ಸಾರಾಂಶ
ಯುವ ನಿಧಿಗೆ 2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾದಲ್ಲಿ ಉತ್ತೀರ್ಣರಾದ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗ ಹೊಂದದೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆ ಲಭಿಸಲಿದೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಯುವ ಜನರ ಶ್ರೇಯೋಭಿವೃದ್ಧಿಗೆ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆಗೆ ಅರ್ಹ ಪ್ರತಿಯೊಬ್ಬ ಫಲಾನುಭವಿಗಳು ಅರ್ಜಿ ಸಲ್ಲಿಸಿ, ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.ಅವರು ಮಂಗಳವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಜಾರಿಗೆ ತಂದಿರುವ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 2023ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾದಲ್ಲಿ ಉತ್ತೀರ್ಣರಾದ ಸರ್ಕಾರಿ, ಖಾಸಗಿ ಹಾಗೂ ಸ್ವಯಂ ಉದ್ಯೋಗ ಹೊಂದದೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್‌ನಲ್ಲಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಪದವಿ ಅಭ್ಯರ್ಥಿಗಳಿಗೆ ಪ್ರತೀ ತಿಂಗಳು 3000 ರೂ., ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1500 ರು. ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು. ಅರ್ಜಿ ಸಲ್ಲಿಸಿದಾಗಿನಿಂದ ಉದ್ಯೋಗ ದೊರೆಯುವ ವರೆಗೆ ಅಥವಾ 2 ವರ್ಷ ಗರಿಷ್ಠ ಅವಧಿಗೆ ಮಾತ್ರ ಭತ್ಯೆ ನೀಡಲಾಗುವುದು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್, ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಪೃಥ್ವಿರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.