ಸಾರಾಂಶ
ಕನ್ನಡಪ್ರಭ ವಾರ್ತೆ ಆಳಂದ
ಸರ್ವ ಜಾತಿ ಧರ್ಮೀಯರನ್ನು ಒಂದುಗೂಡಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಭಕ್ತಿಯ ಸಾರವನ್ನು ಬಿತ್ತುವ ಮೂಲಕ ಆಳಂದ ಶರಣ ಮಂಟಪವು ಅನುಭವ ಮಂಟಪ ದ್ಯೂತಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಜಿಡಗಾ ಮುಗಳಖೋಡ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಸ್ವಾಮೀಜಿ ಶ್ಲಾಘಿಸಿದರು.ಪಟ್ಟಣದ ಶರಣ ನಗರದ ಸದ್ಗುರು ರೇವಣಸಿದ್ಧ ಶಿವಶರಣ ಸ್ವಾಮೀಜಿಗಳ ಮಠದಲ್ಲಿ ಲಿಂ. ತೀರ್ಥಲಿಂಗ ಪಟ್ಟದೇವರ ಪುಣ್ಯರಾಧನೆ ಹಾಗೂ ಉತ್ತರಾಧಿಕಾರಿ ಚನ್ನಬಸವ ಪಟ್ಟದೇವರ ಪಟ್ಟಾಧಿಕಾರದ ೧೭ನೇ ವಾರ್ಷಿಕೋತ್ಸವ ಮತ್ತು ಐದು ದಿನಗಳ ಕಾಲ ನಡೆದ ಪ್ರವಚನ ಮಂಗಲೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಶರಣ ಮಂಟಪದ ಪೀಠಾಧಿಪತಿ ಚನ್ನಬಸವ ಪಟ್ಟದ್ದೇವರು ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ಭಾರತೀಯ ಶ್ರೇಷ್ಠ ಪರಂಪರೆಯ ತಳಹದಿಯ ಮೇಲೆ ಕಟ್ಟಿದ ಶರಣ ಮಂಟವು ೧೨ನೇ ಶತಮಾನದ ಬಸವಾದಿ ಶರಣರು ಕಟ್ಟಿದ ಅನುಭವ ಮಂಟದಂತೆ ಮುನ್ನೆಡೆದು ಇನ್ನಷ್ಟು ಬೆಳೆದು ಭಕ್ತರಿಗೆ ಕಲ್ಪವೃಕ್ಷವಾಗಿ ಬೆಳೆಯಲಿ, ಇದಕ್ಕೆ ಜಿಡಗಾ, ಮುಗಳಖೋಡ ಮಠವು ಇಂಥ ಕಾರ್ಯಕ್ಕೆ ಸದಾ ಸಹಕರಿಯಾಗಿ ನಿಲ್ಲುವುದು. ಭಕ್ತರು ಸನ್ಮಾರ್ಗದ ದಾರಿಯಲ್ಲಿ ನಡೆದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.ಇದೇ ವೇಳೆ ಅಯೋಧ್ಯೆಯಿಂದ ಬಂದ ಮಂತ್ರಾಕ್ಷೆತೆಯನ್ನು ಜಿಡಗಾ ಶ್ರೀಗಳ ಮೂಲಕ ಭಕ್ತರಿಗೆ ವಿತರಿಸಲಾಯಿತು. ಅಲ್ಲದೆ, ಶ್ರೀರಾಮನ ಭಾವಚಿತ್ರಕ್ಕೆ ಮಂತ್ರಾಕ್ಷತೆ ಸಮರ್ಪಿಸಲಾಯಿತು.
ಪೀಠಾಧಿಪತಿ ಚನ್ನಬಸವ ಪಟ್ಟದೇವರು ಮಾತನಾಡಿ, ಭಕ್ತರು ಸನ್ಮಾರ್ಗದಲ್ಲಿ ಸಾಗಿ ಬಾಳು ಬೆಳಗಲು ನಿರಂತರವಾಗಿ ಇಂಥ ಸತ್ಕಾರ್ಯಗಳಲ್ಲಿ ಪಾಲ್ಗೊಂಡು ಪುನಿತರಾಗಬೇಕು ಎಂದು ಹೇಳಿದರು. ಅಲ್ಲದೆ ಸತ್ಕಾರ್ಯಕ್ಕೆ ದಾಸೋಹ ಕೈಗೊಂಡ ಹಾಗೂ ತುಲಾಭಾರ ನೆರವೇರಿಸಿದ ಭಕ್ತಾದಿಗಳಿಗೆ ಅವರು ಸನ್ಮಾನಿಸಿ ಆಶೀರ್ವದಿಸಿದರು.ವೇದಿಕೆಯಲ್ಲಿ ಚಳಕಾಪೂರದ ಶಂಕರಾನಂದ ಸ್ವಾಮೀಜಿ, ಯಳವಂತಗಿ ಮಠದ ಪೂರ್ಣಾನಂದ ಸ್ವಾಮೀಜಿ ಹಾಗೂ ವೇದಿಕೆಯ ಮುಂಭಾಗದಲ್ಲಿ ಮುಖಂಡ ಅಶೋಕ ಗುತ್ತೇದಾರ, ಸಿಪಿಐ ಮಹಾದೇವ ಪಂಚಮುಖಿ, ರೇವಣಸಿದ್ಧಪ್ಪ ನಾಗೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸದ್ಗುರು ರೇವಣಸಿದ್ಧ ಶಿವಶರಣ ಸ್ವಾಮೀಜಿಗಳ ೧೬೨ನೇ ಜಯಂತ್ಯುತ್ಸವ ನಿಮಿತ್ತ ತೊಟ್ಟಿಲು ಕಾರ್ಯಕ್ರಮ ಮತ್ತು ಶಿಲಾ ಮೂರ್ತಿಗೆ ಭಕ್ತಾದಿಗಳು ತುಲಾಭಾರ ನೆರವೇರಿಸಿದರು. ಸಮಾಜ ಮುಖಂಡ ಸೂರ್ಯಕಾಂತ ತಟ್ಟಿ ನಿರೂಪಿಸಿದರು. ಶ್ರೀಶೈಲ ಉಳ್ಳೆ ವಂದಿಸಿದರು. ಭಕ್ತ ಮಂಡಳಿ ಪರ ರಾಜಶೇಖರ ಒಮ್ನೆ, ರಾಜಶೇಖರ ಜನಿವೇರಿ, ಉಮೇಶ ಹಿಪ್ಪರಗಿ, ಬಸವರಾಜ ಜೇವುರೆ ಸ್ವಾಗತಿಸಿದರು.ಈ ಮೊದಲು ಜಿಡಗಾ ಶ್ರೀಗಳನ್ನು ಪಟ್ಟಣದ ಮಹಾದೇವ ಮಂದಿರದಿಂದ ಶರಣಮಂಟಪವರೆಗೆ ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮುನ್ನಾದಿನ ಸಂಜೆ ನಡೆದ ಸಮಾರಂಭದಲ್ಲಿ ಬೀದರ್‌ನ ಡಾ. ಶಿವುಕುಮಾರ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಮಾಡಿಯಾಳ ಒಪ್ಪತ್ತೇಶ್ವರ ಮಠದ ಮರುಳಸಿದ್ಧ ಸ್ವಾಮೀಜಿಗಳು ಸೇರಿದಂತೆ ಇನ್ನಿತರು ಶ್ರೀಗಳು ಮುಖಂಡರು ಉಪಸ್ಥಿತರಿದ್ದರು.