ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿದ್ದು, ಮತ ಚಲಾಯಿಸಲು ಹಾಗೂ ಸ್ಪರ್ಧಿಸಲು ಸಮಾಜದ ಎಲ್ಲ ಸದಸ್ಯರು ನೋಂದಾಯಿಸಿಕೊಂಡು ಸಂಘಟನೆ ಬಲಿಷ್ಠಗೊಳಿಸುವಂತೆ ತಾ.ಘಟಕದ ಅಧ್ಯಕ್ಷ ಎನ್.ವಿ ಈರೇಶ್ ಮನವಿ ಮಾಡಿದರು.ಗುರುವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮಹಾಸಭೆ ಚುನಾವಣೆ ನಡೆದು 5 ವರ್ಷ ಪೂರ್ಣಗೊಂಡಿದ್ದು, ಈ ಹಿನ್ನೆಲೆ ಪುನಃ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ ಎಂದು ತಿಳಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಲು ಹಾಗೂ ಮತಚಲಾಯಿಸಲು ಗುರುತಿನ ಪತ್ರ ಕಡ್ಡಾಯವಾಗಿದೆ. ತಾಲೂಕಿನಲ್ಲಿ ವೀರಶೈವ ಸಮಾಜ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು ನೋಂದಾವಣೆ ಮಾತ್ರ ಕಡಿಮೆಯಾಗಿರುವುದರಿಂದ ಹೆಚ್ಚಳಗೊಳಿಸಲು ತಾ.ಘಟಕದ ಮನವಿ ಮೇರೆಗೆ ಜೂ.6ಕ್ಕೆ ಅವಧಿ ವಿಸ್ತರಿಸಲಾಗಿದ್ದು, ವೀರಶೈವ ಸಮಾಜದ ಎಲ್ಲ ಒಳಪಂಗಡಗಳ ಸದಸ್ಯರು ಪಟ್ಟಣದ ವಿನಾಯಕ ನಗರದಲ್ಲಿನ ವೀರಶೈವ ಮಹಾಸಭಾ ಕಾರ್ಯಾಲಯದಲ್ಲಿ ನೋಂದಾಯಿಸಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತಚಲಾಯಿಸುವ ಮುಕ್ತ ಅವಕಾಶ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜತೆಗೆ ರಾಜ್ಯ ಘಟಕ, ಜಿಲ್ಲಾ ಘಟಕ, ತಾಲೂಕು ಘಟಕದ ಅಧ್ಯಕ್ಷ ಪದಾಧಿಕಾರಿಗಳ ಹುದ್ದೆಗೆ ನಡೆಯಲಿರುವ 3 ಹಂತದ ಚುನಾವಣೆಗೆ ವೇಳಾ ಪಟ್ಟಿ ಪ್ರಕಟವಾಗಿದ್ದು ಜು. 21ರಂದು ತಾಲೂಕು, ಮಹಾನಗರ ಪಾಲಿಕೆ, ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಜೂ.27ರಿಂದ ಜು.4ರ ವರೆಗೆ ನಾಮಪತ್ರ ಸ್ವೀಕರಿಸಲಾಗುವುದು ಜು.5ಕ್ಕೆ ಪರಿಶೀಲನೆ, ಜು.8ಕ್ಕೆ ವಾಪಾಸ್ ಪಡೆಯಲು ಕಡೆ ದಿನವಾಗಿದೆ.ರಾಜ್ಯ ಘಟಕಕ್ಕೆ ಆ.25ರಂದು ಚುನಾವಣೆ ನಡೆಯಲಿದ್ದು ಆ.1ರಿಂದ 7ರ ವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ಆ.8 ರಂದು ಪರಿಶೀಲನೆ ಹಾಗೂ 11ರಂದು ವಾಪಾಸ್ ಪಡೆಯಲು ಕಡೆ ದಿನವಾಗಿದೆ. ಮಹಾಸಭಾ ಅಧ್ಯಕ್ಷರ ಸ್ಥಾನಕ್ಕೆ ಸೆ.29 ರಂದು ಚುನಾವಣೆ ನಡೆಯಲಿದೆ. ಪ್ರತಿ ಘಟಕದ ಚುನಾವಣೆ ಬೆಳಗ್ಗೆ 8ಕ್ಕೆ ಆರಂಭವಾಗಿ ಸಂಜೆ 5ರ ವರೆಗೆ ನಡೆಯಲಿದ್ದು ನಂತರದಲ್ಲಿ ಮತ ಎಣಿಕೆ ಕಾರ್ಯ ನಡೆದು ಕೂಡಲೇ ಫಲಿತಾಂಶ ಘೋಷಣೆಯಾಗಲಿದೆ ಎಂದು ತಿಳಿಸಿದರು.ತಾಲೂಕು ಘಟಕಕ್ಕೆ ನೋಂದಾಯಿಸಲು ₹250, ಜಿಲ್ಲಾ ಘಟಕಕ್ಕೆ ₹1000, ರಾಜ್ಯ ಘಟಕಕ್ಕೆ ₹2500 ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ ಘಟಕಕ್ಕೆ ನೋಂದಾಯಿಸಿಕೊಂಡವರಿಗೆ ತಾಲೂಕು, ಜಿಲ್ಲೆ, ರಾಜ್ಯ ಸಹಿತ ಅಖಿಲ ಭಾರತ ಮಹಾಸಭಾ ಘಟಕದ 21ಸ್ಥಾನಕ್ಕೆ ಸ್ಪರ್ದಿಸುವ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಹಕ್ಕು ದೊರೆಯಲಿದೆ. ಸದಸ್ಯತ್ವದ ಶೇ.90 ಹಣ ತಾ. ಘಟಕಕ್ಕೆ ವಾಪಾಸ್ ದೊರೆಯಲಿದ್ದು ಈಗಾಗಲೇ ನಾನು ದಾನವಾಗಿ ನೀಡಿದ ವಿಶಾಲ ಜಾಗದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಸದಸ್ಯತ್ವ ಶುಲ್ಕ ಸಹಕಾರಿಯಾಗಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಸಂಘಟನೆ ಸದೃಢಗೊಳಿಸುವಂತೆ ತಿಳಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸುವ ಅಪೇಕ್ಷೆ ಹೊಂದಿದ್ದು ಸದಸ್ಯರು ಬೆಂಬಲಿಸುವಂತೆ ಮನವಿ ಮಾಡಿದರು.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಘಟಕದ ಪ್ರ.ಕಾ ಕುಮಾರಸ್ವಾಮಿ ಹಿರೇಮಠ್ ಮೊ.9986400293ಗೆ ಸಂಪರ್ಕಿಸುವಂತೆ ತಿಳಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಪ್ರ.ಕಾ ಕುಮಾರಸ್ವಾಮಿ ಹಿರೇಮಠ್, ನಗರಾಧ್ಯಕ್ಷ ಗಿರೀಶ್ ಧಾರವಾಡದ, ಯುವ ಘಟಕದ ಅಧ್ಯಕ್ಷ ವೀರಣ್ಣಗೌಡ ಇತರರು ಇದ್ದರು.