ಸಾರಾಂಶ
ಉಡುಪಿ: ಅಖಿಲ ಭಾರತ ವಿಮಾ ನೌಕರರ ಸಂಘದ ೭೫ ನೇ ವರ್ಷಾಚರಣೆಯ ಅಂಗವಾಗಿ ವಿಮಾ ನೌಕರರ ಸಂಘದ ಉಡುಪಿ ವಿಭಾಗವು ಜಿಲ್ಲಾಸ್ಪತ್ರೆಯ ರಕ್ತನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಗುರುವಾರ ಆಯೋಜಿಸಿತ್ತು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ ಅವರು ‘ಸಂಘವು ೧೯೫೧ ರ ಜು.೧ ರಂದು ಸ್ಥಾಪನೆಯಾಯಿತು. ದೇಶದ ಯಾವುದೇ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಜನರಿಗೆ ತೊಂದರೆಯಾದಾಗ ಸಂಘವು ಅವರಿಗೆ ತನ್ನ ಸಹಾಯ ಹಸ್ತ ಚಾಚಿದೆ. ಕಳೆದ ಎರಡು ದಶಕಗಳಲ್ಲಿ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಶಾಲೆಗಳಿಗೆ, ಆಸ್ಪತ್ರೆ, ವೃದ್ದರು ಮತ್ತು ಅಶಕ್ತರಿರುವ ಆಶ್ರಮಗಳಿಗೆ ಸಂಘದ ಸದಸ್ಯರಿಂದ ಮತ್ತು ಹಿತೈಷಿಗಳಿಂದ ಧನಸಂಗ್ರಹ ಮಾಡಿ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲಾಗಿದೆ ಎಂದರು.ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗದ ಔದ್ಯೋಗಿಕ ಮತ್ತು ಮಾನವ ಸಂಬಂಧ ಪ್ರಬಂಧಕ ಎಂ. ಲಕ್ಷ್ಮೀನಾರಾಯಣ ಅವರು ಶುಭ ಹಾರೈಸಿದರು. ರಕ್ತ ನಿಧಿಯ ಮುಖ್ಯಸ್ಥೆ ಡಾ.ವೀಣಾ ಕುಮಾರಿ ಎಂ. ಅವರು ರಕ್ತದಾನದ ಮಹತ್ವ ಮತ್ತು ಉಪಯೋಗಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ವಿಮಾ ನೌಕರರ ಸಂಘದ ಅಧ್ಯಕ್ಷರ ಪ್ರಭಾಕರ ಬಿ.ಕುಂದರ್, ಭಾರತೀಯ ಜೀವ ವಿಮಾ ನಿಗಮ ಉಡುಪಿ ವಿಭಾಗದ ಕಾನೂನು ಮತ್ತು ಗೃಹ ಸಾಲದ ಪ್ರಬಂಧಕ ಅನ್ವರ್ ಸಾದತ್ ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ೨೬ ಜನ ರಕ್ತದಾನ ಮಾಡಿದರು.