ದೇಶ ರಕ್ಷಣೆ ಜವಾಬ್ದಾರಿ ಸಮಸ್ತ ಹಿಂದೂಗಳದ್ದು: ರವಿ ಸೇಬಿನಕಟ್ಟೆ

| Published : Oct 28 2024, 12:47 AM IST

ದೇಶ ರಕ್ಷಣೆ ಜವಾಬ್ದಾರಿ ಸಮಸ್ತ ಹಿಂದೂಗಳದ್ದು: ರವಿ ಸೇಬಿನಕಟ್ಟೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಂಸ್ಕೃತಿ, ಪರಂಪರೆ, ಪರಿಸರ ಕುಟುಂಬಗಳ ರಕ್ಷಣೆಯ ಜವಾಬ್ದಾರಿ ಹಿಂದೂಗಳ ಮೇಲಿದೆ. ಜಾಗೃತ ಸಮಾಜದ ನಿರ್ಮಾಣಕ್ಕೆ ಸಂಘ ಶ್ರಮಿಸುತ್ತಿದೆ

ಕನ್ನಡಪ್ರಭವಾರ್ತೆ ಜಮಖಂಡಿ

ದೇಶರಕ್ಷಣೆ ಜವಾಬ್ದಾರಿ ಹಿಂದೂಗಳ ಮೇಲಿದೆ ಎಂದು ವಿಜಯಪುರ ವಿಭಾಗದ ಆರ್‌ಎಸ್‌ಎಸ್‌ ಸಂಪರ್ಕ ಪ್ರಮುಖ ರವಿ ಸೇಬಿನಕಟ್ಟೆ ಹೇಳಿದರು.

ನಗರದ ಅಮೋಘಸಿದ್ಧ ದೇವಸ್ಥಾನದಲ್ಲಿ ನಡೆದ ಪಥಸಂಚಲನದ ಸಮಾರೋಪದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ದೇಶದ ಸಂಸ್ಕೃತಿ, ಪರಂಪರೆ, ಪರಿಸರ ಕುಟುಂಬಗಳ ರಕ್ಷಣೆಯ ಜವಾಬ್ದಾರಿ ಹಿಂದೂಗಳ ಮೇಲಿದೆ. ಜಾಗೃತ ಸಮಾಜದ ನಿರ್ಮಾಣಕ್ಕೆ ಸಂಘ ಶ್ರಮಿಸುತ್ತಿದೆ. ಅದಕ್ಕೆ ಎಲ್ಲ ಹಿಂದೂಗಳು ಕೈ ಜೋಡಿಸಬೇಕು ಈಗಿನ ಪರಿಸ್ಥಿಗೆ ಇದು ಅನಿವಾರ್ಯ ಎಂದರು.

ಭಾರತೀಯ ಪರಂಪರೆಯಲ್ಲಿ ಎಲ್ಲ ಹಬ್ಬಗಳ ಆಚರಣೆ ಪ್ರಮುಖವಾಗಿವೆ. ವಿಜಯ ದಶಮಿ ವಿಜಯದ ಸಂಕೇತ ದುಷ್ಟ ಮರ್ದನ ಶಿಷ್ಟ ರಕ್ಷಣೆ ಪ್ರತೀಕವಾಗಿದೆ. 99 ವರ್ಷದ ಹಿಂದೆ ವಿಜಯದ ಸಂಕಲ್ಪದಿಂದ 1925ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪ್ರಾರಂಭಗೊಂಡಿತು. ಹಿಂದೂ ಸಮಾಜ ಒಗ್ಗೂಡಿಸಲು ಸ್ವಾತಂತ್ರ್ಯಹೋರಾಟಕ್ಕೆ ಸಂಘ ಹುಟ್ಟಿಕೊಂಡಿತು. ಸ್ವದೇಶಿ ಚಿಂತನೆ, ದೇಶದ ಸರ್ವತೋನ್ಮುಖ ಅಭಿವೃದ್ಧಿ, ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಸಂಘ ಕೆಲಸ ಮಾಡುತ್ತಿದೆ. ರಾಮ ಮಂದಿರದ ಹೋರಾಟದಲ್ಲಿ ಯಶಸ್ಸು ಸಾಧಿಸಿದೆ. ಸಂಘದ ಹಿರಿಯರು ಭಾರತದ ಅಮೂಲಾಗ್ರ ಬದಲಾವಣೆ ಕನಸು ಕಂಡಿದ್ದಾರೆ. ಭಾರತದ ನೆಲದ ಮೇಲೆ ಬಾಳುವ ಎಲ್ಲರಲ್ಲಿ ಭ್ರಾತೃತ್ವ ಭಾವನೆ ಬರಲು ಸಂಘ ಕೆಲಸ ಮಾಡುತ್ತಿದೆ. ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ

ಸಾಮರಸ್ಯ, ಕುಟುಂಬ ಪ್ರಭೋದಿನಿ, ಪರಿಸರ ರಕ್ಷಣೆ ಮುಂತಾದ ವಿಷಯ ಮುಖ್ಯವಾಗಿಟ್ಟು ಕೊಂಡು ಕಾರ್ಯ ನಿರ್ವಹಿಸಲಾಗುತ್ತಿದೆ. ಸಾಮಾಜಿಕ ಅಸಮತೋಲನ ಹೆಚ್ಚಾಗಿದ್ದು, ಸಾಮರಸ್ಯ ಬೇಕಾಗಿದೆ. ಈ ವಿಜಯ ದಶಮಿ ಪ್ರಯುಕ್ತ ಶಕ್ತಿಯುತವಾಗಿ ಬದುಕಬೇಕು. ಜಾಗೃತ ಸಮಾಜವಾಗಿ ದೇಶ ಸಂರಕ್ಷಣೆ ಜವಾಬ್ದಾರಿ ಸಮಸ್ತ ಹಿಂದೂಗಳ ಮೇಲಿದೆ ಎಂದು ಹೇಳಿದರು.

ಡಾ.ಪ್ರವೀಣ ಪಡಸಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೀಪಕ ಸಿಂಧೆ ನಿರೂಪಿಸಿ, ಈಶ್ವರ ಕಾಕಖಂಡಕಿ ವುಕ್ತಿಕ ಗೀತೆ ಹೇಳಿದರು. ಗಿರೀಶ ಕಡ್ಡಿ ಸ್ವಾಗತಿಸಿದರು. 200 ಸಂಖ್ಯೆ ಗಣವೇಷಧಾರಿ ಸ್ವಯಂ ಸೇವಕರು ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಿತು. ದಾರಿಉದ್ದಕ್ಕೂ ರಂಗೋಲಿಗಳಿಂದ ರಸ್ತೆಗಳನ್ನು ಅಲಂಕರಿಸಲಾಗಿತ್ತು ಗಣವೇಷಧಾರಿಗಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಪಥಸಂಚಲನ ಸ್ವಾಗತಿಸಲಾಯಿತು.