ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ನವರು ಪಾಲ್ಗೊಂಡಿರಲಿಲ್ಲ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯದ ಇಬ್ಬರು ಬಚ್ಚಲು ಬಾಯಿ ಮಂತ್ರಿಗಳು ಲಂಗುಲಾಗಮಿಲ್ಲದೇ ಮಾತಾಡುತ್ತಾರೆ. ಭಗವಂತ ನಾಲಿಗೆ ಕೊಟ್ಟಿದ್ದಾನೆಂದು ಏನೋನೊ ಒದರುತ್ತಾರೆ ಎಂದು ಕಿಡಿಕಾರಿದರು.ನಗರದ ಕಲಾಮಂದಿರದಲ್ಲಿ ಸಾವರ್ಕರ್ ಪ್ರತಿಷ್ಠಾನವು ಮಂಗಳವಾರ ಸಂಜೆ ಆಯೋಜಿಸಿದ್ದ ಸಾವರ್ಕರ್ ಕಲ್ಪನೆಯ ಭಾರತೀಯ ಸೇನೆ ಮತ್ತು ಆಪರೇಷನ್ ಸಿಂದೂರ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎರಡು ರೀತಿಯ ಸತ್ಯಗಳಿದ್ದವು. ಒಂದು ಅನುಕೂಲವಾದ ಸತ್ಯ. ಅನಾನುಕೂಲಕರವಾದ ಸತ್ಯ. ಸತ್ಯವನ್ನು ಮರೆಮಾಚುವ ಕೆಲಸವನ್ನು ನೂರಾರು ವರ್ಷಗಳಿಂದ ಮಾಡಲಾಯಿತು. ಅಸಹಕಾರ ಚಳವಳಿಯಿಂದ ಸ್ವಾತಂತ್ರ್ಯ ಬಂದಿತು. ಆದರೆ ಸ್ವಾತಂತ್ರ್ಯಕ್ಕಾಗಿ ಆತ್ಮ ಅರ್ಪಣೆ ಮಾಡಿಕೊಂಡವರನ್ನು ಮರೆಮಾಚಲಾಯಿತು. ಸ್ವಾತಂತ್ರ್ಯ ಪೂರ್ವದಿಂದಲೂ ಸಾವರ್ಕರ್ ಅವರನ್ನು ನಿರ್ಲಕ್ಷಿಸಿ, ಅವರ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಯಿತು. ಆದರೂ ಸಾವರ್ಕರ್ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದರು. ಅವಗಣನೆ ಅಪಪ್ರಚಾರದ ನಡುವೆಯೂ ಸದಾ ಕಾಲಕ್ಕೂ ಜೀವಂತವಾಗಿ ಅವರಿದ್ದಾರೆ ಎಂದರು. ಸಾವರ್ಕರ್ ಸ್ವಾತಂತ್ರ್ಯ ಭಾರತದಲ್ಲಿ ಗಡಿಯನ್ನು ಬಲಪಡಿಸಲು ಒತ್ತಾಯಿಸಿದರು. ಯುವಕರು ಸೇನೆ ಸೇರಲು ಪ್ರೇರೇಪಿಸಿದರು. ಶಾಲೆಗಳಲ್ಲಿ ಮಕ್ಕಳನ್ನು ಸೇನೆಗೆ ಸಿದ್ಧಗೊಳಿಸಬೇಕೆಂದು ಕರೆಕೊಟ್ಟರು. ಅದನ್ನು ಈಗಲಾದರೂ ಅನುಷ್ಠಾನಕ್ಕೆ ತರಬೇಕಿದೆ ಎಂದು ಅವರು ಹೇಳಿದರು.ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಮನೆಯ ನಾಯಿಯೂ ಪಾಲ್ಗೊಂಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾರೆ. ಸ್ವಾತಂತ್ರ್ಯ ಭಾರತದಲ್ಲಿ ಸ್ಥಾಪನೆಯಾದ ಜನಸಂಘ, ಬಿಜೆಪಿ ನಾಯಕರು ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ ಎನ್ನುವ ಕಾಂಗ್ರೆಸ್ ನಾಯಕರಿಗೆ ಇತಿಹಾಸದ ಪ್ರಜ್ಞೆ ಇಲ್ಲ ಎಂದು ಅವರು ಟೀಕಿಸಿದರು.ಅವತ್ತು ಸಾವರ್ಕರ್ ದೇಶ ಸೈನ್ಯ ದೃಷ್ಟಿಯಿಂದ ಸಬಲಗೊಳಿಸುವಂತೆ ಹೇಳದ್ದು, ಸೈನ್ಯಕ್ಕೆ ಕೊಟ್ಟಿರುವ ಶಕ್ತಿ ಪ್ರೋತ್ಸಾಹದಿಂದ ಆಪರೇಷನ್ ಸಿಂಧೂರದಲ್ಲಿ ಯಶಸ್ವಿಯಾದವು ಎಂದರು.ಪ್ರತಿಷ್ಠಾನದ ಅಧ್ಯಕ್ಷೆ ಡಾ.ಎಸ್. ಯಶಸ್ವಿನಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾವರ್ಕರ್ ಅವರು ಭಾರತೀಯ ಇತಿಹಾಸಲ್ಲಿ ಹೊಸಮೈಲಿಗಲ್ಲು ಮೂಡಿಸಿದರು. ಹಿಂದುತ್ವ ಭಾರತೀಯ ಇತಿಹಾಸವನ್ನು ಸ್ಪಷ್ಟವಾಗಿ ಪ್ರತಿಪಾದಿಸಿದರು. ಕ್ರಾಂತಿಕಾರಿಗಳಿಗೆ ಪ್ರೇರಣೆಯಾದವರು ಎಂದು ಹೇಳಿದರು. ಆದಿತ್ಯ ಆಸ್ಪತ್ರೆಯ ಡಾ. ಚಂದ್ರಶೇಖರ್ ಇದ್ದರು. ರಾಕೇಶ್ ಭಟ್ ಸ್ವಾಗತಿಸಿದರು.---ಕೋಟ್ಕೆಲವರು ರಾಜಕೀಯ ಕಾರಣಕ್ಕೆ ಸಾವರ್ಕರ್ ಹೆಸರು ಹೇಳಿದರೆ ಬೆಚ್ಚಿ ಬೀಳುತ್ತಾರೆ. ಸಿಎಂ ಸಿದ್ದರಾಮಯ್ಯ ವಿರೋಧ ಭಕ್ತಿಯಿಂದ ಸಾವರ್ಕರ್ ಹೆಚ್ಚು ಜನರಿಗೆ ತಲುಪುತ್ತಿದ್ದಾರೆ.ಹೆಚ್ಷು ಜನರು ಸಾವರ್ಕರ್ ಪುಸ್ತಕ ಓದಿ ಸತ್ಯ ಅರ್ಥ ಮಾಡಿಕೊಳ್ಳುತ್ತಾರೆ. ವಿರೋಧ ಭಕ್ತಿ ಹೆಚ್ಚಾದರೆ ದೇಶ ಭಕ್ತಿ ಹೆಚ್ಚಾಗುತ್ತದೆ.- ಬಿ.ಎಲ್. ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ.