ಸಾರಾಂಶ
ಮಂಜುನಾಥ ಕೆ.ಎಂ. ಬಳ್ಳಾರಿ
ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, ಸಮ್ಮೇಳನ ನಡೆಸುವ ಜಾಗಕ್ಕಾಗಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಳಿಯ ಸುಮಾರು 75 ಎಕರೆ ಪ್ರದೇಶ, ಕಪ್ಪಗಲ್ ರಸ್ತೆಯಲ್ಲಿನ 35 ಎಕರೆ ಹಾಗೂ ಕೊಳಗಲ್ ರಸ್ತೆಯ ವಿಮಾನ ನಿಲ್ದಾಣದ ಬಳಿಯ 30 ಎಕರೆ ಜಾಗವನ್ನು ಸಾಹಿತ್ಯ ಪರಿಷತ್ತಿನ ಜಿಲ್ಲಾ ಪದಾಧಿಕಾರಿಗಳು ಗುರುತಿಸಿದ್ದು, ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಮೂರು ಜಾಗಗಳ ಪೈಕಿ ವಿಶ್ವವಿದ್ಯಾಲಯದ ಬಳಿಯ ಜಾಗವು ಸಮ್ಮೇಳನಕ್ಕೆ ಸೂಕ್ತ ಎನ್ನಲಾಗುತ್ತಿದ್ದು ಅಂತಿಮಗೊಳ್ಳುವ ಸಾಧ್ಯತೆಯಿದೆ.
ಕಳೆದ ವರ್ಷ ಮಂಡ್ಯದಲ್ಲಿ ಜರುಗಿದ 87ನೇ ಸಮ್ಮೇಳನ, ಈ ಹಿಂದಿನ ಹಾವೇರಿ ಮತ್ತಿತರ ಜಿಲ್ಲೆಗಳಲ್ಲಾದ ಸಮ್ಮೇಳನಗಳ ವೇಳೆ ಆಗಿರುವ ಸಣ್ಣಪುಟ್ಟ ವ್ಯತ್ಯಯಗಳು ಬಳ್ಳಾರಿಯಲ್ಲಿ ಆಗಬಾರದು. ಸಾವಿರಾರು ಸಂಖ್ಯೆಯಲ್ಲಿ ಬರುವ ವಾಹನಗಳಿಂದ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದ್ದು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಹೊರಗಡೆಯಿಂದ ಬರುವ ವಾಹನಗಳು ಸರಾಗವಾಗಿ ಸಮ್ಮೇಳನ ನಡೆಯುವ ಜಾಗಕ್ಕೆ ಮುಟ್ಟುವಂತಾಗಬೇಕು. ಬಳ್ಳಾರಿಯೊಳಗೆ ವಾಹನಗಳು ಪ್ರವೇಶಿಸಿದರೆ ತೀವ್ರ ಸಂಚಾರ ದಟ್ಟಣೆಗೊಂಡು ಸಾರ್ವಜನಿಕರಿಗೆ ಸಮಸ್ಯೆಯಾಗುವುದರಿಂದ ನಗರ ಹೊರ ವಲಯದಲ್ಲಿಯೇ ಸಮ್ಮೇಳನ ನಡೆಸುವುದು ಸೂಕ್ತ ಎಂಬುದು ಸ್ಥಳೀಯ ಸಾರ್ವಜನಿಕರ ಅಭಿಪ್ರಾಯವೂ ಆಗಿದೆ.ಏ.15ಕ್ಕೆ ರಾಜ್ಯಾಧ್ಯಕ್ಷ ಬಳ್ಳಾರಿಗೆ: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷರು ಏ.15ಕ್ಕೆ ಬಳ್ಳಾರಿಗೆ ಬರಲಿದ್ದು, ನಗರದ ಬಿಪಿಎಸ್‌ಸಿ ಕಾಲೇಜು ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಗೆ ಆಗಮಿಸುವ ರಾಜ್ಯಾಧ್ಯಕ್ಷರು ಸಮ್ಮೇಳನ ನಡೆಸುವ ಮೂರು ಜಾಗಗಳನ್ನು ವೀಕ್ಷಿಸಲಿದ್ದಾರೆ. ಬಳಿಕ ಜಿಲ್ಲಾಧಿಕಾರಿ ಜತೆ ಚರ್ಚಿಸಿಯೇ ಸಮ್ಮೇಳನದ ಜಾಗ ಅಂತಿಮಗೊಳಿಸಲಿದ್ದಾರೆ. ಏ. 27ರಂದು ಸಂಡೂರು ತಾಲೂಕು ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಬಳಿ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಾಮಾನ್ಯಸಭೆ ನಡೆಯಲಿದ್ದು, ಪರಿಷತ್ತಿನ ರಾಜ್ಯಾಧ್ಯಕ್ಷರು ಸೇರಿದಂತೆ ಇತರ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಸಮ್ಮೇಳನ ಕುರಿತು ಸಹ ಚರ್ಚೆಗೆ ಬರಲಿದೆ.
ಸಮ್ಮೇಳನದ ತಯಾರಿ ಹಿನ್ನೆಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿಗಳಿಗೆ ಸಮ್ಮೇಳನ ಕುರಿತು ಮನವರಿಕೆ ಮಾಡಿಕೊಡುತ್ತಿದ್ದಾರೆ. ಈಗಾಗಲೇ 15ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಸಮ್ಮೇಳನ ಕುರಿತು ಜಾಗೃತಿ ಮೂಡಿಸಲಾಗಿದೆ. ಸಮ್ಮೇಳನದಲ್ಲಿ ಪ್ರಮುಖವಾಗಿ ವಸತಿ ಸಮಸ್ಯೆ ಎದುರಾಗಲಿದ್ದು, ಬಳ್ಳಾರಿಯಲ್ಲಿ ಎಷ್ಟು ಕಡೆ ವ್ಯವಸ್ಥೆ ಮಾಡಲು ಸಾಧ್ಯವಿದೆ ಎಂಬುದರ ಕುರಿತು ಪರಿಷತ್ತಿನ ಪದಾಧಿಕಾರಿಗಳು ಚರ್ಚೆ ನಡೆಸಿದ್ದು, ಪರಿಷತ್ತಿನ ರಾಜ್ಯಾದ್ಯಕ್ಷರು ಬಳ್ಳಾರಿಗೆ ಬಂದ ಬಳಿಕ ವರದಿ ನೀಡಲಿದ್ದಾರೆ.ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಾಗ ಗುರುತಿಸುವ ಕೆಲಸವಾಗಿದೆ. ಮೂರು ಕಡೆ ಜಾಗ ಗುರುತಿಸಿದ್ದೇವೆ. ಪರಿಷತ್ತಿನ ರಾಜ್ಯಾಧ್ಯಕ್ಷರು ಬಳ್ಳಾರಿಗೆ ಬಂದ ಬಳಿಕ ಅವರಿಗೆ ಜಾಗ ತೋರಿಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳು ಹಾಗೂ ಪರಿಷತ್ತಿನ ಅಧ್ಯಕ್ಷರು ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ತಿಳಿಸಿದ್ದಾರೆ.