ಎಲ್ಲ ಸ್ತರದ ಶಿಕ್ಷಣ ಕನ್ನಡದಲ್ಲಿರಲಿ: ಚುಂಚಶ್ರೀ ಸಲಹೆ

| Published : Aug 16 2024, 12:48 AM IST

ಸಾರಾಂಶ

ಕಳೆದ ಕೆಲ ವರ್ಷಗಳಿಂದ ತಾಂತ್ರಿಕ ಶಿಕ್ಷಣದಲ್ಲೂ ಕನ್ನಡ ಬಂದಿದೆ. ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ಪ್ರಾಮುಖ್ಯತೆ ನೀಡುವಂತಹ ಕೆಲಸ ಮಾಡಿದರೆ ಕನ್ನಡ ಭಾಷೆ ಮತ್ತಷ್ಟು ಮೆರಗನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಚಿಂತನೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಆಡಳಿತ ಭಾಷೆಯಾಗಬೇಕು. ಎಲ್ಲ ಸ್ತರದ ಶಿಕ್ಷಣವೂ ಕನ್ನಡದಲ್ಲೇ ನಡೆಯುವಂತಾಗಬೇಕು. ಆಗ ಕನ್ನಡ ಮತ್ತು ಕನ್ನಡಿಗರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 87ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕಳೆದ ಕೆಲ ವರ್ಷಗಳಿಂದ ತಾಂತ್ರಿಕ ಶಿಕ್ಷಣದಲ್ಲೂ ಕನ್ನಡ ಬಂದಿದೆ. ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ಪ್ರಾಮುಖ್ಯತೆ ನೀಡುವಂತಹ ಕೆಲಸ ಮಾಡಿದರೆ ಕನ್ನಡ ಭಾಷೆ ಮತ್ತಷ್ಟು ಮೆರಗನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

ಸಾಹಿತ್ಯ ಸಮ್ಮೇಳನವೆಂದರೆ ಅದು ನಮ್ಮ ಭಾಷೆಯ ಹಬ್ಬ, ತಾಯಿಯ ಹಬ್ಬ. ಅದರಲ್ಲಿ ಒಟ್ಟಾಗಿ ಎಲ್ಲರೂ ಪಾಲ್ಗೊಳ್ಳಬೇಕು. ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ ಕವಿವಾಣಿಯಂತೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡದ ತೇರನ್ನು ಎಳೆಯಬೇಕು ಎಂದು ನುಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಮಾತಿಗಿಂತ ಕೆಲಸ ಮುಖ್ಯ ಎನ್ನುವಂತೆ ಎಲ್ಲ ಸಮಿತಿಗಳ ಅಧ್ಯಕ್ಷರು, ಸದಸ್ಯರು ಮಾಡಬೇಕು. ಸಣ್ಣ ಪುಟ್ಟ ವಿಷಯಗಳನ್ನು ಚರ್ಚೆಗೆ ಬಿಡದೆ ಎಲ್ಲ ಭಿನ್ನಮತಗಳನ್ನೂ ಅಲ್ಲೇ ಶಮನ ಮಾಡಿ ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ರಾಜ್ಯ, ಅಂತಾರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿರುವವರನ್ನೂ ಕನ್ನಡದ ಹಬ್ಬಕ್ಕೆ ಕರೆತಂದು, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡುವತಂಹ ಜವಾಬ್ದಾರಿ ನಮ್ಮದಾಗಿದೆ. ಇದಕ್ಕಾಗಿ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ಜಿಲ್ಲಾಡಳಿತದಿಂದ ಎಲ್ಲ ಸೌಲಭ್ಯಗಳನ್ನೂ ಪಡೆದುಕೊಂಡು ಸರಿಯಾದ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆಯನ್ನೂ ತೆಗೆದುಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಮಾಜಿ ಶಾಸಕ ಡಾ.ಅನ್ನದಾನಿ ಮಾತನಾಡಿ, ರಾಜಕಾರಣವನ್ನು ಬದಿಗಿಟ್ಟು ಕನ್ನಡ, ಭಾಷೆ, ನೆಲ, ಜಲ ಉಳಿಸುವ ಪ್ರಯತ್ನದೊಂದಿಗೆ ಪ್ರತಿ ಬಾರಿ ಕಾಣಿಸಿಕೊಳ್ಳುವ ಕಾವೇರಿ ಸಮಸ್ಯೆಗೂ ಸಮ್ಮೇಳನದಲ್ಲಿ ಇತಿಶ್ರೀ ಹಾಡುವಂತಹ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯಸಮ್ಮೇಳನದ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಮಾತನಾಡಿ, ಮೊದಲ ಸಾಹಿತ್ಯ ಸಮ್ಮೇಳನ ಆಗಿದ್ದೂ ಮಂಡ್ಯದಲ್ಲೇ, ಅಮೃತ ಮಹೋತ್ಸವದ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದೂ ಮಂಡ್ಯ ಜಿಲ್ಲೆಯಲ್ಲೇ. ಹಾಗಾಗಿ ಇದಕ್ಕೆ ತುಂಬಾ ಮಹತ್ವವಿದೆ ಎಂದರು.

ಹಿಂದೆ ಯಾರೂ ಮಾಡದ, ಮುಂದೆ ಇದೊಂದು ಮಾರ್ಗಸೂಚಿಯಂತಹ ಸಾಹಿತ್ಯ ಸಮ್ಮೇಳನವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಗಳನ್ನು ಅರಿತು ನಡೆಯುತ್ತಾರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕರಾದ ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಮಧು ಜಿ.ಮಾದೇಗೌಡ, ದಿನೇಶ್ ಗೂಳೀಗೌಡ, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜು ಬಾಲದಂಡಿ, ಜಿಲ್ಲಾ ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ ಇತರರಿದ್ದರು.