ಕರಾವಳಿಯಲ್ಲಿ ಕಮಲ ಕಮಾಲ್‌, ಮೂರೂ ಜಿಲ್ಲೆಗಳಲ್ಲಿ ಬಿಜೆಪಿ ಜಯಭೇರಿ

| Published : Jun 05 2024, 01:30 AM IST / Updated: Jun 05 2024, 10:14 AM IST

ಕರಾವಳಿಯಲ್ಲಿ ಕಮಲ ಕಮಾಲ್‌, ಮೂರೂ ಜಿಲ್ಲೆಗಳಲ್ಲಿ ಬಿಜೆಪಿ ಜಯಭೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹೊಸಬರಿಗೆ ಟಿಕೆಟ್‌ ದೊರೆತಿದ್ದು, ಬಣ ರಾಜಕೀಯ, ಅಪಪ್ರಚಾರ ಮೀರಿ ನಿಂತು ಗೆಲುವು ಸಾಧಿಸಿದ ಅಭ್ಯರ್ಥಿಗಳು ಬಿಜೆಪಿಯ ಭದ್ರಕೋಟೆಯನ್ನು ಮತ್ತಷ್ಟು ಬಲಪಡಿಸಿದ್ದಾರೆ.

ಆತ್ಮಭೂಷಣ್‌

 ಮಂಗಳೂರು ;  ಕರಾವಳಿ ಕರ್ನಾಟಕದಲ್ಲಿ ಈ ಬಾರಿಯೂ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಜೆಪಿಯ ಹೊಸ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಕರಾವಳಿ ಬಿಜೆಪಿಯ ಗಟ್ಟಿ ನೆಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ದ.ಕ.ದಲ್ಲಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉತ್ತರ ಕನ್ನಡದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿನ ನಗೆ ಬೀರಿದ್ದಾರೆ. ಈ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕಿತ್ತು. ಉಡುಪಿ-ಚಿಕ್ಕಮಗಳೂರಲ್ಲಿ ಹಿಂದೊಮ್ಮೆ ಸಂಸದರಾಗಿದ್ದ ಅನುಭವಿ ರಾಜಕಾರಣಿ ಜಯಪ್ರಕಾಶ್‌ ಹೆಗ್ಡೆಯವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರಾದರೂ, ಅವರಿಗೂ ಗೆಲುವು ಸಾಧ್ಯವಾಗಿಲ್ಲ. ಬಿಜೆಪಿಗೆ ಶ್ರೀರಕ್ಷೆಯಾದ ಮೋದಿ ಅಲೆ:

ಕರಾವಳಿ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಗೆಲುವಿಗೆ ಕಾರಣವಾದ ಏಕೈಕ ಸಂಗತಿ ಎಂದರೆ ಅದು ಮೋದಿ ಅಲೆ. ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿ ಅವರು ಮಂಗಳೂರಲ್ಲಿ ರೋಡ್‌ ಶೋ ನಡೆಸಿದರೆ, ಶಿರಸಿಯಲ್ಲಿ ಸಮಾವೇಶಕ್ಕೆ ಆಗಮಿಸಿದ್ದರು. ಇದನ್ನು ಹೊರತುಪಡಿಸಿದರೆ ಉಡುಪಿ-ಚಿಕ್ಕಮಗಳೂರಿಗೆ ಅಮಿತ್‌ ಶಾ, ನಡ್ಡಾ ಮತ್ತಿತರ ರಾಷ್ಟ್ರ ನಾಯಕರು ಆಗಮಿಸುವುದು ಕೊನೆಕ್ಷಣದಲ್ಲಿ ರದ್ದುಗೊಂಡಿತ್ತು. ಹೀಗಿದ್ದೂ ಬಿಜೆಪಿ ವಿಜಯ ಯಾತ್ರೆ ನಡೆಸುವಲ್ಲಿ ಯಶಸ್ವಿಯಾಗಿದೆ.

ದ.ಕ.ದಲ್ಲಿ ಬಿಜೆಪಿಯ ಒಂದು ಬಣ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಿದರೂ ಕಾಂಗ್ರೆಸ್‌ ಬಾಹುಳ್ಯದ ಚಿಕ್ಕಮಗಳೂರು ಭಾಗ ಸವಾಲಾಗಿ ಪರಿಣಮಿಸಿತ್ತು. ಉತ್ತರ ಕನ್ನಡದಲ್ಲಿ ಟಿಕೆಟ್‌ ವಂಚಿತ ಸಂಸದ ಅನಂತ ಕುಮಾರ್‌ ಹೆಗಡೆ ಕ್ಷೇತ್ರದತ್ತ ತಲೆ ಹಾಕಿರಲಿಲ್ಲ. ಅವರ ಬೆಂಬಲಿಗರು ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧವೇ ಜಾಲತಾಣಗಳಲ್ಲಿ ಅಪಪ್ರಚಾರಕ್ಕೆ ಇಳಿದಿರುವ ಬಗ್ಗೆ ಆರೋಪ ವ್ಯಕ್ತವಾಗಿತ್ತು. ಮಾತ್ರವಲ್ಲ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಕೂಡ ಪ್ರಚಾರದಲ್ಲಿ ತೊಡಗಿಸಿಕೊಳ್ಳದೆ, ಕಾಂಗ್ರೆಸ್‌ ಕಡೆ ವಾಲಿರುವ ಬಗ್ಗೆ ಪ್ರಚಾರ ಹಬ್ಬಿತ್ತು. ಚುನಾವಣೆ ವೇಳೆ ಹೆಬ್ಬಾರ್‌ರ ಪುತ್ರ ಕೂಡ ಕಾಂಗ್ರೆಸ್‌ ಗೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ ಗೆ ಕೈಗೆಟುಕದ ಗೆಲುವು:

ದ.ಕ.ಜಿಲ್ಲೆಯಲ್ಲಿ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆಗಿರುವ ಬಿಲ್ಲವ ಸಮುದಾಯದ ಪದ್ಮರಾಜ್‌ ಆರ್‌.ಪೂಜಾರಿ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿತ್ತು. ಇದೇ ಮೊದಲ ಬಾರಿ ಭಿನ್ನಮತ ಮರೆತು ಎಲ್ಲರೂ ಒಟ್ಟಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು. ಉಡುಪಿಯಲ್ಲಿ ಜಯಪ್ರಕಾಶ್‌ ಹೆಗ್ಡೆ ಅವರೇ ಕಾಂಗ್ರೆಸ್‌ ಅಭ್ಯರ್ಥಿ ಎಂಬುದು ಸಾಕಷ್ಟು ಮೊದಲೇ ಸುದ್ದಿಯಾಗಿತ್ತು. ಹಿಂದೊಮ್ಮೆ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಜಯಪ್ರಕಾಶ್‌ ಹೆಗ್ಡೆ ಬಳಿಕ ಬಿಜೆಪಿ ಸೇರಿದ್ದರು. ಚುನಾವಣೆ ವೇಳೆ ಕಾಂಗ್ರೆಸ್‌ ಸೇರಿದ್ದರು. ಆಸ್ಕರ್ ಫರ್ನಾಂಡಿಸ್‌ ಕಾಲಾನಂತರ ಉಡುಪಿಯಲ್ಲಿ ಕಾಂಗ್ರೆಸ್‌, ನಾಯಕರ ಕೊರತೆ ಎದುರಿಸುತ್ತಿದೆ.

ಉತ್ತರ ಕನ್ನಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಖಾನಾಪುರ ಕ್ಷೇತ್ರದರಾದರೂ ಹೊರಗಿನವರೇ ಎಂಬ ಭಾವನೆ ಜನರಲ್ಲಿತ್ತು. ಇಲ್ಲಿ ಪ್ರಚಾರಕ್ಕೆ ಸಿಎಂ, ಡಿಸಿಎಂ ಹೊರತುಪಡಿಸಿದರೆ ರಾಷ್ಟ್ರೀಯ ನಾಯಕರನ್ನು ಕರೆದಿರಲಿಲ್ಲ. ಹೊರಗಿನ ಅಭ್ಯರ್ಥಿ ಎಂಬ ಹಣೆಪಟ್ಟಿ ಜೊತೆಗೆ ಸ್ಥಳೀಯ ಮುಖಂಡರ ಜೊತೆ ಹೊಂದಾಣಿಕೆ ಕೊರತೆ, ತಳಮಟ್ಟದ ಪ್ರಚಾರದ ತಂತ್ರಗಾರಿಕೆ ಇಲ್ಲದೆ ಸೋಲಬೇಕಾಯಿತು ಎಂದೇ ವಿಶ್ಲೇಷಿಸಲಾಗುತ್ತಿದೆ.