ಸಾರಾಂಶ
ಶಶಿಕಾಂತ ಮೆಂಡೆಗಾರ
ವಿಜಯಪುರ ; ಪಂಚ ನದಿಗಳ ಬೀಡು, ಆದಿಲಶಾಹಿಗಳು ಆಳಿರುವ ನಾಡು, ಬಸವನಾಡು ಎಂದೆಲ್ಲ ಕರೆಸಿಕೊಳ್ಳುವ ವಿಜಯಪುರ ಲೋಕಸಭಾ ಮೀಸಲು (ಎಸ್ಸಿ) ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿಯೇ ಸಾಗಿದೆ. ಸತತ ಐದು ಬಾರಿ ಗೆದ್ದಿರುವ ಬಿಜೆಪಿ, ಈ ಬಾರಿ ಡಬಲ್ ಹ್ಯಾಟ್ರಿಕ್ ಸಾಧಿಸಬೇಕೆಂಬ ಛಲ ಇಟ್ಟುಕೊಂಡಿದೆ. ಇದೇ ವೇಳೆ, ತನ್ನ ಹಳೆ ಕ್ಷೇತ್ರವನ್ನು ಮರು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. 2008ರಿಂದ ವಿಜಯಪುರ ಎಸ್ಸಿ ಮೀಸಲು ಕ್ಷೇತ್ರವಾಯಿತು. ಈ ಮೀಸಲು ಕ್ಷೇತ್ರದಲ್ಲಿ ಎಡ-ಬಲ ಸಮುದಾಯಗಳ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಬಿಜೆಪಿ ಎಡ ಸಮುದಾಯದ ರಮೇಶ ಜಿಗಜಿಣಗಿಗೆ ಅವಕಾಶ ಕಲ್ಪಿಸಿದ್ದು, ಕಾಂಗ್ರೆಸ್ ಬಲ ಸಮುದಾಯದ ರಾಜು ಆಲಗೂರಗೆ ಮಣೆ ಹಾಕಿದೆ. ಹೀಗಾಗಿ, ನೇರವಾಗಿ ಎಡ-ಬಲ ಸಮುದಾಯಗಳ ನಾಯಕರ ಮಧ್ಯೆಯೇ ತುರುಸಿನ ಫೈಟ್ ನಡೆಯುವ ಸಾಧ್ಯತೆ ಇದೆ.
ಕ್ಷೇತ್ರದ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಉಳಿದ ಇನ್ನೆರಡು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್ ಸಮನಾಗಿ ಒಂದೊಂದು ಸ್ಥಾನಗಳನ್ನು ಹಂಚಿಕೊಂಡಿವೆ. ಕಳೆದ ಬಾರಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾಗಿದ್ದರಿಂದ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಈ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದರಿಂದ ಬಿಜೆಪಿ ಅಭ್ಯರ್ಥಿಯೇ ಕಣದಲ್ಲಿದ್ದಾರೆ.
ಜಿಲ್ಲೆಯಿಂದ ಎಂ.ಬಿ.ಪಾಟೀಲ್ ಹಾಗೂ ಶಿವಾನಂದ ಪಾಟೀಲ ಸಚಿವರಾಗಿದ್ದಾರೆ. ಜೊತೆಗೆ, ನಾಲ್ವರು ಶಾಸಕರು, ವಿಧಾನ ಪರಿಷತ್ ಸದಸ್ಯರು ಹೆಚ್ಚಾಗಿರುವ ಕಾರಣ ಕ್ಷೇತ್ರದ ಗೆಲುವು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯಾಗಿದೆ. ಇನ್ನೊಂದೆಡೆ, ಜಿಲ್ಲೆ ಸೇರಿ ರಾಜ್ಯದಲ್ಲಿ ಎಲ್ಲಿಯೂ ಬಂಜಾರ ಸಮಾಜಕ್ಕೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್, ಆ ಸಮುದಾಯದ ಕೋಪಕ್ಕೆ ಕಾರಣವಾಗಿದೆ. ಪ್ರತಿ ಬಾರಿ ಬಂಜಾರ ಸಮಾಜದವರಿಗೆ ಟಿಕೆಟ್ ಸಿಗುತ್ತಿದ್ದ ಹಿನ್ನೆಲೆಯಲ್ಲಿ ಎಡ-ಬಲ ಸಮುದಾಯದ ಓಟುಗಳನ್ನೆಲ್ಲ ಬಾಚಿಕೊಳ್ಳುತ್ತಿದ್ದ ಬಿಜೆಪಿಗೆ, ಈ ಬಾರಿ ರಾಜು ಆಲಗೂರ ಮುಳುವಾಗಿದ್ದಾರೆ.
ಬಿಜೆಪಿ, ಕಳೆದ ಐದು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸುತ್ತಿದೆ. ಎರಡು ಬಾರಿ ಬಸನಗೌಡ ಪಾಟೀಲ್ ಯತ್ನಾಳ ಗೆದ್ದಿದ್ದರೆ, ಮೂರು ಬಾರಿ ರಮೇಶ ಜಿಗಜಿಣಗಿ ಗೆದ್ದಿದ್ದಾರೆ. ಇನ್ನು, 1998ರಲ್ಲಿ ಎಂ.ಬಿ.ಪಾಟೀಲರು ಗೆದ್ದಿದ್ದೇ ಕಾಂಗ್ರೆಸ್‌ಗೆ ಕೊನೆಯ ಗೆಲುವು.
ಕ್ಷೇತ್ರ ಪರಿಚಯ:
ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ 8 ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಐದು ಬಾರಿ ಗೆಲುವು ಸಾಧಿಸಿದೆ. ಸ್ವತಂತ್ರ ಪಕ್ಷ 2 ಬಾರಿ ಮತ್ತು ಜನತಾದಳ ಒಂದು ಬಾರಿ ಗೆಲುವು ಸಾಧಿಸಿದೆ. 2008ರವರೆಗೆ ಚಿಕ್ಕೋಡಿ ಮೀಸಲು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿದ್ದ ರಮೇಶ ಜಿಗಜಿಣಗಿ, 2008ರಿಂದ ವಿಜಯಪುರ ಕ್ಷೇತ್ರ ಮೀಸಲಾಗಿ ಪರಿವರ್ತನೆಯಾಗಿದ್ದರಿಂದ ಇಲ್ಲಿಂದಲೇ ಸ್ಪರ್ಧಿಸುತ್ತಿದ್ದು, ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಈಗ ನಾಲ್ಕನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ಮಧ್ಯೆ, ಕಳೆದ 25 ವರ್ಷಗಳಿಂದ ಕ್ಷೇತ್ರವನ್ನು ಕಳೆದುಕೊಂಡಿರುವ ಕಾಂಗ್ರೆಸ್, ಪ್ರೊ.ರಾಜು ಆಲಗೂರ ಅವರನ್ನು ಕಣಕ್ಕಿಳಿಸಿ, ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.
ಅಭ್ಯರ್ಥಿಗಳ ಪರಿಚಯ:
ರಮೇಶ ಜಿಗಜಿಣಗಿ , ಬಿಜೆಪಿ: ಹಾಲಿ ಸಂಸದ ರಮೇಶ ಜಿಗಜಿಣಗಿ ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಇದುವರೆಗೂ ಮೂರು ಬಾರಿ ಶಾಸಕರು, ಆರು ಬಾರಿ ಸಂಸದರಾಗಿದ್ದಾರೆ. 1975ರಲ್ಲಿ ರಾಜಕೀಯ ಪ್ರವೇಶಿಸಿದ ಜಿಗಜಿಣಗಿ, ಎರಡು ಬಾರಿ ಮಾತ್ರ ಸೋಲು ಅನುಭವಿಸಿದ್ದಾರೆ. ಗೃಹ ಇಲಾಖೆ, ಅಬಕಾರಿ, ಕ್ರೀಡಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಬರೋಬ್ಬರಿ ಎಂಟು ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 1983, 1984, 1989ರಲ್ಲಿ ಮೂರು ಬಾರಿ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1998, 1999, 2004ರಲ್ಲಿ ಮೂರು ಬಾರಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರೆ, 2009, 2014, 2019ರಲ್ಲಿ ವಿಜಯಪುರ ಮೀಸಲು ಕ್ಷೇತ್ರದಿಂದ ಸತತ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಪ್ರೊ.ರಾಜು ಆಲಗೂರ, ಕಾಂಗ್ರೆಸ್:
ದಶಕಗಳ ಕಾಲ ಪ್ರೊಫೆಸರ್ ಆಗಿ ವೃತ್ತಿ. ಮೂರು ಬಾರಿ ಶಾಸಕರಾಗಿರುವ ಪ್ರೊ.ಎಚ್.ಆರ್.ಆಲಗೂರ ಅವರು ಜಿಲ್ಲೆಯಾದ್ಯಂತ ರಾಜು ಆಲಗೂರ ಎಂದೇ ಚಿರಪರಿಚಿತ. ಜಿಲ್ಲೆಯಲ್ಲಿ ಸರಳ ಹಾಗೂ ಸಜ್ಜನಿಕೆ ರಾಜಕಾರಣಿ ಎನಿಸಿಕೊಂಡಿದ್ದಾರೆ. M.A., M.Phil ಮಾಡಿರುವ ರಾಜು ಆಲಗೂರ, ಪರಿಶಿಷ್ಟ ಜಾತಿಗೆ (ಚಲವಾದಿ ಬಲ) ಸೇರಿದವರಾಗಿದ್ದು, ಸಮಾಜಸೇವೆ, ಕೃಷಿಯಲ್ಲಿ ತೊಡಗಿದ್ದಾರೆ. ಹಿಂದೆ ಮೀಸಲು ಬಳ್ಳೊಳ್ಳಿ ಕ್ಷೇತ್ರವಿದ್ದಾಗ 1999ರಲ್ಲಿ ಒಂದು ಬಾರಿ ಹಾಗೂ ಕ್ಷೇತ್ರ ವಿಂಗಡಣೆ ಆದ ಬಳಿಕ ನಾಗಠಾಣ ಮೀಸಲು ಕ್ಷೇತ್ರದಿಂದ 2013ರಲ್ಲಿ ಶಾಸಕರಾಗಿದ್ದರು. 2013 ರಿಂದ 2018 ರ ನಡುವೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಮತದಾರರು:
ಪುರುಷರು.......9,86,778.
ಮಹಿಳೆಯರು...9,56,578.ಇತರರು.........
210.ಒಟ್ಟು...........…
19,43,566.
ಜಾತಿವಾರು ಲೆಕ್ಕಾಚಾರ:
ಲಿಂಗಾಯತರು ಸರಿ ಸುಮಾರು 6.10 ಲಕ್ಷ, ಎಸ್ಸಿ-ಎಸ್ಟಿ 6 ಲಕ್ಷ, ಮುಸ್ಲಿಮರು 3.15 ಲಕ್ಷ, ಕುರುಬರು 3 ಲಕ್ಷ, ಇತರರು 1.17 ಲಕ್ಷವಿದ್ದಾರೆ. ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಉಳಿದಂತೆ, ಅಹಿಂದ ಮತಗಳು ಸಾಕಷ್ಟು ಪ್ರಭಾವ ಬೀರಲಿವೆ. 2019ರ ಚುನಾವಣೆ ಫಲಿತಾಂಶ:
ರಮೇಶ ಜಿಗಜಿಣಗಿ - ಬಿಜೆಪಿ - ಗೆಲುವು - 6,35,867.ಸುನಿತಾ ಚವ್ಹಾಣ - ಜೆಡಿಎಸ್ - ಸೋಲು - 3,77,829.