ಸಾರಾಂಶ
ವಿಜಯಪುರ ಮಹಾನಗರ ಪಾಲಿಕೆ 35 ಸದಸ್ಯರು ಕಾನೂನು ಪ್ರಕಾರ ಆಸ್ತಿ ಘೋಷಣಾ ಪತ್ರ ಸಲ್ಲಿಕೆ ಮಾಡದ ಹಿನ್ನೆಲೆ ಎಲ್ಲ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಸೋಮವಾರ ಆದೇಶಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ವಿಜಯಪುರ ಮಹಾನಗರ ಪಾಲಿಕೆ 35 ಸದಸ್ಯರು ಕಾನೂನು ಪ್ರಕಾರ ಆಸ್ತಿ ಘೋಷಣಾ ಪತ್ರ ಸಲ್ಲಿಕೆ ಮಾಡದ ಹಿನ್ನೆಲೆ ಎಲ್ಲ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಸೋಮವಾರ ಆದೇಶಿಸಿದ್ದಾರೆ.ಬಿಜೆಪಿಯ 17, ಕಾಂಗ್ರೆಸ್‌ನ 10, ಜೆಡಿಎಸ್‌ನ 1, ಎಂಐಎಂ 2 ಹಾಗೂ 5 ಪಕ್ಷೇತರರ ಸದಸ್ಯತ್ವ ಅನರ್ಹಗೊಳಿಸಲಾಗಿದೆ. 2022 ಅಕ್ಟೋಬರ್ 28ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಸದಸ್ಯರು ಆಯ್ಕೆಯಾಗಿದ್ದರು.
ಅನರ್ಹಗೊಳಿಸಲು ಕಾರಣ ಏನು?:2024ರ ಜನವರಿ 9ರಂದು ಮೇಯರ್, ಉಪ ಮೇಯರ್ ಚುನಾವಣೆ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ನ ಮೆಹೆಜಬೀನ್ ಹೊರ್ತಿ ಮೇಯರ್ ಆಗಿ ದಿನೇಶ ಹಳ್ಳಿ ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ನಂತರದ ಅವಧಿಗೆ 2025 ಫೆಬ್ರವರಿ 12ರಂದು ಮತ್ತೆ ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆದಿದೆ. ಅದರ ಫಲಿತಾಂಶವನ್ನು ಘೋಷಿಸಬಾರದು ಎಂದು ನ್ಯಾಯಾಲಯ ತಡೆ ಹಿಡಿದಿತ್ತು. ಚುನಾಯಿತರಾದ ಬಳಿಕ ಯಾವುದೇ ಸದಸ್ಯರು ಕಾನೂನು ಪ್ರಕಾರ ಆಸ್ತಿ ಘೋಷಣಾ ಪತ್ರ ಸಲ್ಲಿಕೆ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಮಾಜಿ ಸದಸ್ಯರಾದ ಪ್ರಕಾಶ ಮಿರ್ಜಿ ಹಾಗೂ ಮೈನುದ್ದೀನ್ ಬೀಳಗಿ 2024 ನವೆಂಬರ್‌ನಲ್ಲಿ ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆ ಪರಿಶೀಲನೆ ಮಾಡಿ, ವಿಚಾರಣೆ ನಡೆಸಿ ಎಲ್ಲಾ 35 ಸದಸ್ಯರ ಸದಸ್ಯತ್ವವನ್ನು ಅನರ್ಹತೆಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಹೈಕೋರ್ಟ್ ಸೂಚನೆಯಂತೆ ಪರಿಶೀಲನೆ ನಡೆಸಿ ಕ್ರಮ ಕೈಗೊಂಡ ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಎಲ್ಲ ಸದಸ್ಯರ ಸ್ಥಾನಗಳು ಅನರ್ಹತೆ ಹೊಂದಿದ್ದರಿಂದ ಮಹಾನಗರ ಪಾಲಿಕೆಗೆ ಮತ್ತೆ ಚುನಾವಣೆ ನಡೆಯೋ ಸಾಧ್ಯತೆ ಹೆಚ್ಚಾಗಿದೆ. ಅಥವಾ ಪಾಲಿಕೆ ಸದಸ್ಯರೆಲ್ಲರೂ ಸಹ ಮತ್ತೊಂದು ಅವಕಾಶ ಕೋರಿ ಅಥವಾ ಸರ್ಕಾರದ ನಡೆ ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋಗಬಹುದಾಗಿದೆ.
ಮಹಾನಗರ ಪಾಲಿಕೆ ಸದಸ್ಯರು ಕಾನೂನು ಪ್ರಕಾರ ಆಸ್ತಿ ಘೋಷಣಾ ಪತ್ರ ಸಲ್ಲಿಕೆ ಮಾಡದಿರುವುದನ್ನು ಪ್ರಶ್ನಿಸಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೆವು. ವಿಚಾರಣೆ ನಡೆಸಿದ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಪರಿಶೀಲನೆ ನಡೆಸಿದ ಪ್ರಾದೇಶಿಕ ಆಯುಕ್ತರು ಎಲ್ಲ ಸದಸ್ಯರನ್ನು ಅನರ್ಹಗೊಳಿಸಿದ್ದು ನ್ಯಾಯಯುತವಾಗಿದೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದ್ದು, ತೀರ್ಪನ್ನು ನಾವು ಸ್ವಾಗತಿಸುತ್ತೇವೆ.ಪ್ರಕಾಶ ಮಿರ್ಜಿ, ನ್ಯಾಯಾಲಯದ ಮೊರೆ ಹೋಗಿದ್ದ ಮಾಜಿ ಸದಸ್ಯ