2.ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು. | Kannada Prabha
Image Credit: KP
ರಾಮನಗರ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯ ಬಗ್ಗೆ ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರಕ್ಕೆ ಪೂರ್ಣ ಸಹಮತ ವ್ಯಕ್ತಪಡಿಸಿದ ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ಘೋಷಣೆ ಮಾಡಿದರು.
ರಾಮನಗರ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯ ಬಗ್ಗೆ ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರಕ್ಕೆ ಪೂರ್ಣ ಸಹಮತ ವ್ಯಕ್ತಪಡಿಸಿದ ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ಘೋಷಣೆ ಮಾಡಿದರು. ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ನ ರಾಮನಗರ ಜಿಲ್ಲಾ ಮುಖಂಡರ ಸಭೆಯಲ್ಲಿ ಮುಂದಿನ ರಾಜಕೀಯ ಬೆಳವಣಿಗೆ ಹಾಗೂ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ವಿಸ್ತೃತ ಸಮಾಲೋಚನೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಮಂಜುನಾಥ್ ಅವರು ಜಿಲ್ಲೆಯ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿದರು. ಸಭೆಯಲ್ಲಿ ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರಗಳ ನೂರಾರು ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯ ಮಂಡಿಸಿದರಲ್ಲದೆ, ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಾವೆಲ್ಲರೂ ಬದ್ಧ ಎಂದು ಹೇಳಿದರು. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಜಿಲ್ಲೆಯ ಮುಖಂಡರ ಜತೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ : ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನಮ್ಮ ವಿರೋಧಿಗಳೂ ಪಿತೂರಿ ಮಾಡಿದರು. ರಾತ್ರೋರಾತ್ರಿ ಕೂಪನ್ ಗಳನ್ನು ಹಂಚಿ ಮುಗ್ಧ ಮತದಾರರನ್ನು ಯಾಮಾರಿಸಿ ಚುನಾವಣೆ ಗೆದ್ದಿದ್ದಾರೆ. ಈಗ ಅದನ್ನು ಮೆರೆಯುತ್ತಿದ್ದಾರೆ. ಇದು ಬಹಳ ದಿನ ನಡೆಯಲ್ಲ ಎಂದು ಕಿಡಿಕಾರಿದರು. ಕಾಂಗ್ರೆಸ್ ಮೊದಲಿನಿಂದಲೂ ನಮ್ಮ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕುತ್ತಲೇ ಇದೆ. ಒಂದು ಕಡೆ ಜಾತ್ಯತೀತ ತತ್ವಗಳ ಬಗ್ಗೆ ಮಾತನಾಡುವ ಆ ಪಕ್ಷ, ಇನ್ನೊಂದೆಡೆ ಆ ತತ್ವದ ಪಕ್ಷಗಳನ್ನು ಮೂಲೋತ್ಪಾಟನೆ ಮಾಡುತ್ತಿದೆ . ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ಕಾಂಗ್ರೆಸ್ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದೆ. ಅಲ್ಪಸಂಖ್ಯಾತರಿಗೆ ಜೆಡಿಎಸ್ ಅನ್ಯಾಯ ಮಾಡುತ್ತಿದೆ ಎಂದು ಕೈ ಪಕ್ಷ ಹೊಸ ಸುಳ್ಳು ಹಬ್ಬಿಸುತ್ತಿದೆ. ಆದರೆ, ಈ ಹಿಂದೆ ಆ ಸಮುದಾಯ ಕಷ್ಟಕ್ಕೆ ಸಿಲುಕಿದಾಗ ಕುಮಾರಸ್ವಾಮಿ ಒಬ್ಬರೇ ದನಿ ಎತ್ತಿದ್ದು. ಇವತ್ತು ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ನವರಿಗೆ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 2018ರಲ್ಲಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಹನ್ನೊಂದನೇ ದಿನಕ್ಕೆ ರಾಮನಗರ ಜಿಲ್ಲೆಗೆ 540 ಕೋಟಿ ರು. ಅನುದಾನ ಕೊಟ್ಟು ಸತ್ತೆಗಾಲ ಯೋಜನೆಗೆ ಚಾಲನೆ ಕೊಟ್ಟರು. ಇವರು ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳು ಆಯಿತು. ಇನ್ನು ಜಿಲ್ಲೆಗೆ ಒಂದು ಬಿಡಿಗಾಸು ಅನುದಾನ ಬಂದಿಲ್ಲ ಎಂದು ಟೀಕಿಸಿದರು. ಜಿಲ್ಲೆಯ ಹಿರಿಯ ನಾಯಕರಾದ ಸುಬ್ಬಾ ಶಾಸ್ತ್ರಿ, ಹಾಪ್ ಕಾಮ್ಸ್ ದೇವರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜು, ಹಿರಿಯ ಮುಖಂಡ ಪ್ರಸನ್ನ ಗೌಡ, ಕಬ್ಬಾಳೆ ಗೌಡ, ಚಿನ್ನಸ್ವಾಮಿ, ನಾಗರಕಲ್ಲು ದೊಡ್ಡಿ ಶಿವಣ್ಣ, ನರಸಿಂಹ ಮೂರ್ತಿ ಮುಂತಾದ ಹಿರಿಯ ಮುಖಂಡರು ತಮ್ಮ ಅಭಿಪ್ರಾಯ ಮಂಡಿಸಿದರು. ಬಾಕ್ಸ್................. ಸಂಸದ ಸುರೇಶ್ ಅವರದ್ದು ಲೋಕಲ್ ರಾಜಕೀಯ ರಾಮನಗರ: ಮೂರು ಬಾರಿ ಸಂಸದರಾಗಿ ಏನನ್ನು ಮಾಡದ ಡಿ.ಕೆ.ಸುರೇಶ್ ರವರು ಲೋಕಲ್ ರಾಜಕೀಯ ಮಾಡಿಕೊಂಡು ಪುಡಾರಿ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ವಾಗ್ದಾಳಿ ನಡೆಸಿದರು. ರಾಮನಗರ ಜೆಡಿಎಸ್ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಡಿ.ಕೆ.ಸುರೇಶ್ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಪೊಲೀಸ್ ಠಾಣೆಗಳ ಮೂಲಕ ನಮ್ಮ ಮುಖಂಡರು, ಕಾರ್ಯಕರ್ತರನ್ನು ಹೆದರಿಸಿ ಹಾಗೂ ಆಮಿಷವೊಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ನೀಚ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಲೋಕಸಭೆ ಚುನಾವಣೆಯಲ್ಲಿ ನಾವು ತಕ್ಕ ಉತ್ತರ ಕೊಡಬೇಕಿದೆ. ಸಂಸದರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಲೋಕಲ್ ರಾಜಕೀಯ ಮಾಡಿಕೊಂಡು ಪುಢಾರಿ ಕೆಲಸ ಮಾಡುತ್ತಿದ್ದಾರೆ. ಮೂರು ಸಲ ಗೆದ್ದು ಏನು ಮಾಡಿದಿರಿ. ಕೇಸ್ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಂಜುನಾಥ್ ದೂರಿದರು. ಪೊಲೀಸರನ್ನು ಬಳಕೆ ಮಾಡಿಕೊಂಡು ನಾವು ರಾಜಕೀಯ ಮಾಡಿಲ್ಲ, ಅದನ್ನು ಕುಮಾರಣ್ಣ ಕಲಿಸಲಿಲ್ಲ. ಆದರೆ, ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಮ್ಮ ಮುಖಂಡರು, ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ. ಆಯಾಯ ಪೊಲೀಸ್ ಠಾಣೆಗಳ ಮುಂದೆ ಹೋರಾಟ ಮಾಡುತ್ತೇವೆ ಎಂದು ಎ.ಮಂಜುನಾಥ್ ಎಚ್ಚರಿಕೆ ನೀಡಿದರು. 8ಕೆಆರ್ ಎಂಎನ್ 2,3.ಜೆಪಿಜಿ 2.ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು. 3.ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಮುಖಂಡರು ಭಾಗವಹಿಸಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.