ಸಾರಾಂಶ
ತಾಲೂಕು ತಹಸೀಲ್ದಾರವರಿಗೆ ರಾಜ್ಯಮಟ್ಟದ ಪುರಸ್ಕಾರ ಹಾಗೂ ಆಳಂದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮುಖ್ಯ ವೈದಾಧಿಕಾರಿಗಳಿಗೆ ಜಿಲ್ಲಾ ಪುರಸ್ಕಾರ ಗೌರವ ಸಿಕ್ಕಿದೆ.
ಕನ್ನಡಪ್ರಭ ವಾರ್ತೆ ಆಳಂದ
ರಾಜ್ಯ ಸರ್ಕಾರದಿಂದ ಇದೇ ಮೊದಲು ಬಾರಿಗೆ ತಾಲೂಕು ತಹಸೀಲ್ದಾರವರಿಗೆ ರಾಜ್ಯಮಟ್ಟದ ಪುರಸ್ಕಾರ ಹಾಗೂ ಆಳಂದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮುಖ್ಯ ವೈದಾಧಿಕಾರಿಗಳಿಗೆ ಜಿಲ್ಲಾ ಪುರಸ್ಕಾರ ನೀಡಿ ಗೌರವಿಸಿದ್ದರಿಂದ ಏಕಕಾಲಕ್ಕೆ ತಾಲೂಕಿನ ಕಂದಾಯ ಮತ್ತು ಆರೋಗ್ಯ ಇಲಾಖೆಗೆ ಗೌರವ ತಂದುಕೊಟ್ಟಿದೆ.ರಾಜ್ಯ ಚುನಾವಣೆ ಆಯೋಗವು ಬೆಂಗಳೂರಿನಲ್ಲಿ ಜ.25ರಂದು ಹಮ್ಮಿಕೊಂಡ ಮತದಾರರ ದಿನಾಚರಣೆಯಲ್ಲಿ ರಾಜ್ಯಮಟ್ಟಕ್ಕೆ ನಾಲ್ವರನ್ನು ಆಯ್ಕೆಮಾಡಿದ ತಹಸೀಲ್ದಾರರ ಪೈಕಿ ಅತ್ಯುತ್ತಮ ಸಹಾಯಕ ಮತದಾರರ ನೋಂದಣಾಧಿಕಾರಿಗಳೆಂದು ಆಳಂದ ತಾಲೂಕು ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಅವರನ್ನು ಗುರುತಿಸಿ ರಾಜ್ಯಪಾಲರು ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಮತ್ತೊಂದಡೆ ಆಯುಷ್ಯಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಆಳಂದ ಪಟ್ಟಣದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಮಹಾಂತಪ್ಪ ಹಾಳಮಳಿ ಅವರಿಗೆ ಜಿಲ್ಲಾಡಳಿತವು ಕಲಬುರಗಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಪ್ರಮಾಣಪತ್ರ ನೀಡಿ ಗೌರವಿಸಿದರು.ನಿಂಬರಗಾದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇರ್ಫಾನ್ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ. ಆರೋಗ್ಯ ಇಲಾಖೆಗೆ ಅತ್ಯುತ್ತಮ ಸಾಧನೆ ಪ್ರಮಾಣ ಪತ್ರ ಲಭಿಸಿದಕ್ಕೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಸೇರಿ ಸರ್ವ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರಿಂದ ಪ್ರಶಸ್ತಿ ಪಡೆದ ತಹಸೀಲ್ದಾರ ಯಲ್ಲಪ್ಪ ಸುಬೇದಾರಗೆ ಸಿಎಂ ಸಲಹೆಗಾರ, ಶಾಸಕ ಬಿ.ಆರ್. ಪಾಟೀಲ ಅವರು, ಪಟ್ಟಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಸರ್ಕಾರಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ಮಹಾಂತಪ್ಪ ಹಾಳಮಣಿ, ನಿಂಬರಗಾ ಆರೋಗ್ಯ ಕೇಂದ್ರದ ಇರ್ಫಾನ್ ಅವರಿಗೂ ಶಾಸಕರು ಅಭಿನಂದಿಸಿದ್ದಾರೆ.