ಐಬಿಯಲ್ಲಿ ಎಣ್ಣೆಪಾರ್ಟಿ: ಐವರು ಅಧಿಕಾರಿಗಳ ಸಸ್ಪೆಂಡ್‌

| Published : May 26 2024, 01:36 AM IST

ಐಬಿಯಲ್ಲಿ ಎಣ್ಣೆಪಾರ್ಟಿ: ಐವರು ಅಧಿಕಾರಿಗಳ ಸಸ್ಪೆಂಡ್‌
Share this Article
  • FB
  • TW
  • Linkdin
  • Email

ಸಾರಾಂಶ

ಗುತ್ತಿಗೆದಾರರೊಂದಿಗೆ ಪ್ರವಾಸಿ ಮಂದಿರದಲ್ಲಿ ಎಣ್ಣೆಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿದ ಆರೋಪ ಎದುರಿಸುತ್ತಿರುವ ಜಮಖಂಡಿಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ನಾಲ್ವರು ಅಧಿಕಾರಿಗಳು ಸೇರಿ ಐವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಗುತ್ತಿಗೆದಾರರೊಂದಿಗೆ ಪ್ರವಾಸಿ ಮಂದಿರದಲ್ಲಿ ಎಣ್ಣೆಪಾರ್ಟಿ ಮಾಡಿ ಮೋಜು ಮಸ್ತಿ ಮಾಡಿದ ಆರೋಪ ಎದುರಿಸುತ್ತಿರುವ ಜಮಖಂಡಿಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ನಾಲ್ವರು ಅಧಿಕಾರಿಗಳು ಸೇರಿ ಐವರನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಜಮಖಂಡಿಯ ರಮಾ ನಿವಾಸದ ಪ್ರವಾಸಿ ಮಂದಿರದಲ್ಲಿ ಮೇ 23ರಂದು ಜಿಪಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ನಾಯಕ, ಅಭಿಯಂತರರಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲ ಅವರು ನೀತಿ ಸಂಹಿತೆ ಇದ್ದಾಗಲೂ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಗುತ್ತಿಗೆದಾರರ ಜೊತೆ ಸೇರಿ ಮದ್ಯ ಪಾರ್ಟಿ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಕುರಿತು ತನಿಖೆ ಕೈಗೊಂಡಿದ್ದ ಜಿಲ್ಲಾಡಳಿತ ಈ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡು ಬಂದಿದ್ದರಿಂದ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರು ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಕಲಂ 134ರ ಪ್ರಕಾರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಮಾನತು ಮಾಡಿ ಆದೇಶಿಸಿದ್ದಾರೆ.

ಬೀಗ ನೀಡಲು ಹೇಳಿದ್ದ ಎಂಜಿನಿಯರ್‌ ಸಹ ಅಮಾನತು:

ಜಮಖಂಡಿಯ ರಮಾ ನಿವಾಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಆರ್.ಜಂಬಗಿ ಅವರನ್ನು ಸಹ ಕರ್ತವ್ಯಲೋಪದ ಆರೋಪದ ಮೇಲೆ ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಪ್ರವಾಸಿ ಮಂದಿರದ ಬೀಗ ಒಂದು ಕಂದಾಯ ಇಲಾಖೆಯ ಅಧಿಕಾರಿಗಳ ಬಳಿ ಇದ್ದರೆ, ಇನ್ನೊಂದು ಸಿಬ್ಬಂದಿ ಬಳಿ ಇರುತ್ತದೆ. ಆದರೆ ಜಿಪಂ ಅಧಿಕಾರಿಗಳು ಕೇಳಿದ್ದಾರೆ ಎಂಬ ಕಾರಣಕ್ಕೆ ಲೋಕೊಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಆರ್.ಜಂಬಗಿ ಅವರು ಬೀಗ ನೀಡುವಂತೆ ಪ್ರವಾಸಿ ಮಂದಿರದ ಸಿಬ್ಬಂದಿಗೆ ಸೂಚಿಸಿದ್ದರು.