ಮದ್ಯವ್ಯಸನಿಗಳು 14416 ಗೆ ಕರೆ ಮಾಡಲು ನಾಚಿಕೆ ಬೇಡ: ಡಾ. ರಿತಿಕಾ

| Published : Apr 26 2024, 12:52 AM IST / Updated: Apr 26 2024, 12:34 PM IST

ಸಾರಾಂಶ

ಇಂದು ಮದ್ಯ ಸೇವನೆ ಎಂಬುದು ಗೌರವ ಎಂಬಂತಾಗಿದೆ. ಅದರ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದರೂ ಅದನ್ನು ನಿರಂತರವಾಗಿ ಸೇವಿಸುವುದು ಘನತೆ ಎನಿಸಿದೆ ಎಂದು ರಿತಿಕಾ ಸಾಲಿಯಾನ್‌ ಹೇಳಿದರು.

 ಉಡುಪಿ :  ಇಂದು ಮದ್ಯ ಸೇವನೆ ಎಂಬುದು ಗೌರವ ಎಂಬಂತಾಗಿದೆ. ಅದರ ದುಷ್ಪರಿಣಾಮಗಳ ಬಗ್ಗೆ ಅರಿವಿದ್ದವರೂ ಅದನ್ನು ನಿರಂತರವಾಗಿ ಸೇವಿಸುವುದು ಘನತೆ ಎನಿಸಿದೆ. ಆರಂಭದಲ್ಲಿ ಕುತೂಹಲಕ್ಕಾಗಿ ಆರಂಭವಾಗುವ ಸೇವನೆ, ನಂತರ ಮಾನವನ ಮೆದುಳಿನ ಒಡೆತನವನ್ನು ವಹಿಸಿಕೊಳ್ಳುತ್ತದೆ. ಅದೊಂದು ವ್ಯಸನವಾಗಿ ಮಾರ್ಪಡುತ್ತದೆ. ವ್ಯಕ್ತಿ ಅದರಿಂದ ಹೊರಬರಲಾರದೆ ಕಷ್ಟಪಡುತ್ತಾನೆ ಎಂದು ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಘಟಕದ ಮಾನಸಿಕ ತಜ್ಞೆ ಡಾ. ರಿತಿಕಾ ಸಾಲಿಯಾನ್‌ ಹೇಳಿದರು.

ಅವರು ಇಲ್ಲಿನ ನೇತ್ರಜ್ಯೋತಿ ಕಾಲೇಜಿನಲ್ಲಿ ಮದ್ಯ ವ್ಯಸನ ಅರಿವು ಮತ್ತು ಆಡಳಿತ ವೃತ್ತಿ ದಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮದ್ಯವ್ಯಸನಿ ವ್ಯಸನದಿಂದ ಹೊರ ಬರುವ ಆಶಯವನ್ನು ಹೊಂದಿದ್ದರೂ, ಸೂಕ್ತ ವೈದ್ಯಕೀಯ ಸಲಹೆ, ಮಾನಸಿಕ ಸಮಾಲೋಚನೆಯನ್ನು ಪಡೆದುಕೊಳ್ಳಲು ನಾಚಿಕೊಳ್ಳುತ್ತಾನೆ. ಇಂತಹ ವ್ಯಕ್ತಿಗಳಿಗೆ ಸುಲಭ ಪರಿಹಾರ ಮಾಗ೯ವೆಂದರೆ ಸರ್ಕಾರ ಏರ್ಪಡಿಸಿರುವ ಟೆಲಿಮಾನಸ ಸೇವೆ. 14416 ಎಂಬ ಟೋಲ್ ಫ್ರೀ ಸಂಖ್ಯೆಗೆ ಯಾವನೇ ವ್ಯಕ್ತಿ ಕರೆಮಾಡಿದರೆ, ಕರೆ ಮಾಡಿದ ವ್ಯಕ್ತಿಗಳ ವೈಯಕ್ತಿಕ ವಿವರವನ್ನು ಪಡೆಯದೆ ಅವರಿಗೆ ಸೂಕ್ತ ಪರಿಹಾರ ಸೇವೆಯನ್ನು ಒದಗಿಸಲಾಗುತ್ತದೆ. ಆದುದರಿಂದ ಸಾರ್ವಜನಿಕರು ಈ ಸೇವೆಯನ್ನು ಪಡೆದುಕೊಳ್ಳಬೇಕು ಎಂದವರು ಹೇಳಿದರು.

ಜಿಲ್ಲಾ ಕುಷ್ಠರೋಗಾಧಿಕಾರಿ ಡಾ. ಲತಾ ನಾಯಕ್, ಮಾಹೆ ಮಣಿಪಾಲದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತಿನ ಅಸಿಸ್ಟೆಂಟ್ ಪ್ರೊಫೆಸರ್ ಡಾ. ರಾಜೇಶ್ ಕಾಮತ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ರಾಜಿಬ್ ಮಂಡಲ್, ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಡಾ. ಗೌರಿ ಪ್ರಭು, ಆಡಳಿತಾಧಿಕಾರಿ ಬಾಲಕೃಷ್ಣ ಪರ್ಕಳ ಅವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಸಮೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು. ರಕ್ಷಿತಾ ಸ್ವಾಗತಿಸಿ ಮಾಸ್ಟರ್ ರಾಕೇಶ್‌ ವಂದಿಸಿದರು.