಕ ಸೋಮನಾಥ ಮಯ್ಯ ಉಪಸ್ಥಿತಿಯಲ್ಲಿ ಬೆಳಗ್ಗೆ ಮಹಾಗಣಪತಿಗೆ 12 ತೆಂಗಿನಕಾಯಿ ಗಣಹವನ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಎರಡನೇ ವರ್ಷದ ಪ್ರತಿಷ್ಠಾ ವರ್ಧಂತಿ ಶುಕ್ರವಾರ ವಿಜೃಂಭಣೆಯಿದ ನೆರವೇರಿತು.

ಪೊಳಲಿ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರ ತಂತ್ರಿವರ್ಯತ್ವದಲ್ಲಿ, ಪ್ರಧಾನ ಅರ್ಚಕ ಸೋಮನಾಥ ಮಯ್ಯ ಅವರ ಉಪಸ್ಥಿತಿಯಲ್ಲಿ ಬೆಳಗ್ಗೆ ಮಹಾಗಣಪತಿಗೆ 12 ತೆಂಗಿನಕಾಯಿ ಗಣಹವನ, 25 ಕಲಶಾಭಿಷೇಕ, ಹವನ, ಪ್ರಸನ್ನ ಪೂಜೆ, ಅಪ್ಪ, ಪಂಚಕಜ್ಜಾಯ, ಮಹಾಮಂಗಳಾರತಿ ಸೇವೆಗಳು ನಡೆದವು. ಮಧ್ಯಾಹ್ನ ಭೋಜನ ಪ್ರಸಾದವನ್ನು ನೂರಾರು ಭಕ್ತರು ಸ್ವೀಕರಿಸಿದರು. ಸಂಜೆ ಶ್ರೀರಂಗ ಪೂಜೆಯು ಸಂಪನ್ನಗೊಂಡಿತು. ಬಳಿಕ ದೇವರ ಬಲಿ ಉತ್ಸವ ಚೆಂಡೆ, ವಾದ್ಯ, ಕೊಂಬು ಇತ್ಯಾದಿ ವಾದನಗಳೊಂದಿಗೆ ನೆರವೇರಿತು. ಉತ್ಸವದ ಸಂದರ್ಭ ಸಾವಿರಾರು ಭಕ್ತ ಬಂಧುಗಳು ಪಾಲ್ಗೊಂಡಿದ್ದರು.

ಸನಿಹದ ಶ್ರೀ ಸೋಮನಾಥೇಶ್ವರೀ ದೇವಿಗೆ ಜನವರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಶ್ರೀ ಮಹಾಗಣಪತಿ ದೇವಸ್ಥಾನ ಅಭಿವೃದ್ಧಿ ಹೊಂದಿದ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಹಿಂದೆ ಅವರ ಇಚ್ಛೆಯಂತೆ ಗಣಪತಿ ದೇವರ ಆಕರ್ಷಕ ನೂತನ ಮೂರ್ತಿಯನ್ನು ಸಿದ್ಧಪಡಿಸಿ ಪ್ರತಿಷ್ಠಾಪಿಸಲಾಗಿತ್ತು.

ಅರ್ಚಕ ಪ್ರವೀಣ ಮಯ್ಯ, ಪ್ರಕಾಶ ಹೊಳ್ಳ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು. ಆಡಳಿತಾಧಿಕಾರಿ ಅಳದಂಗಡಿಯ ಪಶುವೈದ್ಯ ಪರಿವೀಕ್ಷಕ ರಮೇಶ್ ಉಪಸ್ಥಿತರಿದ್ದರು.