ವಿಶೇಷಚೇತನರ ಅವಕಾಶದ ಬಗ್ಗೆಯೂ ಧ್ವನಿ ಎತ್ತಬೇಕು

| Published : Oct 22 2024, 12:15 AM IST

ಸಾರಾಂಶ

ಮೇಲ್ನೋಟಕ್ಕೆ ಆಯಿಷ್ ಕೇವಲ ಚಿಕಿತ್ಸೆ ನೀಡುತ್ತಿದೆ ಎನಿಸಿದರೂ, ಆಳದಲ್ಲಿ ಈ ಸೇವೆ ಕೇವಲ ಚಿಕಿತ್ಸೆಯೊಂದೇ ಆಗಿರುವುದಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರುಎಲ್ಲಾ ರಾಜಕೀಯ ಪಕ್ಷಗಳು ಕೂಡ ಸಂವಿಧಾನ ಹಾಗೂ ಸಮಾನ ಅವಕಾಶದ ಕುರಿತು ಮಾತನಾಡಲಾರಂಭಿಸಿವೆ. ಜಾತಿ ಗಣತಿ, ಒಳ ಮೀಸಲು ಹೀಗೆ ಬೇರೆ ಬೇರೆ ಪರಿಭಾಷೆಯಲ್ಲಿ ಇದು ವ್ಯಕ್ತವಾಗುತ್ತಲೇ ಇದೆ. ಆದರೆ, ವಾಕ್, ಶ್ರವಣದ ದೋಷ ಹೊಂದಿರುವವರ, ವಿಶೇಷ ಚೇತನರ ಸಂದರ್ಭದಲ್ಲಿ ಸಮಾನ ಅವಕಾಶ ಸಿಕ್ಕಿದೆಯೇ? ಎಂದು ಪ್ರಶ್ನಿಸಿದಾಗ ಇಲ್ಲ ಎಂದೇ ಹೇಳಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ಚೀ.ಜ. ರಾಜೀವ್ ವಿಷಾಧ ವ್ಯಕ್ತಪಡಿಸಿದರು.ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ವತಿಯಿಂದ ಸೋಮವಾರ ಎನಾನ್ಸಿಂಗ್ ಸ್ವೀಚ್ ಫ್ಲೂಯೆನ್ಸಿ ಎವಿಡೆನ್ಸ್ ಬೇಸ್ಡ್ ಅಪ್ರೋಚಸ್ ಫಾರ್ ಕ್ಲಿನಿಕಲ್ ಪ್ರಾಕ್ಟೀಸ್ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಆದರೆ ಈ ಕೆಲಸವನ್ನು ಆಯಿಷ್ ನಂಥ ಸಂಸ್ಥೆಗಳು ಸದ್ದಿಲ್ಲದೇ ಮಾಡುತ್ತಿವೆ. ಮೇಲ್ನೋಟಕ್ಕೆ ಆಯಿಷ್ ಕೇವಲ ಚಿಕಿತ್ಸೆ ನೀಡುತ್ತಿದೆ ಎನಿಸಿದರೂ, ಆಳದಲ್ಲಿ ಈ ಸೇವೆ ಕೇವಲ ಚಿಕಿತ್ಸೆಯೊಂದೇ ಆಗಿರುವುದಿಲ್ಲ. ಏಕೆಂದರೆ, ಇಲ್ಲಿ ಚಿಕಿತ್ಸೆ ಪಡೆದವರು ಸಮಾನ ಅವಕಾಶ ಪಡೆಯಲು ಅರ್ಹರಾಗುತ್ತಾರೆ. ಈ ಜನರಿಗೆ ಸಮಾನ ಅವಕಾಶ ಕಲ್ಪಿಸುವುದು ಸರ್ಕಾರದ ಕೆಲಸ. ಆದರೆ, ಅದನ್ನು ಪಡೆಯಲು ಜನರನ್ನು ಸಿದ್ಧಪಡಿಸುವುದು ಕೂಡ ದೊಡ್ಡ ಕಾರ್ಯವೇ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಈಗಂತೂ ನಾವು ಎಐ ಯುಗದಲ್ಲಿದ್ದೇವೆ. ಈ ಸಂಸ್ಥೆ ಟೆಕ್ನಾಲಜಿಯ ಪ್ರಯೋಜನ ಪಡೆದು ಗರಿಷ್ಠ ಜನರನ್ನು ತಲುಪಬಹುದು. ಮೊದಲೆಲ್ಲಾ ಕಣ್ಣು ಕಾಣದ ಕುರುಡರು ಓದಲು ಬ್ರೈಲ್ ಲಿಪಿಯನ್ನೇ ಅವಲಂಬಿಸಬೇಕಾಗಿತ್ತು. ಆದರೆ ಈಗ ಎಲ್ಲಾ ಜ್ಞಾನವನ್ನು ಆಡಿಯೋ ಮಾಡಲು ಸಾಧ್ಯವಿದೆ. ಕುರುಡರಿಗೆ ಬ್ರೈಲ್ ಲಪಿಯೇ ಬೇಕಿಲ್ಲ. ಅವರು ಆಡಿಯೋ ಮೂಲಕ ಕಲಿತು, ನಮ್ಮಷ್ಟೇ ಸಾಮರ್ಥ್ಯವನ್ನು ಪಡೆಯಬಹುದು. ಕಿವುಡರು ಟೆಕ್ನಾಲಜಿ ನೆರವಿನಿಂದ ಪರದೇ ನೋಡಿಯೇ ಸಾಕಷ್ಟು ಕೆಲಸ ಮಾಡಬಹುದು ಎಂದು ಅವರು ಹೇಳಿದರು.ಇದೇ ರೀತಿ, ತೊದಲುವಿಕೆ ಸಮಸ್ಯೆಯಿಂದ ಬಳಲುತ್ತಿರುವವರನ್ನೂ ನಾವು ಸಜ್ಜು ಮಾಡಬೇಕಿದೆ. ಈ ವಿಷಯ ಕುರಿತು ಈ ಸಂಕಿರಣ ಚರ್ಚೆ ಮಾಡಿಯೇ ಮಾಡುತ್ತದೆ. ಇಂಥಾ ಸಾಧ್ಯತೆಯನ್ನು ನೀವು ಶೋಧಿಸಬೇಕಿದೆ ಎಂದರು.ಅಮೆರಿಕಾದ ಅಧ್ಯಕ್ಷನಾಗಿದ್ದ ರೂಸ್ ವೆಲ್ಟ್ ಆ ದೇಶದ ನಿರ್ಮಾಪಕ. ಪೊಲೀಯೋ ಕಾರಣಕ್ಕೆ ತನ್ನ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡಿದ್ದ. ಆದರೂ ಎರಡು ಅವಧಿಗೆ ಅಮೆರಿಕಾದ ಅಧ್ಯಕ್ಷನಾಗಿದ್ದ. ಇಂಥಾ ಸಮಸ್ಯೆಗಳಿಂದ ಬಳಲುತ್ತಿರುವ ಜನ ಮುಖ್ಯವಾಹಿನಿಗೆ ಬರಬೇಕು ಎಂದರೆ, ಇಂಥಾ ಮಕ್ಕಳ ಪಾಲಕರ ಸಂಘಗಳು ಕ್ರಿಯಾಶೀಲರಾಗಬೇಕು ಎನ್ನುತ್ತಿದ್ದ. ಈ ಸಂಸ್ಥೆಯಲ್ಲಿ ಅಂಥ ಪಾಲಕರ ಸಂಘಗಳು ಕ್ರಿಯಾಶೀಲವಾಗಲಿ ಎಂದು ಆಶಿಸುವೆ ಎಂದರು.ಸಂಸ್ಥೆಯ ನಿರ್ದೇಶಕಿ ಡಾ. ಪುಷ್ಪಾವತಿ, ಡಾ. ಸಂಗೀತ ಮಹೇಶ್, ಡಾ. ಸಂತೋಷ್ ಮತ್ತು ರಾಷ್ಟ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.