ಕನ್ನಡಪ್ರಭ ವಾರ್ತೆ ನಂಜನಗೂಡುಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪ ಪ್ರಸ್ತುತ ಜಗತ್ತಿನ ಹಲವು ರಾಷ್ಟ್ರಗಳ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿಯಾಗಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಬಸವಾದಿ ಪ್ರಮುಖರು ನಾಡಿಗೆ ನೀಡಿದ ಕೊಡುಗೆಗಳು ಅಭೂತ ಪೂರ್ವವಾಗಿದ್ದು, ಮನುಷ್ಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಯಾವುದೇ ಸೇವೆ ಮಾಡಿದಾಗ ಅದು ಸಮಾಜಕ್ಕೆ ನೆರವಾಗಲಿದೆ. ಬಸವಣ್ಣನವರು ಕೈಗೊಂಡ ಸಮಾಜ ಸುಧಾರಣೆಯಿಂದಾಗಿ ಅವರು ಇಂದಿಗೂ ಪ್ರಸ್ತುತರಾಗಿದ್ದಾರೆ. ಇಂತಹ ಮಹಾತ್ಮರ ಸ್ಮರಣೆ ಬದುಕಿಗೆ ಹೊಸ ಚೈತನ್ಯವನ್ನುಂಟು ಮಾಡುತ್ತದೆ, ಹೀಗಾಗಿ ಮಹನೀಯರ ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.ಮೈಸೂರಿನ ಕುಂದೂರು ಮಠದ ಶ್ರೀ ಶರತ್ಚಂದ್ರ ಸ್ವಾಮೀಜಿ ಮಾತನಾಡಿ, ನಮ್ಮ ಬದುಕಿನ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬಸವ ಜಯಂತಿ ಆಚರಣೆ ಅವಶ್ಯಕವಾಗಿದೆ. ಜಗತ್ತಿನಲ್ಲಿ ಹಲವು ಮಂದಿ ಧರ್ಮ ಸ್ಥಾಪಕರು ಹಾಗೂ ದಾರ್ಶಕನಿಕರಿದ್ದರೂ ಬಸವಣ್ಣವರು ತಮ್ಮ ಅಸಾಧಾರಣ ಸೇವೆಯ ಮೂಲಕ ಸಮಾಜದಲ್ಲಿ ಅತ್ಯಂತ ದೊಡ್ಡ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.ಅದ್ದೂರಿ ಮೆರವಣಿಗೆ - ಇದಕ್ಕೂ ಮುನ್ನ ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಿಂದ ಬೆಳ್ಳಿ ರಥದಲ್ಲಿ ಪ್ರತಿಷ್ಟಾಪಿಸಿದ್ದ ಬಸವೇಶ್ವರರ ಪುತ್ಥಳಿಯ ಉತ್ಸವ ಮಂಗಳವಾದ್ಯ, ನಂದಿಧ್ವಜ, ವೀರಗಾಸೆ ಕುಣಿತ, ಭಜನೆ ಹಾಗೂ ಜಾನಪದ ಕಲಾತಂಡಗಳ ಕಲಾ ಪ್ರದರ್ಶನದೊಂದಿಗೆ ಭವ್ಯ ಮೆರವಣಿಗೆಯ ಚಾಲನೆ ನೀಡಿದ ನವಿಲೂರು ಚುಂಚನಹಳ್ಳಿ ಮಠಾಧ್ಯಕ್ಷ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಬೇಕಾಗಿರುವುದು ಶಾಂತಿ ಹಾಗೂ ನೆಮ್ಮದಿ ಇದಕ್ಕಾಗಿ ಬಸವಣ್ಣನ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.ಶಾಸಕ ದರ್ಶನ್ ಧ್ರುವನಾರಾಯಣ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮೆರವಣಿಗೆಯಲ್ಲಿ ಭಾಗಿಯಾದರು.ದೇವನೂರು ಗುರುಮಲ್ಲೇಶ್ವರ ದಾಸೋಹ ಮಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ, ಮಲ್ಲನಮೂಲೆ ಮಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧಲಿಂಗ ಸ್ವಾಮೀಜಿ, ಶರಣಸಂಗಮ ಮಠಾಧ್ಯಕ್ಷ ಶ್ರೀ ನಾಗರಾಜೇಂದ್ರ ಸ್ವಾಮೀಜಿ, ಹುಲ್ಲಹಳ್ಳಿ ಮಠದ ಶ್ರೀ ಇಮ್ಮಡಿ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಬಿ. ಹರ್ಷವರ್ಧನ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ನಿರ್ದೇಶಕ ಹಗಿನವಾಳು ಚೆನ್ನಪ್ಪ, ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಶಿವಪ್ಪ ದೇವರು, ಖಜಾಂಚಿ ನಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬರಳ್ಳಿ ಸುಬ್ಬಣ್ಣ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ಮುಖಂಡರಾದ ಎನ್.ಸಿ.ಬಸವಣ್ಣ, ಎನ್. ಮಹೇಶ್, ವಕೀಲರಾದ ಬೊಮ್ಮಾಯಿ, ನಾಗೇಂದ್ರಪ್ಪ, ಮಹೇಶ್, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ವೀರಶೈವ ಮಹಾಸಭಾ ಯುವ ಘಟಕ ಅಧ್ಯಕ್ಷ ಮಹದೇವಸ್ವಾಮಿ ಭಾಗವಹಿಸಿದ್ದರು.
ಅನುಭವ ಮಂಟಪ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿ
ಬಸವಾದಿ ಪ್ರಮುಖರು ನಾಡಿಗೆ ನೀಡಿದ ಕೊಡುಗೆಗಳು ಅಭೂತ ಪೂರ್ವವಾಗಿದ್ದು
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.