ಶಿಕಾರಿಪುರ ಕ್ಷೇತ್ರಕ್ಕೆ ಸಕಲ ಸೌಲಭ್ಯ: ಸಂಸದ ರಾಘವೇಂದ್ರ
KannadaprabhaNewsNetwork | Published : Oct 16 2023, 01:45 AM IST
ಶಿಕಾರಿಪುರ ಕ್ಷೇತ್ರಕ್ಕೆ ಸಕಲ ಸೌಲಭ್ಯ: ಸಂಸದ ರಾಘವೇಂದ್ರ
ಸಾರಾಂಶ
ಕೆಎಚ್‌ಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಆಸ್ಪತ್ರೆ
ಕನ್ನಡಪ್ರಭ ವಾರ್ತೆ, ಶಿಕಾರಿಪುರ ಆರೋಗ್ಯ, ಶಿಕ್ಷಣ, ನೀರಾವರಿ, ವಿದ್ಯುತ್ ಸಹಿತ ಜನಸಾಮಾನ್ಯರಿಗೆ ಅಗತ್ಯವಿರುವ ಎಲ್ಲ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮೂಲಕ ತಾಲೂಕಿನ ಜನತೆಯ ಸ್ವಾಭಿಮಾನದ ಬದುಕಿಗೆ ಅಗತ್ಯವಿರುವ ಸಕಲ ಸೌಲಭ್ಯವನ್ನು ಕಲ್ಪಿಸಲಾಗಿದೆ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಭಾನುವಾರ ಪಟ್ಟಣದ ಕೆಎಚ್‌ಬಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಜನಸೇವೆಗೆ ಸಮರ್ಪಣೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಂದಾಜು 50 ಎಕರೆ ವಿಸ್ತೀರ್ಣದ ಕೆಎಚ್‌ಬಿ ಬಡಾವಣೆ ನಿರ್ಮಾಣಕ್ಕಾಗಿ ರೈತರ ಭೂ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅನಂತರದಲ್ಲಿ ರೈತ ವರ್ಗಕ್ಕೆ ತಾಲೂಕಿನ ಸಮಗ್ರ ಅಭಿವೃದ್ಧಿ ಹಿನ್ನೆಲೆ ವಸ್ತುಸ್ಥಿತಿ ಮನವರಿಕೆ ಮಾಡಿದ ನಂತರದಲ್ಲಿ ರೈತರು ಭೂಮಿಯನ್ನು ನೀಡುವ ಮೂಲಕ ತ್ಯಾಗ ಮಾಡಿದ್ದಾರೆ ಎಂದರು. ರೈತರ ಭೂ ತ್ಯಾಗವನ್ನು ಜನತೆ ಹಿತಕ್ಕಾಗಿ ಸಂಪೂರ್ಣ ಬಳಸಿಕೊಳ್ಳುವ ದಿಸೆಯಲ್ಲಿ ಕೆಎಚ್ಬಿ ಬಡಾವಣೆ ನಿರ್ಮಿಸಿ ಸಿಎ ನಿವೇಶನದಲ್ಲಿ ಅಂದಾಜು ರೂ.25 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು. 150 ಹಾಸಿಗೆಯ ನೂತನ ಆಸ್ಪತ್ರೆ ಸಹಿತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು ಇದೀಗ 250 ಹಾಸಿಗೆಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಇದರೊಂದಿಗೆ ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಯು 50 ಹಾಸಿಗೆ ಸಹಿತ ತಾಲೂಕಿನ ಜನತೆ ಹಿತಕ್ಕಾಗಿ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯವಾದ 400 ಹಾಸಿಗೆ ಮಿಗಿಲಾದ ಆಸ್ಪತ್ರೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಾನಂದ್, ಗುತ್ತಿಗೆದಾರ ಶ್ರೀನಿವಾಸ್ ಸಹಿತ ಗಣ್ಯರನ್ನು ಸನ್ಮಾನಿಸಲಾಯಿತು. ಮುಖಂಡ ಗುರುಮೂರ್ತಿ, ಹಾಲಪ್ಪ, ವಸಂತಗೌಡ, ಚನ್ನವೀರಪ್ಪ, ರುದ್ರೇಶ್, ಗುರುರಾಜ್ ಜಕ್ಕಿನಕೊಪ್ಪ, ಪ್ರವೀಣ ಬೆಣ್ಣೆ, ಪುರಸಭಾ ಸದಸ್ಯೆ ರೇಖಾಬಾಯಿ, ರೂಪಕಲಾ ಹೆಗ್ಡೆ, ರೇಣುಕಸ್ವಾಮಿ, ಪಾಲಾಕ್ಷಪ್ಪ, ತಜ್ಞ ವೈದ್ಯ ಡಾ.ಶ್ರೀನಿವಾಸ್, ಸಿಬ್ಬಂದಿ ಉಪಸ್ಥಿತರಿದ್ದರು. - - - -15ಕೆಎಸ್.ಕೆಪಿ2: ಧಾರ್ಮಿಕ ಕಾರ್ಯದಲ್ಲಿ ಸಂಸದ ರಾಘವೇಂದ್ರ ಪಾಲ್ಗೊಂದರು.