ಆದಿವಾಸಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲ ಸಹಕಾರ: ಹನೂರು ಶಾಸಕ ಎಂ.ಆರ್.ಮಂಜುನಾಥ್

| Published : Aug 10 2024, 01:37 AM IST

ಆದಿವಾಸಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲ ಸಹಕಾರ: ಹನೂರು ಶಾಸಕ ಎಂ.ಆರ್.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಿನ ಮೂಲ ನಿವಾಸಿಗಳಾಗಿರುವ ಆದಿವಾಸಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳು ತಲುಪುವಂತೆ ಮಾಡಲು ಎಲ್ಲ ಪ್ರಯತ್ನ ಮತ್ತು ಸಹಕಾರ ನೀಡುವುದು ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು. ಚಾಮರಾಜನಗರದಲ್ಲಿ ಆದಿವಾಸಿಗಳ ದಿನಾಚರಣೆಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಡಿನ ಮೂಲ ನಿವಾಸಿಗಳಾಗಿರುವ ಆದಿವಾಸಿಗಳಿಗೆ ಎಲ್ಲ ಮೂಲಭೂತ ಸೌಲಭ್ಯಗಳು ತಲುಪುವಂತೆ ಮಾಡಲು ಎಲ್ಲ ಪ್ರಯತ್ನ ಮತ್ತು ಸಹಕಾರ ನೀಡುವುದು ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಭರವಸೆ ನೀಡಿದರು.ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ವತಿಯಿಂದ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ೩೦ನೇ ವಿಶ್ವ ಆದಿವಾಸಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇರುವ ಮೂಲಭೂತ ಹಕ್ಕುಗಳು ಸಮರ್ಪಕವಾಗಿ ತಲುಪುವಂತೆ ಆಗಬೇಕು. ತಮ್ಮ ಕಲೆ ಮತ್ತು ಸಂಸ್ಕೃತಿಯ ಮೂಲಕ ಸಂಘಟಿತರಾಗಬೇಕು. ಇದರ ಜತೆಗೆ ಆದಿವಾಸಿಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಬೇಕು ಎಂದರು.

ಈಗಾಗಲೇ ಕಳೆದ ಸದನದಲ್ಲಿ ನಿಮಗೆ ಭೂಮಿ ಹಕ್ಕು ನೀಡುವ ನಿಟ್ಟಿನಲ್ಲಿ ಪ್ರಸ್ತಾಪಿಸಿ ಫ್ರೂಟ್ ತಂತ್ರಾಂಶಕ್ಕೆ ಸೇರಿಸಿ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಲಾಗಿದ್ದು, ಈಗ ಇದು ಪ್ರಗತಿಯಲ್ಲಿದ್ದು ಕೆಲವರಿಗೆ ಕಿಸಾನ್ ಯೋಜನೆ ಸಿಕ್ಕಿದೆ. ಮುಂದೆ ಎಲ್ಲರಿಗೂ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಇಲಾಖೆಯ ಕಾನೂನು ತೊಡರುಗಳನ್ನು ಬಗೆಹರಿಸಿ ಪೋಡುಗಳಲ್ಲಿ ಮನೆ ದುರಸ್ತಿ, ವಿದ್ಯುತ್ ಸಂಪರ್ಕ, ರಸ್ತೆ ನಿರ್ಮಾಣ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಡಿನಲ್ಲಿ ವಾಸವಾಗಿರುವ ನಿಮಗೆ ಕಾಡು ಪ್ರಾಣಿಗಳಿಂದ ಆಗುವ ಅನಾಹುತಗಳಿಗೆ ಪರಿಹಾರದಲ್ಲಿ ತಾರತಮ್ಯವಿರುವುದು ಸರಿಯಲ್ಲ ನಿಜವಾದ ಪರಿಹಾರ ನಿಮಗೆ ಸಿಗುವಂತಾಗಬೇಕು.ಶಿಕ್ಷಣ, ಉದ್ಯೋಗದೊಂದಿಗೆ ಆರ್ಥಿಕ ಸ್ವಾವಲಂಬನೆ ಸಾಧಿಸುವಂತೆ ಮಾಡಲು ನೆರವು ನೀಡಲಾಗುವುದು, ಇದು ಸ್ಪರ್ಧಾತ್ಮಕ ಯುಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ. ಹೀಗಾಗಿ ಅದಿವಾಸಿ ಮಕ್ಕಳ ವಿದ್ಯಾರ್ಹತೆಗೆ ತಕ್ಕಂತೆ ತರಬೇತಿ ನೀಡಲು ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಸಲ್ಲಿಸಿರುವ ಹಕ್ಕೊತ್ತಾಯಗಳ ಬಗ್ಗೆ ಸರ್ಕಾರದೊಡನೆ ಚರ್ಚಿಸುವುದಾಗಿ ತಿಳಿಸಿದರು.

ಸಂಘದ ಕಾರ್ಯದರ್ಶಿ ಡಾ.ಸಿ. ಮಾದೇಗೌಡ ಪ್ರಾಸ್ತಾವಿಕ ಮಾತನಾಡಿ, ನಮ್ಮ ಹಕ್ಕುಗಳಿಗಾಗಿ ನಾವು ತಲತಲಾಂತರದಿಂದ ಹೋರಾಡಿಕೊಂಡು ಬಂದಿದ್ದೇವೆ, ಬಿರ್ಸಾ ಮುಂಡಾರವರ ಹೋರಾಟ ನಮಗೆ ಸ್ಫೂರ್ತಿ ನೀಡಿದೆ ಎಂದರು.

ಸಂರಕ್ಷಿತ ಪ್ರದೇಶ, ಹುಲಿ ಯೋಜನೆ ವನ್ಯಜೀವಿ ಧಾಮ ಎಂಬೆಲ್ಲಾ ಹೆಸರಿನಲ್ಲಿ ಕಾಡಿನ ವಾಸಿಗಳಾದ ನಮಗೆ ಇನ್ನು ಸರಿಯಾಗಿ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ, ೨೦೦೬ರ ಕಾಯ್ದೆ ಅನ್ವಯ ನಮಗೆ ಭೂಮಿ ಹಕ್ಕು ಸಿಕ್ಕಿದೆ, ಈ ಬಗ್ಗೆ ಸರ್ಕಾರ ಕ್ರಮಕೈಗೊಂಡು ನಮಗೆ ಹಕ್ಕು ಪತ್ರ ನೀಡಿ ಸರ್ಕಾರ ಸೌಲಭ್ಯ ಸಿಗುವಂತೆ ಮಾಡಬೇಕು ಎಂದರು.ಆದಿವಾಸಿಗಳಾದ ನಾವು ಅರಣ್ಯದ ರಕ್ಷಕರಾಗಿದ್ದೇವೆ. ವಿಶ್ವ ಆದಿ ದಿನಾಚರಣೆ ಉದ್ದೇಶ ಆದಿವಾಸಿಗಳ ಹಕ್ಕುಗಳು, ಸಂಸ್ಕೃತಿ ಅರಣ್ಯ ಸಂರಕ್ಷಣೆ, ಮಹಿಳಾ ಹಕ್ಕುಗಳ, ಮಕ್ಕಳ ಹಕ್ಕುಗಳ ರಕ್ಷಣೆ, ಆದಿವಾಸಿಗಳ ಗುರುತಿಸುವಿಕೆ ಮೇಲೆ ಬೆಳಕು ದಿನಾಚರಣೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಯು. ರಂಗೇಗೌಡ ಆಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಜಿಪಂ ಸಿಇಒ ಮೊನಾ ರೋತ್, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಂಜುಳ, ಸಮಾಜ ಸೇವಕ ನಿಶಾಂತ್, ಡಾ.ಪ್ರಶಾಂತ್ ಭಾಗವಹಿಸಿದ್ದರು. ಸಂಘದ ಪದಾಧಿಕಾರಿಗಳು, ಆದಿವಾಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜೆ.ಎಚ್. ಪಟೇಲ್ ಸಭಾಂಗಣದವರೆಗೆ ಹಕ್ಕುಗಳಿಗಾಗಿ ಮೆರವಣಿಗೆ ನಡೆಸಲಾಯಿತು.