ಮದ್ಯಪಾನ ಕೆಲ ರಾಜ್ಯದಲ್ಲಿ ನಿಷೇಧವಿದೆ ನಮ್ಮಲ್ಲಿ ಏಕಿಲ್ಲ

| Published : Jul 02 2025, 11:48 PM IST

ಮದ್ಯಪಾನ ಕೆಲ ರಾಜ್ಯದಲ್ಲಿ ನಿಷೇಧವಿದೆ ನಮ್ಮಲ್ಲಿ ಏಕಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯಪಾನವನ್ನು ದೇಶದಲ್ಲಿ ಪರಿಚಯಿಸಿದವರು ಬ್ರಿಟೀಷರು. ಇದರ ದುಷ್ಪರಿಣಾಮವನ್ನು ಮನಗಂಡು ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ನಮ್ಮ ಕರ್ನಾಟಕದಲ್ಲಿ ಏಕೆ ಸಾಧ್ಯವಾಗಿಲ್ಲ ಎಂದು ಮಾರಗೊಂಡನಹಳ್ಳಿ ಚಿದಾನಂದಾಶ್ರಮ ಮಠದ ಶ್ರೀ ಅಭಿನವ ಮುಕುಂದೂರು ಬಸವಲಿಂಗ ಸ್ವಾಮಿಗಳು ವಿಷಾದಿಸಿದರು. ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮದ್ಯದ ಅಂಗಡಿ ತೆರೆಯುವ ಬಗ್ಗೆಯೂ ಕೇಳಿದ್ದೇನೆ, ಇದು ಕುಟುಂಬವನ್ನು ಬಡತನಕ್ಕೆ ದೂಡುತ್ತದೆ ಎಂದು ಅವರು ಬೇಸರಿಸಿದರು. ಏಳು ದಿನಗಳ ಈ ಮದ್ಯವರ್ಜನ ಶಿಬಿರವನ್ನು ಆಯೋಜಿಸುವಲ್ಲಿ ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿ ಬಹಳ ಕಾಳಜಿಯಿಂದ ವ್ಯವಸ್ಥಿತವಾಗಿ ಸಜ್ಜುಗೊಳಿಸಿದ್ದಾರೆ. ಇದಕ್ಕಾಗಿ ಅನೇಕರು ಸಹಕರಿಸಿದ್ದಾರೆ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮದ್ಯಪಾನವನ್ನು ದೇಶದಲ್ಲಿ ಪರಿಚಯಿಸಿದವರು ಬ್ರಿಟೀಷರು. ಇದರ ದುಷ್ಪರಿಣಾಮವನ್ನು ಮನಗಂಡು ಕೆಲವು ರಾಜ್ಯಗಳಲ್ಲಿ ನಿಷೇಧಿಸಲಾಗಿದೆ. ನಮ್ಮ ಕರ್ನಾಟಕದಲ್ಲಿ ಏಕೆ ಸಾಧ್ಯವಾಗಿಲ್ಲ ಎಂದು ಮಾರಗೊಂಡನಹಳ್ಳಿ ಚಿದಾನಂದಾಶ್ರಮ ಮಠದ ಶ್ರೀ ಅಭಿನವ ಮುಕುಂದೂರು ಬಸವಲಿಂಗ ಸ್ವಾಮಿಗಳು ವಿಷಾದಿಸಿದರು. ಅವರು ತಮ್ಮ ಮಠದ ಆವರಣದಲ್ಲಿ ಶ್ರೀಮಠ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಜಿಲ್ಲಾ ಜನಜಾಗೃತಿ ವೇದಿಕೆ ಹಾಸನ ಮತ್ತು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರವು ಹಮ್ಮಿಕೊಂಡಿರುವ 1943ನೇ ಮದ್ಯ ವರ್ಜನ ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಹಾತ್ಮ ಗಾಂಧೀಜಿ ಪಾನನಿರೋಧ ಚಳವಳಿಯನ್ನೇ ನಡೆಸಿ ಹೋರಾಟ ಮಾಡಿದ್ದನ್ನು ಸ್ಮರಿಸಿದರು, ಮದ್ಯಪಾನ ಮಾಡಿದ ವ್ಯಕ್ತಿಯ ಮನಸ್ಸು ಸ್ಮಿತದಲ್ಲಿ ಇರುವುದಿಲ್ಲ, ಇದರಿಂದ ಕುಟುಂಬ ಮತ್ತು ಮಕ್ಕಳು ಬಹಳ ನೋವನ್ನು ಅನುಭವಿಸಬೇಕಾಗುತ್ತದೆ. ಮಾನಸಿಕವಾಗಿಯೂ ವ್ಯಕ್ತಿ ಕುಗ್ಗಿಬಿಡುತ್ತಾನೆ, ಇಂದು ಮಾದಕ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ, ನೀನು ಯಾವ ಹವ್ಯಾಸ ಬಿಟ್ಟೆ ಎಂದು ಕೇಳಿದರೆ ಗುಟ್ಕಾ ಬಿಟ್ಟೆ ಬೀಡಿ ಬಿಟ್ಟೆ ಕುಡಿಯೋದನ್ನ ಬಿಟ್ಟೆ ಎನ್ನುತ್ತಾರೆ, ಧರ್ಮಸ್ಥಳ ಶ್ರೀ ಕ್ಷೇತ್ರ ಮದ್ಯ ವ್ಯಸನಿಗಳನ್ನು ಅದರಿಂದ ಹೊರ ತರುವಂತಹ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ, ಗ್ರಾಮೀಣ ಮಹಿಳೆಯರಿಗೂ ಆರ್ಥಿಕ ನೆರವನ್ನು ನೀಡಲಾಗುತ್ತಿದೆ, ಜನಪರ ಸೇವೆಯಲ್ಲಿ ಶ್ರೀ ಕ್ಷೇತ್ರ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡಿದೆ ಎಂದರು.

ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮದ್ಯದ ಅಂಗಡಿ ತೆರೆಯುವ ಬಗ್ಗೆಯೂ ಕೇಳಿದ್ದೇನೆ, ಇದು ಕುಟುಂಬವನ್ನು ಬಡತನಕ್ಕೆ ದೂಡುತ್ತದೆ ಎಂದು ಅವರು ಬೇಸರಿಸಿದರು. ಏಳು ದಿನಗಳ ಈ ಮದ್ಯವರ್ಜನ ಶಿಬಿರವನ್ನು ಆಯೋಜಿಸುವಲ್ಲಿ ಧರ್ಮಸ್ಥಳ ಸಂಸ್ಥೆಯ ಸಿಬ್ಬಂದಿ ಬಹಳ ಕಾಳಜಿಯಿಂದ ವ್ಯವಸ್ಥಿತವಾಗಿ ಸಜ್ಜುಗೊಳಿಸಿದ್ದಾರೆ. ಇದಕ್ಕಾಗಿ ಅನೇಕರು ಸಹಕರಿಸಿದ್ದಾರೆ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಶ್ರೀ ಕ್ಷೇತ್ರ ಜಿಲ್ಲಾ ಜನಜಾಗೃತಿ ನಿರ್ದೇಶಕ ಸುರೇಶ್ ಮೊಯ್ಲಿ , ಮದ್ಯ ವ್ಯಸನಿಗಳ ಮನೆಯಲ್ಲಿ ಕುಟುಂಬಕ್ಕೆ ನೆಮ್ಮದಿ ಇರುವುದಿಲ್ಲ. ಈಗಾಗಲೇ 1942 ಶಿಬಿರಗಳನ್ನು ನಡೆಸಲಾಗಿದ್ದು. ಸಾವಿರಾರು ಜನ ಮದ್ಯಪಾನದಿಂದ ಹೊರಬಂದಿದ್ದಾರೆ. ಇವರ ಮನೆಯ ಅಕ್ಕ-ಪಕ್ಕದ ಕುಟುಂಬದಲ್ಲಿದ್ದ ಮದ್ಯ ವ್ಯಸನಗಳು ಸಹ ಇವರನ್ನು ನೋಡಿ ಅವರು ಸಹ ಮದ್ಯ ತ್ಯಜಿಸಿದ್ದಾರೆ ಎಂದರು. ಶಿಬಿರ ಅಧಿಕಾರಿ ದಿವಾಕರ ಪೂಜಾರಿ ಪ್ರಾಸ್ತಾವಿಕ ನುಡಿಯಲ್ಲಿ, ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಬಹಳ ಪ್ರೀತಿಯಿಂದ ಕಾಣಲಾಗುತ್ತದೆ. ಅವರ ಮನ ಗೆಲ್ಲುವಲ್ಲಿ ನಮ್ಮ ಎಲ್ಲಾ ಸಿಬ್ಬಂದಿಯು ಯಶಸ್ವಿಯಾಗುತ್ತೇವೆ. ಇಲ್ಲಿ ಮನಪರಿವರ್ತನೆ ಮಾತ್ರ ಯಾವುದೇ ಔಷಧಿಯ ಚಿಕಿತ್ಸೆ ಇರುವುದಿಲ್ಲ ಏಳು ದಿನಗಳಲ್ಲಿ ಹೊಸ ಮನುಷ್ಯರಾಗಿ ಹೊರಬರುತ್ತಾರೆ ಎಂದರು. ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಲ್ಲಳ್ಳಿ ನಾಗರಾಜ್ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಹಾದೇವಪ್ಪ, ಚಿದಾನಂದ ಆಶ್ರಮ ಮಠದ ವ್ಯವಸ್ಥಾಪಕ ಕುಮಾರಸ್ವಾಮಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೇಶವ ಪ್ರಸಾದ್, ಎಚ್ ಡಿ ಸೀತಾರಾಮ್ ಶಿಬಿರ ಕುರಿತು ಮಾತನಾಡಿದರು. ಕಾರ್ಯಕ್ರಮವನ್ನು ಬಾಣಾವರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ ಯೋಜನಾಧಿಕಾರಿ ಸೋಮನಾಥ ನಿರ್ವಹಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಶ್ರೀಗಳನ್ನು ಪೂರ್ಣಗೊಂಡ ಕಳಸದೊಂದಿಗೆ ಸಭಾ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು. ಪದಾಧಿಕಾರಿಗಳು ಮೇಲ್ವಿಚಾರಕರು, ಕಾರ್ಯಕರ್ತರು ಹಾಜರಿದ್ದರು.