ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಸ್ವಾಸ್ಥ್ಯ ಸಮಾಜಕ್ಕೆ ಮದ್ಯ ಮಾರಾಟ ಕಂಟಕವಾಗಿರುವುದರಿಂದ ಸರ್ಕಾರ ಅಬಕಾರಿ ಇಲಾಖೆಯಲ್ಲಿ ಕೆಲವು ಪರ್ಯಾಯ ಮಾರ್ಪಡುಗಳನ್ನು ತರಬೇಕಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಅಭಿಪ್ರಾಯಪಟ್ಟರು.ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಹನೂರು ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಧರ್ಮಸ್ಥಳ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಚಾಮರಾಜನಗರ ಜಿಲ್ಲೆ, ಗ್ರಾಪಂ, ಸಾಲೂರುಮಠ, ಶ್ರೀ ಮಲೆಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಗಾಂಧಿ ಸ್ಮೃತಿ ಜನಜಾಗೃತಿ ಜಾಥಾ ಮತ್ತು ನವಜೀವನ ಸಮಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರಸ್ತುತ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ 35 ಸಾವಿರ ಕೋಟಿ ಆದಾಯ ತರುತ್ತಿದೆ ಎಂಬ ಮಾಹಿತಿ ಇದೆ. ಆದಾಯ ನೋಡುವುದರ ಜೊತೆಗೆ ಸಮಾಜದ ಒಳಿತನ್ನು ಸಹ ಪರಿಗಣಿಸಬೇಕು. ಎಷ್ಟೋ ಕುಟುಂಬಗಳು ಈ ಮದ್ಯ ವ್ಯಸನದಿಂದ ಸಂಕಷ್ಟಕ್ಕೆ ತುತ್ತಾಗಿವೆ. ಇಂತಹ ಪರಿಸ್ಥಿತಿ ಮತ್ತು ವಾತಾವರಣವನ್ನು ಮನಗಂಡು ವ್ಯಕ್ತಿಯ ಬದುಕಲ್ಲಿ ಹಾಗೂ ಸಮಾಜದಲ್ಲಿ ಬದಲಾವಣೆ ತರಲು ವಿವಿಧ ಸಂಘ ಸಂಸ್ಥೆಗಳು ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದರು. ಧರ್ಮಸ್ಥಳ ವೀರೇಂದ್ರ ಹೆಗಡೆಯವರ ಪರಿಕಲ್ಪನೆ ಮಾದರಿಯಾದದ್ದು. ನವಜೀವನ ಸದಸ್ಯರು ಮದ್ಯ ತ್ಯಜಿಸುವುದರ ಜೊತೆಗೆ ಇನ್ನಿತರರನ್ನು ಮದ್ಯ ಮುಕ್ತರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕಿ ಪರಿಮಳ ನಾಗಪ್ಪ ಮಾತನಾಡಿ, ತಮ್ಮ ಅಮೂಲ್ಯ ಕುಟುಂಬ ಚೆನ್ನಾಗಿ ಇರಬೇಕಾದರೆ ಮದ್ಯ ವ್ಯಸನ ಇನ್ನಿತರೆ ದುಶ್ಚಟಗಳಿಂದ ದೂರವಿರಿ ಸರ್ಕಾರ ಮಾಡುವ ಕಾರ್ಯಕ್ರಮಗಳನ್ನು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಮಾಡುತ್ತಿರುವುದು ಮೆಚ್ಚುಗೆ ವಿಷಯ. ಇದೊಂದು ಒಳ್ಳೆಯ ಕಾರ್ಯಕ್ರಮ ಎಂದು ಬಣ್ಣಿಸಿದರು.ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಮನಸ್ಸು ಬದಲಾಗಲು ಒಂದು ಕ್ಷಣ ಸಾಕು. ಮದ್ಯ ವ್ಯಸನಿಗಳಿಗೆ ಅಂತಹ ಕಾಲ ಬರಲಿ. ಮದ್ಯ ವ್ಯಸನಿಗಳು ಬಾಳನ್ನು ಹಾಳು ಮಾಡಿಕೊಳ್ಳಬೇಡಿ. ನಾವು ಯಾರು ಎಂಬುದನ್ನು ಮೊದಲು ಅರಿಯಿರಿ. ಕಾರ್ಯಕ್ರಮದ ಅಂಗವಾಗಿ ಮಲೆಮಹದೇಶ್ವರ ಬೆಟ್ಟದ ಪ್ರಮುಖ ರಸ್ತೆಗಳಲ್ಲಿ ಸಂಘ ಸಂಸ್ಥೆಗಳು ಜಾಥಾ ಕಾರ್ಯಕ್ರಮ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಮದ್ಯಪಾನದಿಂದ ಮುಕ್ತರಾದ ನವಜೀವನ ಸಮಿತಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮ.ಬೆಟ್ಟ ಅಭಿವೃದ್ದಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಚಾಮುಲ್ ನಿರ್ದೇಶಕ ಮಹಾದೇವಪ್ರಸಾದ್, ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ರಾಜಶೇಖರ ಆರಾಧ್ಯ, ಅಧ್ಯಕ್ಷ ಎಂ.ಎಸ್.ರವಿಶಂಕರ್, ಉಪಾಧ್ಯಕ್ಷ ಪ್ರಸಾದ್ ಊರ್ದಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನ ಪ್ರಾದೇಶಿಕ ಯೋಜನಾಧಿಕಾರಿ ಮಾಧವ, ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ಚಾ.ನ.ತಾ.ಯೋಜನಾಧಿಕಾರಿ ಹರೀಶ್ ಕುಮಾರ್, ಹನೂರು ತಾಲ್ಲೂಕು ಯೋಜನಾಧಿಕಾರಿ ಪ್ರವೀಣ್, ಮುಖಂಡರಾದ ವಿಜಯ್ ಕುಮಾರ್, ಕೌದಳ್ಳಿ ಶಿವರಾಮು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಘದ ಮಹಿಳಾ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.