ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕಾಂಗ್ರೆಸ್ ವಿರುದ್ಧ ಗದಾ ಪ್ರಹಾರ ಮಾಡುತ್ತಿದ್ದು, ಈ ಬಗ್ಗೆ ಮನದಟ್ಟು ಮಾಡಲು ಶೀಘ್ರದಲ್ಲಿಯೇ ರಾಷ್ಟ್ರಪತಿ ಭೇಟಿ ಮಾಡುವುದಾಗಿ ಕಾಂಗ್ರೆಸ್ ಪಕ್ಷದ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು. ನಗರದಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದರು. ಸಿಎಂ ಮತ್ತು ಡಿಸಿಎಂ ದೆಹಲಿ ಭೇಟಿ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಎಲ್ಲಾ ಶಾಸಕರು ದೆಹಲಿಗೆ ಹೋಗಿಲ್ಲ. ರಾಜ್ಯದ ಇವತ್ತಿನ ಪರಿಸ್ಥಿತಿ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಹಿತಿ ನೀಡಲು ಹೋಗಿದ್ದಾರೆ. ರಾಷ್ಟ್ರಪತಿ ಅವರನ್ನು ಭೇಟಿ ಮಾಡೋಣ ಎಂದು ಎಲ್ಲಾ ಶಾಸಕರು ಒತ್ತಾಯ ಮಾಡುತ್ತಿದ್ದೇವೆ. ಬಿಜೆಪಿ, ಜೆಡಿಎಸ್ ನವರು ಗದಾಪ್ರಹಾರ ಮಾಡುತ್ತಿದ್ದು, ಅದನ್ನು ರಾಷ್ಟ್ರಪತಿಗಳಿಗೆ ಮನದಟ್ಟು ಮಾಡಿಕೊಡೋಣ ಎಂದು ಹೇಳಿದ್ದೇವೆ. ಆದಷ್ಟು ಬೇಗ ರಾಷ್ಟ್ರಪತಿಗಳನ್ನು ಎಲ್ಲಾ ಶಾಸಕರು ಭೇಟಿ ಮಾಡುತ್ತೇವೆ ಎಂದರು. ಕಾರಿನಲ್ಲಿ ದಾಖಲೆಗಳಿವೆ: ಮುಡಾ ಹಗರಣ ವಿಚಾರವಾಗಿ ಮಾತನಾಡುತ್ತಾ, ನಾನೊಬ್ಬ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ. ನಾನು ಮೂರು ಬಾರಿ ಶಾಸಕನಾಗಿ ಮುಡಾದಲ್ಲಿ ಕೆಲಸ ಮಾಡಿದ್ದೇನೆ. ಅರ್ಜಿ ಇಲ್ಲದೆಯೇ ಹೇಗೆ ನಿವೇಶನ ಮಂಜೂರು ಮಾಡಲು ಆಗುತ್ತದೆ. ಅರ್ಜಿ ಇಲ್ಲ ಅಂತ ನಾವೇನು ಹೇಳಿಲ್ಲ. ಮಂಜೂರಾತಿ ಮಾಡಿಕೊಡಿ ಎಂದು ಅರ್ಜಿ ಕೊಟ್ಟಿದ್ದಾರೆ. ಯಾರ ಯಾರದ್ದು ಬೇನಾಮಿ ಆಸ್ತಿ ಇದೆ ಎನ್ನುವ ಬಗ್ಗೆ ತನಿಖೆ ಆಗುತ್ತಿದೆ. ಕುಮಾರಣ್ಣ, ಕುಮಾರಣ್ಣನ ಸ್ನೇಹಿತರು ಎಷ್ಟು ಬೇನಾಮಿ ಆಸ್ತಿ ಮಾಡಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ಅವರ ಕುಟುಂಬದ್ದು ಎಷ್ಟು ಬೇನಾಮಿ ಆಸ್ತಿಗಳಿವೆ? ಅಂತಾ ಹೇಳುತ್ತೇವೆ. ನನ್ನ ಕಾರಿನಲ್ಲಿ ದಾಖಲೆಗಳಿವೆ. ಸುಮ್ಮನೆ ವೈಯುಕ್ತಿಕ ದ್ವೇಷ ಮಾಡಬಾರದು ಅಂತ ಸುಮ್ಮನಿದ್ದೇವೆ. ಯಾವ್ಯಾವ ಶಾಸಕರು ಏನೇನು ಮಾಡಿದ್ದಾರೆ ಅನ್ನೋದನ್ನ ಪೂರ್ಣ ಪ್ರಮಾಣದಲ್ಲಿ ಇನ್ನೂ ಎರಡು ದಿನಗಳಲ್ಲಿ ಹೇಳುತ್ತೇವೆ ಎಂದರು.ಶಿಕ್ಷೆ ಆಗಬೇಕು: ತಪ್ಪು ಬರೆದಾಗ ವೈಟ್ನರ್ ಹಾಕೋದು ಸಹಜ. ನ್ಯಾಯಾಂಗ ತನಿಖೆಗೆ ಕೊಟ್ಟಿದ್ದೇವೆ. ಪರಿಶೀಲನೆ ಮಾಡಲಿ. ಯಡಿಯೂರಪ್ಪ ಅವರ ತಂಗಿ ಮಕ್ಕಳಿಗೆ ನಿವೇಶನಗಳನ್ನು ಕೊಟ್ಟಿಲ್ಲವೆ. ೫೦:೫೦ಯಲ್ಲಿ ತಗೆದುಕೊಂಡಿಲ್ಲವೆ. ಪ್ರಾಮಾಣಿಕರಾಗಿದ್ದರೆ ಅವರೇ ಹೇಳಲಿ. ಜೆಡಿಎಸ್ ಶಾಸಕರು ೫೦:೫೦ರಲ್ಲಿ ಎಷ್ಟು ತೆಗೆದುಕೊಂಡಿದ್ದಾರೆ, ೧೮೦೦-೨೦೦೦ ಸೈಟ್‌ಗಳನ್ನು ವ್ಯವಸ್ಥಿತವಾಗಿ ತೆಗೆದುಕೊಂಡಿದ್ದಾರೆ. ಅದು ಯಾರದ್ದು? ಇವರು, ಇವರ ತಮ್ಮನ, ಅಕ್ಕನ ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳಿಗೆ ಕೊಟ್ಟಿಲ್ವಾ! ಸಿದ್ದರಾಮಯ್ಯ ಅವರು ನೇರ ಅರ್ಜಿದಾರರಲ್ಲ. ಸಿದ್ದರಾಮಯ್ಯ ಅವರ ಒಂದೇ ಒಂದು ಸಹಿ ಇಲ್ಲ. ಅಧಿಕಾರಿಗಳು 50:50 ನಿವೇಶನಗಳನ್ನು ಕೊಡುವುದನ್ನು ಯಾವುದೇ ಕಾರಣಕ್ಕೂ ಸಭೆಗೆ ಮಂಡಿಸಲ್ಲ. ಅವರಿಗೆ ಅಧಿಕಾರ ಇದೆ ಅದಕ್ಕೆ ಮಂಡಿಸಲ್ಲ. ಇದಕ್ಕೆ ಅಧಿಕಾರಿಗಳು ಕಾರಣ ಹೊರತು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಮಿತಿ ಕಾರಣ ಅಲ್ಲ. ಯಾರ ಗಮನಕ್ಕೂ ತಾರದೇ ಅಧಿಕಾರಿಗಳೇ ಮಾಡಿರುವುದು ಎಂದು ದೂರಿದರು. ಮುಡಾ ಅಧ್ಯಕ್ಷರು, ಯಾವ ಸದಸ್ಯರ ಗಮನಕ್ಕೂ ಬರಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಸವಲತ್ತು ಪಡೆದಿರುವ ಎಲ್ಲರ ಹೆಸರು ಹೇಳಲಿ. ತನಿಖೆ ನಡೆಯುತ್ತಿದೆ ಸತ್ಯಾಂಶ ಹೊರಬರುತ್ತದೆ ಎಂದು ಎಚ್ಚರಿಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ತಪ್ಪು ಮಾಡದವರು ತನಿಖೆಗೆ ಏಕೆ ಹೆದರಬೇಕು. ಜನಾರ್ಧನರೆಡ್ಡಿ ವಿರುದ್ಧ ೧೫೦ ಕೋಟಿ ರು.ಹಗರಣ ತನಿಖೆ ಆಯ್ತ. ಸಿಬಿಐ, ಇಡಿ ಎಲ್ಲರಿಗೂ ತನಿಖೆಗೆ ಕೊಟ್ಟರು. ಲೋಕಾಯುಕ್ತದವರು ೨೦೨೩ರಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾ, ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂಬ ಸಂಪುಟ ಸಭೆಯಲ್ಲಿ ಹೇಳಿಕೆ ವಿಚಾರವಾಗಿದೆ. ಎಲ್ಲಾ ಶಾಸಕರು ಈ ರೀತಿ ನಡೆಯುತ್ತಿದೆ ಎಂದು ಹೇಳಿದ್ದೇವೆ. ಬಿಜೆಪಿ-ಜೆಡಿಎಸ್ ನವರು ಜನತಂತ್ರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸರ್ಕಾರವನ್ನು ಅಲುಗಾಡಿಸಲು ಹೊರಟಿದ್ದಾರೆ. ಸರ್ಕಾರವನ್ನು ಕಿತ್ತು ಹಾಕಲು ಹೊರಟಿದ್ದಾರೆ. ಕಿತ್ತಾಕಿ, ಕಿತ್ತಾಕಿ ಬಿಜೆಪಿಯವರಿಗೆ ಅಭ್ಯಾಸ ಆಗಿದೆ. ಹಲವು ರಾಜ್ಯಗಳಲ್ಲಿ ಇ.ಡಿ ಇಟ್ಟುಕೊಂಡು ಹೆದರಿಸಿ ಸರ್ಕಾರ ಬೀಳಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯನ್ನು ಬಿಜೆಪಿಯವರು ಕಿತ್ತು ಹಾಕಲು ಹೊರಟಿದ್ದಾರೆ. ಇದಕ್ಕೆ ಜೆಡಿಎಸ್ ಸಹಕಾರ ಕೊಟ್ಟಿದೆ ಎಂದು ದೂರಿದರು.
ಯಾರು ಪಕ್ಷವನ್ನು ಮುನ್ನಡೆಸುತ್ತಾರೆ ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅವರೇ ಸ್ವತಃ ಬಿಟ್ಟುಕೊಡಲು ಸಿದ್ಧರಿದ್ದಾರೆ. ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿ, ಎರಡು ಜವಾಬ್ದಾರಿ ಖಾತೆಗಳನ್ನು ಇಟ್ಟುಕೊಂಡು ನಿರ್ವಹಿಸುವುದು ಕಷ್ಟವಾಗಿದೆ. ನೀವೇ ಯಾರನ್ನಾದರೂ ಮಾಡಿ ಅಂತ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಶೀಘ್ರದಲ್ಲಿ ಬದಲಾವಣೆ ಆಗಲಿದೆ ಎಂದರು.