ಸಾರಾಂಶ
ಭಾರತೀಯರೆಲ್ಲರೂ ಮೂಲತಃ ಹಿಂದೂಗಳೇ, ಯಾರು ಏನೇ ಹೇಳಿದರೂ ವೀರಶೈವ ಲಿಂಗಾಯತರು ಮೊದಲು ಹಿಂದೂಗಳು ಎನ್ನುವುದನ್ನು ಮರೆಯಬಾರದು ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತೀಯರೆಲ್ಲರೂ ಮೂಲತಃ ಹಿಂದೂಗಳೇ, ಯಾರು ಏನೇ ಹೇಳಿದರೂ ವೀರಶೈವ ಲಿಂಗಾಯತರು ಮೊದಲು ಹಿಂದೂಗಳು ಎನ್ನುವುದನ್ನು ಮರೆಯಬಾರದು ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಶ್ರಾವಣ ಮಾಸದ ಅಂಗವಾಗಿ ಹಿರೇಕಲ್ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವದೀಕ್ಷಾ ಕಾರ್ಯಕ್ರದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಶಿವದೀಕ್ಷಾ ಪಡೆದವರು ಪ್ರತಿ ದಿನ ಪ್ರಾತಃಕಾಲದಲ್ಲಿ ಎದ್ದು ಸ್ನಾನ ಮಾಡಿ ಇಷ್ಟಲಿಂಗವನ್ನು ಅಂಗೈಯಲ್ಲಿ ಧರಿಸಿಕೊಂಡು ಗುರುಗಳು ಹೇಳಿಕೊಟ್ಟ ಪಂಚಾಕ್ಷರಿ ಮಂತ್ರವನ್ನು ಜಪಿಸಿಕೊಂಡು ಪೂಜಾ ಕೈಂಕರ್ಯವನ್ನು ಪೂರ್ಣಗೊಳಿಸಬೇಕು. ಶಿವದೀಕ್ಷಾ ಮಾಡಿಸಿಕೊಂಡವರೆಲ್ಲರೂ ಇಷ್ಟಲಿಂಗವನ್ನು ಯಾವುದೇ ಕಾರಣಕ್ಕೂ ದೇಹದ ಹೊರಗಿಡಬೇಡಿ, ಇಷ್ಟಲಿಂಗ ಸದಾ ಎದೆಯಂಗಳದಲ್ಲಿರಬೇಕು ಎಂದರು.ವೀರಶೈವ ಧರ್ಮವನ್ನು ಜಗದಾದಿ ಜಗದ್ಗುರು ಶ್ರೀ ರೇಣುಕಾದಿ ಪಂಚಾಚಾರ್ಯರು ಸ್ಥಾಪಿಸಿದ್ದು, ಭಾರತದಲ್ಲಿ ಪಂಚಾಚಾರ್ಯರಿಂದ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ ಹಾಗೂ ಕಾಶಿ ಎಂಬ 5 ಪೀಠಗಳನ್ನು ಸ್ಥಾಪಿಸಲಾಗಿದೆ ಎಂದರು.
ಹಾರನಹಳ್ಳಿ ರಾಮಲಿಂಗೇಶ್ವರ ಮಠ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮ ಪರಂಪರೆಯಲ್ಲಿ ಪೂಜಾ ಪುನಸ್ಕಾರಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ. ನಮ್ಮ ಎಲ್ಲಾ ಪೂಜಾ ಕೈಂಕರ್ಯಗಳನ್ನು ತಪ್ಪದೇ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.ಕೋಣಂದೂರು ಮತ್ತು ಪುರ ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಪಂಚಾಕ್ಷರಿ ಮಹಾ ಮಂತ್ರವನ್ನು ಪಠಿಸಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ಎಂ.ಪಿ.ಎಂ. ವಿಜಯಾನಂದಸ್ವಾಮಿ, ಪುರಾಣ ಪ್ರವಾಚಕ ಬಸವರಾಜಶಾಸ್ತ್ರಿ ಮಾತನಾಡಿದರು. 50 ಜಂಗಮ ವಟುಗಳು ಶಿವದೀಕ್ಷೆ ಪಡೆದರು. ಬಸಯ್ಯಶಾಸ್ತ್ರಿ ನಿರೂಪಿಸಿದರು. ಶ್ರೀ ಮಠದ ವ್ಯವಸ್ಥಾಪಾಕ ಚನ್ನಬಸಯ್ಯ, ನಿವೃತ್ತ ಪ್ರಾಂಶುಪಾಲ ಕೆ.ಜಿ.ಉಮಾಪತಿ, ಗುರುಪ್ರಸಾದ್ ಹಾಗೂ ಇತರರು ಇದ್ದರು.