ಗಂಗೊಳ್ಳಿಗೂ ಸಂಪರ್ಕ ಸೇತುವೆ ನಿರ್ಮಿಸಬೇಕು ಅನ್ನುವುದು ನನ್ನ ಕನಸು. ಅದನ್ನು ಸಾಧ್ಯವಾಗಿಸಲು ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಕುಂದಾಪುರ: ಸಿಗಂಧೂರು ಸೇತುವೆ ಸಹಿತ ಶಿವಮೊಗ್ಗ ಜಿಲ್ಲೆಯ ಅನೇಕ ಊರುಗಳಿಗೆ ಸೇತುವೆ ನಿರ್ಮಿಸುವ ಮೂಲಕ ಸಂಪರ್ಕ ಸಾಧ್ಯವಾಗಿದೆ. ಅದೇ ರೀತಿ ಗಂಗೊಳ್ಳಿಗೂ ಸಂಪರ್ಕ ಸೇತುವೆ ನಿರ್ಮಿಸಬೇಕು ಅನ್ನುವುದು ನನ್ನ ಕನಸು. ಅದನ್ನು ಸಾಧ್ಯವಾಗಿಸಲು ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಪಂಚಗಂಗಾವಳಿ ನದಿಗೆ ಅಡ್ಡಲಾಗಿ ಗಂಗೊಳ್ಳಿ - ಕುಂದಾಪುರ ಸೇತುವೆ ನಿರ್ಮಾಣದ ಪ್ರಸ್ತಾವಿತ ಪ್ರದೇಶವನ್ನು ಸೋಮವಾರ ವೀಕ್ಷಿಸಿ, ಅಧಿಕಾರಿಗಳಿಂದ ಡಿಪಿಆರ್ ಬಗ್ಗೆ ಮಾಹಿತಿ ಪಡೆದು, ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ಈ ಬಗ್ಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಸೇತುವೆ ಕನಸು ಈಡೇರುವ ನಿರೀಕ್ಷೆಯಿದೆ ಎಂದರು.ಗಂಗೊಳ್ಳಿಯಿಂದ ಕುಂದಾಪುರ ನಗರವನ್ನು ಸಂಪರ್ಕಿಸುವ ಸುಮಾರು 1.3 ಕಿ.ಮೀ. ದೂರದ ಸೇತುವೆಗೆ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದೆ. ಜ. 30 ರೊಳಗೆ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದು, ಅದಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 3 ಪ್ರತ್ಯೇಕ ಡಿಪಿಆರ್ ಸಿದ್ಧಪಡಿಸಿದ್ದು, ಶೀಘ್ರ ಸಲ್ಲಿಸಲಾಗುವುದು ಎಂದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರದ ವಿಭಾಗದ ಯೋಜನಾ ನಿರ್ದೇಶಕ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಸಂಸದರು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಹಿಂದೆ ಕೊಲ್ಲೂರು ಕಾರಿಡಾರ್ ಯೋಜನೆ ಕುರಿತಂತೆ ಪ್ರವಾಸೋದ್ಯಮ ಸಚಿವ ಗಜೇಂದ್ರ ಶೇಖಾವತ್ ಇಲ್ಲಿಗೆ ಭೇಟಿ ನೀಡಿದ್ದಾಗ ಪ್ರಸ್ತಾವನೆ ಸಲ್ಲಿಸಲಾಗಿದೆ. ಮರವಂತೆ ಬೀಚ್, ಸೋಮೇಶ್ವರ ಬೀಚ್, ಕೊಲ್ಲೂರು ದೇವಸ್ಥಾನವನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ 100 ಕೋ.ರು. ವೆಚ್ಚದ ಯೋಜನೆ ಇದಾಗಿದ್ದು, ಕೆಲವೊಂದು ಅಡೆತಡೆಗಳನ್ನು ನಿವಾರಿಸಿದ್ದು, ಮುಂಬರುವ ಬಜೆಟ್ ನಲ್ಲಿ ಮಂಜೂರಾಗುವ ವಿಶ್ವಾಸವನ್ನು ಸಂಸದರು ವ್ಯಕ್ತಪಡಿಸಿದ್ದಾರೆ.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ, ಉಪಾಧ್ಯಕ್ಷ ಸುರೇಶ ಬಟವಾಡಿ, ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು, ಮೀನುಗಾರ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.