ಸಾರಾಂಶ
ಸುರಪುರ: ಡಿ.23 ಹಾಗೂ 24ರಂದು ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ಚಿಂತನ-ಮಂಥನ ನಡೆಯಲಿದೆ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದ್ದಾರೆ.
ನಗರದ ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ಚಿಂತನ ಮಂಥನ ಅಧಿವೇಶನ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತರಿಗೆ ಕಾಲವಿಲ್ಲದಂತಾಗಿದೆ. ಸಮುದಾಯ ಎಲ್ಲರೊಂದಿಗೆ ಅನ್ಯೋನ್ಯ ಬಾಂಧವ್ಯ ಹೊಂದಿದೆ. ನಮ್ಮತನ ಉಳಿಸಿಕೊಳ್ಳಲು ಅಧಿವೇಶನದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.ಅಧಿವೇಶನಕ್ಕೆ ರಾಜ್ಯಾಂತದಿಂದ ಸುಮಾರು 10 ಲಕ್ಷ ಜನ ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ ಸುರಪುರ ಮತ್ತು ಹುಣಸಗಿ ತಾಲೂಕಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.
ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಹಾಗೂ ಕಲಬುರ್ಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್ ಮಾತನಾಡಿ, ಈಗಾಗಲೇ ಸಚಿವ ಈಶ್ವರ ಖಂಡ್ರೆಯವರು ಕೂಡ ಕರೆ ಮಾಡಿ ಅವಳಿ ತಾಲೂಕಿನ ಪ್ರತಿಯೊಬ್ಬರೂ ಆಗಮಿಸಬೇಕು ಎಂಬುದಾಗಿ ಆಹ್ವಾನಿಸಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಉಪಾಧ್ಯಕ್ಷರು ಆಗಮಿಸಿ ನಿಮ್ಮನ್ನು ಸಂಪರ್ಕಿಸಿ ಕರೆ ನೀಡಿದ್ದಾರೆ. ತಪ್ಪದೇ ಅಧಿವೇಶನಕ್ಕೆ ಹಾಜರಾಗಬೇಕು ಎಂದರು.ಮಲ್ಲಿಕಾರ್ಜುನ ರೆಡ್ಡಿ, ಜಗದೀಶ ಪಾಟೀಲ್ ಇತರರು ಮಾತನಾಡಿ, ಮಹಾ ಅಧಿವೇಶನದ ಮೂಲಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಿಡುಗಡೆಗೆ ಮುಂದಾಗಿರುವ ಎ.ಕಾಂತರಾಜ್ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಬೇಕು ಎಂದರು. ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡ್ಯಾಳ, ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಕನ್ನಡದ ಚಕ್ರವರ್ತಿ ಅಮೋಘವರ್ಷ ನೃಪತುಂಗರ ಜಯಂತಿ ಆಚರಿಸಲಾಯಿತು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ ಅವರನ್ನು ಸನ್ಮಾನಿಸಲಾಯಿತು.ಜಗದೀಶ ಪಾಟೀಲ್ ಸ್ವಾಗತಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ ವಂದಿಸಿದರು. ಮಹಾಸಭಾದ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಮಾಜಿ ಉಪಾಧ್ಯಕ್ಷ ರಾಜಶೇಖರ ವಜ್ಜಲ್, ಮಹಾಸಭಾದ ಯುವ ಘಟಕದ ಅಧ್ಯಕ್ಷ ಅವಿನಾಶ ಜಗನ್ನಾಥ್, ಬಸವರಾಜ ಜಮದ್ರಖಾನಿ, ಶಿವರಾಜಪ್ಪ ಗೋಲಗೇರಿ, ಎಚ್.ಸಿ. ಪಾಟೀಲ್, ಬಾಬುಗೌಡ ಪಾಟೀಲ್ ಅಗತೀರ್ಥ, ಸೂಗುರೇಶ ವಾರದ್, ಶಿವರಾಜ ಬುದೂರ, ಮಲ್ಲಣ್ಣ ಸಾಹು ಮುಧೋಳ, ಸಿದ್ದಣಗೌಡ ಹೆಬ್ಬಾಳ ಸೇರಿದಂತೆ ಇತರರಿದ್ದರು.
---------13ವೈಡಿಆರ್2
ಸುರಪುರ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ಚಿಂತನ ಮಂಥನ ಅಧಿವೇಶನ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿದರು.