ಸಾರಾಂಶ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಆದಿವಾಸಿ ಜನರಿಗೆ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿತಾಲೂಕಿನ ಡಿ.ಬಿ. ಕುಪ್ಪೆ ಗ್ರಾಪಂ ಎದುರು ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಿದರು.ಸಮಿತಿಯ ಮುಖಂಡ ಟಿ.ಆರ್. ಸುನಿಲ್ ಮಾತನಾಡಿ, ಡಿ.ಬಿ ಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ವಾಸಿಸುವ ಬಹುತೇಕ ಜನರು ಪ. ಪಂಗಡ ಹಾಗೂ ಅರಣ್ಯ ಆಧಾರಿತ ಮೂಲ ಬುಡಕಟ್ಟು ಜನಾಂಗವರಾಗಿದ್ದಾರೆ. ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಗಡಿ ಪ್ರದೇಶದಲ್ಲಿದ್ದು, ಪ್ರಾಕೃತಿಕವಾಗಿ ಒಂದೆಡೆ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ, ಇನ್ನೊಂದೆಡೆ ಕಪಿಲಾ ನದಿ ಹರಿಯುವ ಸುಂದರವಾದ ಭೂ ಪ್ರದೇಶದಲ್ಲಿ ವಾಸಿಸುವ ಈ ಜನರ ಬದುಕು ಮಾತ್ರ ಸುಂದರವಾಗಿಲ್ಲ. ಈ ಭಾಗದ ಬಹುತೇಕ ಆದಿವಾಸಿ ಜನರು ಜೀವನೋಪಾಯಕ್ಕಾಗಿ ಅರಣ್ಯದ ಕಿರು ಉತ್ಪನ್ನಗಳ ಸಂಗ್ರಹಣೆ ಹಾಗೂ ಕೃಷಿ ಭೂಮಿ ಇಲ್ಲದಿರುವುದರಿಂದ ಕೇರಳ ಹಾಗೂ ಕೊಡಗಿನ ಎಸ್ಟೇಟ್ ಗಳಿಗೆ ವಲಸೆ ಹೋಗಿ ಕೃಷಿ ಕೂಲಿಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು.
ಅನಕ್ಷರತೆ, ಅಪೌಷ್ಟಿಕತೆ, ಬಡತನ ಹಾಗೂ ಕಾನೂನಿನ ಅರಿವಿಲ್ಲದ ಮುಗ್ಧರಾಗಿದ್ದಾರೆ. ಇವರಿಗೆ ವಾಸಿಸಲು ಯೋಗ್ಯವಾದ ಮನೆ, ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ ಇನ್ನಿತರ ಕನಿಷ್ಠ ಮೂಲಭೂತ ಸೌಕರ್ಯಗಳು ಸಿಗದೇ ವಂಚಿತರಾಗಿದ್ದಾರೆ. ಸರ್ಕಾರದಿಂದ ಮನೆ ಮಂಜೂರಾದರೂ ಸಹ ಅರಣ್ಯ ಇಲಾಖೆ ಹಕ್ಕು ಪತ್ರದ ನೆಪ ಹೇಳಿ ಕಟ್ಟಲು ಬಿಡುತ್ತಿಲ್ಲ ಎಂದು ಅವರು ದೂರಿದರು.ಸರ್ಕಾರವೇ ಇವರಿಗೆ ಉತ್ತಮ ಗುಣಮಟ್ಟದ ಮನೆ ನಿರ್ಮಿಸಿ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅವರ ಆರ್ಥಿಕ ಜೀವನೋಪಾಯಕ್ಕೆ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡಿ ಉತ್ತಮ ಮಾರುಕಟ್ಟೆಯನ್ನು ನಿರ್ಮಿಸಿದ್ದರೆ ಅವರ ಜೀವನಮಟ್ಟ, ಬುಡಕಟ್ಟು ಸಂಸ್ಕೃತಿ ಉಳಿಯುತ್ತಿತ್ತು. ಆದರೆ ಎಲ್ಲ ಹಂತದಲ್ಲೂ ಮೋಸ, ವಂಚನೆಯಿಂದಾಗಿ ಅತ್ತ ಕಾಡು ಇತ್ತ ನಾಡು ಅಲ್ಲದ ಅತಂತ್ರ ಸ್ಥಿತಿಯಲ್ಲಿ ಬದುಕುವಂತಾಗಿದೆ ಎಂದು ಅವರು ತಿಳಿಸಿದರು.
ಆದಿವಾಸಿ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡದೇ ಅವರ ಬದುಕುವ ಹಕ್ಕನ್ನೆ ಕಸಿದು ಮಾನವ ಹಕ್ಕುಗಳನ್ನೇ ಉಲ್ಲಂಘನೆ ಮಾಡಲಾಗುತ್ತಿದೆ. ಇತ್ತೀಚಿಗೆ ಗೋಳೂರು ಹಾಡಿಯಲ್ಲಿಯೂ ಸಹ ಸೋಲಾರ್ ದೀಪವನ್ನು ದುರಸ್ತಿ ಮಾಡಲು ಆಗ್ರಹಿಸಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತಿಭಟಿಸಿ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಾಗಲೂ ಸಹ ಗ್ರಾಪಂ, ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ, ತಾಲೂಕು ಆಡಳಿತ, ಅರಣ್ಯ ಇಲಾಖೆಗಳು ಒಬ್ಬರ ಮೇಲೊಬ್ಬರು ಹೇಳಿಕೊಂಡು ತಮ್ಮ ಜವಾಬ್ದಾರಿಗಳಿಂದ ಕೈ ತೊಳೆದು ಕೊಳ್ಳುತ್ತಿದ್ದಾರೆ ಹೊರತು ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳಲು ಮುಂದಾಗಲಿಲ್ಲ.ಹಾಗಾಗಿ ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಬದುಕಿಗಾಗಿ ಹೋರಾಡುತ್ತಿರುವ ಆದಿವಾಸಿಗಳ ಹಕ್ಕುಗಳನ್ನು ಹಾಗೂ ಈ ಭಾಗದ ಅರಣ್ಯ ವಾಸಿಗಳ ಹಕ್ಕುಗಳನ್ನು ರಕ್ಷಿಸಲು ಹಕ್ಕೋತ್ತಾಯಗಳನ್ನು ಆದ್ಯತೆ ಆಧಾರದ ಮೇಲೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಪಂಚಾಯಿತಿಯ ನೌಕರ ಮಂಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಗೋಳೂರು ಹಾಡಿಯ ಗಂಗೆ, ಗೌರಿ, ಪುಟ್ಟಿ, ಕಾಳಿ, ಅಶೋಕ, ಮಣಿ, ಬಾವಲಿ ಹಾಡಿಯ ಪೊನ್ನಮ್ಮ, ಕಣ್ಣ, ಮೀನಾಕ್ಷಿ, ಬಳ್ಳೆ ಹಾಡಿಯ ವಾಣಿ, ಮೂಲೆಯೂರು ಹಾಡಿ, ವಡಕನಮಾಳ, ಮಚ್ಚೂರು, ತಿಮ್ಮನ ಹೊಸಳ್ಳಿ ಜನ ಭಾಗವಹಿಸಿದ್ದರು.