ಭವಿಷ್ಯತ್‌ನಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನದಿಂದ ಉದ್ದಿಮೆದಾರರನ್ನು ಸಂಪರ್ಕಿಸಿ ಸಿಎಸ್‌ಆರ್ ಅನುದಾನದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ಮನವಿಗೆ ಸ್ಪಂದಿಸಿದ ಉದ್ದಿಮೆ ಅಧಿಕಾರಿಗಳು ತಾಲೂಕಿನ ಆಗಮಿಸಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸುತ್ತಿವೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ಪಂಚಾಯ್ತಿಗೊಂದು ಮಲ್ಟಿ ಮೀಡಿಯಾ ಸ್ಥಾಪಿಸುವುದರ ಜೊತೆಗೆ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.

ತಾಲೂಕಿನ ಚನ್ನಪಿಳ್ಳೇಕೊಪ್ಪಲು ಗ್ರಾಮದಲ್ಲಿ ಸಿಎಸ್‌ಆರ್ ಅನುದಾನದಲ್ಲಿ ನವೀಕರಣಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ, ಅಡುಗೆ ಕೋಣೆ ಮತ್ತು ಗಣಕ ಯಂತ್ರಗಳ ಕೊಠಡಿ ಉದ್ಘಾಟಿಸಿ ಮಾತನಾಡಿ, ಭವಿಷ್ಯತ್‌ನಲ್ಲಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನದಿಂದ ಉದ್ದಿಮೆದಾರರನ್ನು ಸಂಪರ್ಕಿಸಿ ಸಿಎಸ್‌ಆರ್ ಅನುದಾನದಲ್ಲಿ ತಾಲೂಕಿನ ಎಲ್ಲಾ ಸರ್ಕಾರಿಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕೆಂಬ ಮನವಿಗೆ ಸ್ಪಂದಿಸಿದ ಉದ್ದಿಮೆ ಅಧಿಕಾರಿಗಳು ತಾಲೂಕಿನ ಆಗಮಿಸಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸುತ್ತಿವೆ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳು ಕೂಡ ಆಧುನಿಕ ತಕ್ಕಂತೆ ಗುಣಾತ್ಮಕ ಶಿಕ್ಷಣ ಪಡೆಯಬೇಕೆಂಬ ಆಶಯದೊಂದಿಗೆ ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿಯೂ ಸಿಗದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಸಿಗುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ನೀಡಿ ಅಭಿವೃದ್ಧಿಯ ವಿಚಾರದಲ್ಲಿ ಜವಾಬ್ದಾರಿಯೊಂದಿಗೆ ಖಾಸಗಿ ಶಾಲಾ ಮಕ್ಕಳಿಗೆ ಪೈಪೊಟಿ ನೀಡುವಂತಹ ವ್ಯವಸ್ಥೆಯನ್ನು ತಾಲೂಕಿನಲ್ಲಿ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರಿಂದ ಶಿಕ್ಷಣ, ಉಚಿತವಾಗಿ ಸಮವಸ್ತ್ರ, ಶೂ, ಬಿಸಿಯೂಟ ಜೊತೆಗೆ ಗುಣಾತ್ಮಕ ಶಿಕ್ಷಣಕ್ಕೆ ಬೇಕಾದ ಪೂರಕ ಸೌಲಭ್ಯ ಕಲ್ಪಿಸಿರುವುದರಿಂದ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ. ಉಮಾ ಮಾತನಾಡಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರ ಶ್ರಮದ ಫಲವಾಗಿ ತಾಲೂಕಿನಲ್ಲಿ ಸುಮಾರು ೨೫ ಕೋಟಿ ರು.ಗೂ ಹೆಚ್ಚು ಸಿಎಸ್‌ಆರ್ ಅನುದಾನದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಮಕ್ಕಳಿಗೆ ಡಿಜಿಟಲ್ ಶಿಕ್ಷಣವನ್ನು ನೀಡಲು ಈಗಾಗಲೇ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಮಳವಳ್ಳಿಯಲ್ಲಿ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಿ ರೂಪುಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಖಾಸಗಿ ಶಾಲೆಗಳಿಗೂ ಮೀಗಿಲಾಗಿ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದ್ದು, ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಇದೇ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಮಹದೇವು, ಮುಖಂಡರಾದ ಸಿದ್ದೇಗೌಡ, ಮಾರ್ಕಾಲು ಮಾದು, ಮೊಳ್ಳೇಗೌಡ ಇತರರಿದ್ದರು.