ಸಾರಾಂಶ
ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭ
ಕನ್ನಡಪ್ರಭ ವಾರ್ತೆ ಹೊನ್ನಾಳಿಜನ ಸಮುದಾಯದವರು ಸರ್ಕಾರಿ ಯೋಜನೆಗಳನ್ನು ತಮ್ಮದು ಎಂದುಕೊಂಡು ನಿರ್ವಹಣೆ ಮಾಡಿದರೆ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ಸಾರ್ಥಕತೆ ಪಡೆಯುತ್ತವೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ನಗರದಲ್ಲಿ ಭಾನುವಾರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಲಿಂಗಾಪುರ ಗ್ರಾಮ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಸರಬರಾಜು, ನೈರ್ಮಲ್ಯ ಇಲಾಖೆ, ಜಲಜೀವನ ಮಿಷನ್ ಯೋಜನೆಯಡಿ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು.ಜಲಜೀವನ್ ಮಿಷನ್ ಕಾಮಾಗಾರಿ ಬಹುಪಾಲು ಎಲ್ಲಾ ಗ್ರಾಮಗಳಲ್ಲಿ ನಡೆಯುತ್ತಿದ್ದು, ಇದರ ಉದ್ದೇಶ ಸರ್ವರಿಗೂ ಪ್ರತಿ ದಿನ 24 ಗಂಟೆಯೂ ಕೂಡ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದಾಗಿದೆ. ಆದರೆ ಕೆಲವಾರು ಗ್ರಾಮ ಪಂಚಾಯಿತಿಗಳು ಈ ಯೋಜನೆ ಅನುಷ್ಠಾನಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದ್ದು, ಕೆಲ ಗ್ರಾಮಗಳಲ್ಲಿ ಉತ್ತಮ ಗುಣಮಟ್ಟದ ನಲ್ಲಿಗಳನ್ನು ಹಾಕಲಾಗಿದೆ ಆದರೆ ಕೆಲವರು ನಲ್ಲಿಗಳನ್ನು ಕಿತ್ತು ಹಾಕಿರುವ ಪ್ರಕರಣಗಳು ಇರುವುದು ದುರಾದೃಷ್ಟಕರ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಲಜೀವನ್ ಯೋಜನೆ ಅನುಷ್ಠಾನ, ನಿರ್ವಹಣೆ ಬಗ್ಗೆ ಪ್ರತಿಜ್ಞಾವಿಧಿಯನ್ನು ಎಲ್ಲರಿಗೂ ಬೋಧಿಸಿದರು.ಈ ಯೋಜನೆಯಡಿ. ನಿರ್ವಹಣೆಗೆ ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ವಿವಿಧ ಅಧಿಕಾರಿಗಳು ಒಟ್ಟು 22 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ಅವಳಿ ತಾಲೂಕುಗಳಲ್ಲಿ 59 ಕೆರೆಗಳಲ್ಲಿ ನೀರು ತುಂಬಿಸಲಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮಾತನಾಡಿ, ಸ್ವಾರ್ಥವನ್ನು ಬಿಟ್ಟು ತ್ಯಾಗವನ್ನು ರೋಢಿಸಿಕೊಂಡರೆ ಸಮಾಜ ಸಂತೋಷದಿಂದ ಇರುತ್ತದೆ ಈ ಕುರಿತು ಎಲ್ಲರೂ ಯೋಚನೆ ಮಾಡಬೇಕು. ನೀರು ಅಮೂಲ್ಯವಾದದ್ದು. ಅದನ್ನು ಮಿತವಾಗಿ ಬಳಸಬೇಕು.ಸರ್ಕಾರದ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಈ ಗ್ರಾಮದಲ್ಲಿ ವಾರದ ಏಳು ದಿನ, ದಿನದ 24 ಗಂಟೆಯೂ ನಿಮ್ಮ ಮನೆಯ ನಳದಲ್ಲಿ ನೀರು ಬರುತ್ತದೆ. ನೀರಿನ ಶುದ್ಧೀಕರಣ ಪ್ರತಿ ತಿಂಗಳು ಆಗುವುದರಿಂದ ಯಾವುದೇ ರೀತಿಯ ಕಾಯಿಲೆಗಳು ನಿಮಗೆ ಕಾಣಿಸಿಕೊಳ್ಳುವುದಿಲ್ಲ. ಒಂದು ತಿಂಗಳಿಗೆ 100 ರು. ಶುಲ್ಕ ನಿಗದಿ ಮಾಡಿದೆ. ನೀರನ್ನು ಪ್ರತಿ ತಿಂಗಳು ಲ್ಯಾಬ್ ಗೆ ಕಳುಹಿಸಿ ಟೆಸ್ಟ್ ಮಾಡಲಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಮುರುಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್, ಕಾರ್ಯನಿರ್ವಾಹಕ ಅಭಿಯಂತರ ಷಣ್ಮುಖ, ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮ್ಲಾ ನಾಯಕ್, ಗ್ರಾಪಂ ಉಪಾಧ್ಯಕ್ಷ ಎಚ್.ಜೆ.ವೆಂಕಟೇಶ್, ಜೆಜೆಎಂ ಯೋಜನಾ ನಿರ್ದೇಶಕ ಅಜಯ್ ಸಿನ್ಹ, ಪಿಡಿಒ ಧರ್ಮಪ್ಪ, ನಾಗರಾಜ್, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))