ಮಾನವೀಯ ಧರ್ಮ ಸಂಸ್ಥಾಪಕ ಬಸವಣ್ಣ

| Published : May 01 2025, 12:48 AM IST

ಸಾರಾಂಶ

ಮಾನವೀಯ ನೆಲೆಯಲ್ಲಿ ಮನುಷ್ಯರನ್ನು ನೋಡಬೇಕು ಅವನ ಆತ್ಮ ಶುದ್ಧಿಗೆ ಪ್ರೇರೇಪಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರುಮಹಾ ಮಾನವತವಾದಿ, ಮಾನವೀಯ ಧರ್ಮ ಸಂಸ್ಥಾಪಕ ಅನುಭವ ಮಂಟಪದ ನಿರ್ಮಾತೃ ಬಸವಣ್ಣನವರು ನಾಡು ವಿಶ್ವ ಕಂಡ ಶ್ರೇಷ್ಠ ಮಾನವತವಾದಿ ಎಂದು ಅಲಿಯನ್ಸ್ ಕ್ಲಬ್ ಆಫ್ ಇಂಟರ್ನ್ಯಾಷನಲ್ ಅಂತಾರಾಷ್ಟ್ರೀಯ ನಿರ್ದೇಶಕ ಹಾಗೂ ಸುಗಮ ಸಂಗೀತ ಪರಿಷತ್ತು ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಹೇಳಿದರು.ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಹಾಗೂ ಅಲಿಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಸಂಯುಕ್ತ ಆಶ್ರಯದಲ್ಲಿ ಶಿವರಾಮಪೇಟೆಯ ಸಂಘದ ಕಚೇರಿಯಲ್ಲಿ ನಡೆದ ಭಕ್ತಿ ಭಂಡಾರಿ, ಲೋಕಗುರು ಬಸವಣ್ಣ ಅವರ ಜಯಂತಿ ಪ್ರಯುಕ್ತ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ಮಾನವೀಯ ನೆಲೆಯಲ್ಲಿ ಮನುಷ್ಯರನ್ನು ನೋಡಬೇಕು ಅವನ ಆತ್ಮ ಶುದ್ಧಿಗೆ ಪ್ರೇರೇಪಿಸಬೇಕು. ಆತ್ಮ ಸಂಸ್ಕಾರವಾಗದೆ ಮನುಷ್ಯನ ಏಳಿಗೆ ಸಾಧ್ಯವಿಲ್ಲ ಇದನ್ನೇ ಬಸವಣ್ಣನವರು ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎಂದು ವ್ಯಾಖ್ಯಾನಿಸಿದ್ದಾರೆ ಎಂದರು.ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಬಸವಣ್ಣ ವಚನಕಾರ ಅಷ್ಟೇ ಅಲ್ಲದೆ ತತ್ವಜ್ಞಾನಿ, ಸಮಾಜ ಸುಧಾರಕ ಎಂಬ ನೆಲೆಯಲ್ಲಿಯೂ ಮಹತ್ವದ ಸಾಧನೆ ಮಾಡಿದ್ದಾರೆ. 12ನೇ ಶತಮಾನದಲ್ಲಿ ಜಾತಿಯ ತಾರತಮ್ಯದ ವಿರುದ್ಧ ಮೌಢ್ಯ ಕಂದಾಚಾರದ ವಿರುದ್ಧ ಸಮರ ಸಾರಿದ್ದಾರೆ ಎಂದರೆ ಅವರ ಜ್ಞಾನದ ಶಕ್ತಿ ಸಾಮಾಜಿಕ ಬದ್ಧತೆ ಇಂದಿಗೂ ಅನುಕರಣೀಯ ಎನಿಸಿದೆ. ಆ ಕಾರಣಕ್ಕೆ ಅಷ್ಟೇ ಅಲ್ಲದೆ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಪ್ರಥಮ ವ್ಯಕ್ತಿ ಕೂಡ ಬಸವಣ್ಣ ಎನ್ನುವುದು ಕನ್ನಡಿಗರ ಹೆಮ್ಮೆ ಎಂದು ಹೇಳಿದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜ ಮಾತನಾಡಿ ಬಸವಣ್ಣನವರ ಅನುಭವ ಮಂಟಪದ ಆಶಯಗಳು ಸಮಾನತೆ ವಿಶೇಷವಾಗಿ ಮಹಿಳಾ ಸಮಾನತೆ ಹಾಗೂ ಕಾಯಕವಿಲ್ಲದೆ ಬದುಕಿಗೆ ಅರ್ಥವಿಲ್ಲ ಎಂಬ ವಿಚಾರಗಳು ಜಗತ್ತಿಗೆ ಬಹುದೊಡ್ಡ ಸಂದೇಶ ನೀಡಿವೆ ಎಂದು ಹೇಳಿದರು.ಅಖಿಲ ಕರ್ನಾಟಕ ಒಕ್ಕಲಿಗ ಗ್ರಾಮ ಸಭಾ ಹಾಗೂ ಅಲೆಯನ್ಸ್ ಕ್ಲಬ್ ಆಫ್ ಮೈಸೂರು ನಾಲ್ವಡಿ ಅಧ್ಯಕ್ಷ ಎನ್. ಬೆಟ್ಟೇಗೌಡ ಮಾತನಾಡಿ, ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವು ಜನಪರ ಮತ್ತು ಸಮಾಜ ಸುಧಾರಣೆ ಕ್ರಮ ಕೈಗೊಂಡರು. ಕಾಯಕವೇ ಕೈಲಾಸವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ ಶಿವಶರಣರೆಂದು ಕರೆದಿದ್ದಾಗಿ ತಿಳಿಸಿದರು.ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಅಲೆಯನ್ಸ್ ಕ್ಲಬ್ ಆಫ್ ಇಂಟರ್‌ ನ್ಯಾಷನಲ್‌ 255ರ ರಾಜ್ಯಪಾಲ ಎಸ್. ವೆಂಕಟೇಶ್ ಮತ್ತು ಇಂದಿರಾ ವೆಂಕಟೇಶ್, ಕೃಷ್ಣಾಜಿರಾವ್, ಕವಿ ಪ್ರವೀಣ್ ಇದ್ದರು.