ಸಾರಾಂಶ
ಕನ್ನಡಪ್ರಭ ವಾರ್ತೆ ಬೈಂದೂರು
ರಾಜ್ಯ ಬಿಜೆಪಿ ಕರೆಯಂತೆ ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ, ತಮ್ಮ ನಿವಾಸದಲ್ಲಿ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ದಲಿತ ಬಂಧುಗಳೊಂದಿಗೆ ‘ಭೀಮ ಸಂಗಮ’ ಕಾರ್ಯಕ್ರಮ ಆಯೋಜಿಸಿದ್ದರು.ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಸಮುದಾಯಗಳ ಪ್ರಮುಖರ ಹಾಗೂ ಉಪೇಕ್ಷಿತ ಬಂಧುಗಳ ಸಮ್ಮುಖದಲ್ಲಿ ಆಯೋಜಿಸಲಾದ ಈ ಭೀಮ ಸಂಗಮ ಕಾರ್ಯಕ್ರಮದಲ್ಲಿ ಹಿಂದೂಗಳೆಲ್ಲರೂ ಸಹೋದರ ಸಮಾನರು ಎಂದ ಸಂದೇಶ ನೀಡಿದರಲ್ಲದೇ, ದೇಶಕ್ಕೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅಂಬೇಡ್ಕರ್ ಅವರ ಸಮಾನತೆಯ ಹಾದಿಯಲ್ಲಿ ನಡೆದು ದೇಶಸೇವೆ ಮಾಡೋಣ ಎಂದು ಕರೆ ನೀಡಿದರು.ಸಭಾ ಕಾರ್ಯಕ್ರಮದಲ್ಲಿ ದಲಿತ ಬಂಧುಗಳಿಗೆ ಭಾರತ ಮಾತೆಯ ಭಾವಚಿತ್ರ ನೀಡಿ ಗೌರವಿಸಿದ ಶಾಸಕರು, ಅವರೊಂದಿಗೆ ಸಹಭೋಜನ ಸ್ವೀಕರಿಸಿದರು. ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘಚಾಲಕ ಸತೀಶ್ ಕಾಳಾವರ್ಕರ್, ಪ್ರಮುಖರಾದ ಸುನೀಲ್ ಕುಲಕರ್ಣಿ ಮಂಗಳೂರು, ಅಶೋಕ್ ಪಡುಕೋಣೆ, ಶಾಸಕರ ಕುಟುಂಬದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯಕ್ರಮದ ಬಗ್ಗೆ ಶಾಸಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ನ ಹಿಂದೂ ಪತಿತೋ ಭವೇತ್, ಹಿಂದವಃ ಸೋದರಾಃ ಸರ್ವೇ’, ತಾರತಮ್ಯದಲ್ಲಿ ಬಿಜೆಪಿ ಎಂದಿಗೂ ವಿಶ್ವಾಸ ಇರಿಸಿಕೊಂಡಿಲ್ಲ, ಪಕ್ಷದ ತತ್ವ ಸಿದ್ಧಾಂತಗಳು ಸಹಬಾಳ್ವೆಯ ಚಿಂತನೆಯನ್ನು ಮಾತ್ರ ಪ್ರೋತ್ಸಾಹಿಸುತ್ತದೆ ಎಂದು ಬರೆದುಕೊಂಡಿದ್ದಾರೆ.