20ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಫಲಾನುಭವಿಗಳಿಗೂ ಅಂದೇ ಸವಲತ್ತುಗಳನ್ನು ವಿತರಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು 20ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಫಲಾನುಭವಿಗಳಿಗೂ ಅಂದೇ ಸವಲತ್ತುಗಳನ್ನು ವಿತರಿಸಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಮೇ 20ರಂದು ತುಮಕೂರಿನಲ್ಲಿ ನಡೆಯಲಿರುವ ಕರ್ನಾಟಕ ಸರ್ಕಾರದ 3 ವರ್ಷಗಳ ಸಾಧನೆ ಸಂಭ್ರಮ ಬೃಹತ್ ಸಮಾವೇಶ ಹಾಗೂ ತುಮಕೂರು ಜಿಲ್ಲೆಯ ಕಂದಾಯ ಇಲಾಖೆ ಹಾಗೂ ಇತರೆ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಿ ಅವರು ಮಾತನಾಡಿದರು.ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಭಾಗವಹಿಸುವ ಈ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಸವಲತ್ತುಗಳನ್ನು ವಿತರಣೆ ಮಾಡಿದರೂ ಇನ್ನಿತರೆ ಫಲಾನುಭವಿಗಳಿಗೆ ಅಂದೇ ಆ ಕ್ಷಣದಲ್ಲೇ ಸವಲತ್ತುಗಳನ್ನು ಹಾಗೂ ಹಕ್ಕುಪತ್ರಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು. ಈ ಹಿಂದೆ ಕೆಲವೊಮ್ಮೆ ವೇದಿಕೆಯಲ್ಲಿ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ನೀಡಿ ಆನಂತರ ಇತರೆ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡಲು ತೀರ ವಿಳಂಬವಾಗುವ ಸಾಧ್ಯತೆಗಳ ಬಗ್ಗೆ ಕೇಳಿದ್ದೇನೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾಡಳಿತ ಅಂತಹ ತಪ್ಪುಗಳನ್ನು ಮಾಡಬಾರದು. ಫಲಾನುಭವಿಗಳಿಗೆ ಅಂದೇ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಹಕ್ಕುಪತ್ರಗಳನ್ನು ಹಾಗೂ ಸವಲತ್ತುಗಳನ್ನು ವಿತರಿಸಲು ಕ್ರಮವಹಿಸಬೇಕು. ಈ ಸಂಬಂಧ ಪ್ರತ್ಯೇಕವಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಫಲಾನುಭವಿಗಳು ಕುಳಿತುಕೊಳ್ಳುವ ಸ್ಥಳದಲ್ಲಿಯೇ ಹಕ್ಕುಪತ್ರ ಹಾಗೂ ಇತರೆ ಸೌಲಭ್ಯಗಳನ್ನು ವಿತರಿಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.ಜಿಲ್ಲೆಯಾದ್ಯಂತ ಎಲ್ಲಾ 10 ತಾಲೂಕುಗಳಿಂದ ಸುಮಾರು ೨ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಈ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಸಂಬಂಧಿಸಿದ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳನ್ನು ಆಯಾ ತಾಲೂಕುಗಳ ಇತರೇ ಪ್ರದೇಶಗಳಿಂದ ಹೊರಡುವ ಜಾಗದಲ್ಲಿಯೇ ಫಲಾನುಭವಿಗಳಿಗೆ ಬೆಳಗಿನ ಉಪಹಾರ ನಂತರವೇ ಬಸ್ಸುಗಳು ಹೊರಡಬೇಕು. ಈ ಸಂಬಂಧ ಫಲಾನುಭವಿಗಳ ಸುರಕ್ಷತೆ ಹಾಗೂ ಉಪಚಾರದಲ್ಲಿ ಯಾವುದೇ ಕೊರತೆ ಆಗಬಾರದು. ಫಲಾನುಭವಿಗಳು ದೂರದಿಂದ ಕಾರ್ಯಕ್ರಮದ ಜಾಗಕ್ಕೆ ನಡೆದುಕೊಂಡು ಬರಲು ಅವಕಾಶ ನೀಡದೆ ಕಾರ್ಯಕ್ರಮದ ಜಾಗದಲ್ಲಿಯೇ ಬಸ್ಸುಗಳು ಫಲಾನುಭವಿಗಳನ್ನು ಇಳಿಸಿ, ಕಾರ್ಯಕ್ರಮದ ನಂತರ ಫಲಾನುಭವಿಗಳನ್ನು ಕರೆದೊಯ್ಯಲು ವ್ಯವಸ್ಥೆ ಆಗಬೇಕು ಸೂಚಿಸಿದರು.
ಕಾರ್ಯಕ್ರಮಕ್ಕಾಗಿ ಸಿಎಂ ಸೇರಿ ಸಚಿವ ಸಂಪುಟದ ಎಲ್ಲಾ ಸಚಿವರು, ಹಿರಿಯ ಅಧಿಕಾರಿಗಳು ಆಗಮಿಸುವುದರಿಂದ ಯಾವುದೇ ಕೊರತೆಯಾಗದಂತೆ ಅವರಿಗೆ ಆತಿಥ್ಯದ ವ್ಯವಸ್ಥೆಯಾಗಬೇಕು. ಈ ಹಿನ್ನೆಲೆಯಲ್ಲಿ ತುಮಕೂರು ಮಾದರಿ ಎಂಬ ಬಗ್ಗೆ ಯಾವುದೇ ಕೊರತೆಯಿಲ್ಲದಂತೆ ಅತ್ಯಂತ ಶಿಸ್ತುಬದ್ಧವಾಗಿ ಗೊಂದಲಗಳಿಗೆ ಆಸ್ಪದ ನೀಡದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಬಿ.ವಿ. ಅಶ್ವಿಜ, ಎಸ್ಪಿ ಅಶೋಕ್ ಕೆ.ವಿ. ಸೇರಿದಂತೆ ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.