ಕನ್ನಡಪ್ರಭ ವಾರ್ತೆ ಬೆಂಗಳೂರು

ಆಟೋ ಗ್ಯಾಸ್‌ಗಾಗಿ ಚಾಲಕರ ಪರದಾಟ ಗುರುವಾರವೂ ಮುಂದುವರೆದಿದ್ದು, ರಾತ್ರಿಯಿಡೀ ಸರದಿ ಸಾಲಲ್ಲಿ ನಿಂತರೂ ಗ್ಯಾಸ್‌ ಸಿಗದೆ ಸಿಟ್ಟಿಗೆದ್ದ ಚಾಲಕರು ಕಣ್ಣೀರು ಹಾಕುತ್ತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಗಡಿ ರೋಡ್‌ ಟೋಲ್‌ಗೇಟ್‌ನಲ್ಲಿರುವ ಗ್ಯಾಸ್‌ ಬಂಕ್‌ಗೆ ಬುಧವಾರ ರಾತ್ರಿ ಒಂದು ಗಂಟೆಗೇ ಚಾಲಕರು ಆಗಮಿಸಿದ್ದು, ಗುರುವಾರ ಬೆಳಗ್ಗೆ ಹೊತ್ತಿಗೆ ಎರಡು ಕಿಲೋ ಮೀಟರ್‌ಗೂ ಅಧಿಕ ಸಾಲು ಕಂಡುಬಂತು. ಎಂಟ್ಹತ್ತು ಗಂಟೆ ಕಾದರೂ ಗ್ಯಾಸ್‌ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ ಕೆಲ ಚಾಲಕರು, ಹೀಗಾದರೆ ನಾವು ಜೀವನ ನಡೆಸುವುದು ಹೇಗೆ? ಸರ್ಕಾರ ಏಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾಗರಬಾವಿ ಸರ್ಕಲ್‌ನಲ್ಲಿ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಎಲ್‌ಪಿಜಿಗಾಗಿ ಚಾಲಕರು ಕಾದು ನಿಂತಿದ್ದರು. ಇದರಿಂದಾಗಿ ಕಲ್ಯಾಣ ನಗರದವರೆಗೂ ಉದ್ದನೆ ಸಾಲು ಕಂಡುಬಂತು. ಎಚ್‌ಎಂಟಿ ರಸ್ತೆಯ ಸುಬೇದಾರ್‌ ಪಾಳ್ಯದಲ್ಲಿರುವ ಏಜೀಸ್‌ ಗ್ಯಾಸ್‌ ಸ್ಟೇಷನ್‌ನಲ್ಲಿ ಗ್ಯಾಸ್‌ಗಾಗಿ ಒಂದು ಕಿಲೋ ಮೀಟರ್‌ಗೂ ಅಧಿಕ ಸರದಿ ಕಂಡು ಬಂತು.

ಟ್ರಂಪ್‌ ವಿರುದ್ಧವೂ ವಾಗ್ದಾಳಿ:


ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರಿಂದಲೇ ಈ ರೀತಿ ಗ್ಯಾಸ್‌ಗೆ ಸಂಕಷ್ಟ ಉಂಟಾಗಿದೆ. ಟ್ರಂಪ್‌ನಿಂದಲೇ ಇಷ್ಟೆಲ್ಲಾ ಅನುಭವಿಸಬೇಕಾಗಿದೆ ಎಂದು ಕೆಲ ಚಾಲಕರು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 28 ಸಂಸದರು ಜಯಗಳಿಸಲು ನಮ್ಮ ಮತ ಬೇಕು. ಆದರೆ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ರಾಜಕೀಯ ನಾಯಕರ ಚುನಾವಣೆಗೆ, ಸಿನಿಮಾಗಳ ಪ್ರಚಾರಕ್ಕೆ ನಮ್ಮ ಆಟೋ ಬೇಕು. ಆದರೆ ನಮ್ಮ ಕಷ್ಟದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸರ್ಕಾರವೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಟೋ ಚಾಲಕರು ಆರೋಪಿಸಿದರು.

ರಸ್ತೆಯಲ್ಲೇ ನಿಂತ ಆಟೋಗಳು

ಗ್ಯಾಸ್‌ ಖಾಲಿಯಾಗಿ ರಸ್ತೆಯಲ್ಲೇ ಆಟೋಗಳು ನಿಲ್ಲುತ್ತಿರುವ ಪ್ರಕರಣಗಳ ಸಂಖ್ಯೆ ಗುರುವಾರ ಹೆಚ್ಚಾಗಿತ್ತು. ಕೆಲವರು ಕಿಲೋ ಮೀಟರ್‌ಗಟ್ಟಲೇ ಗ್ಯಾಸ್‌ಗಾಗಿ ಆಟೋಗಳನ್ನು ತಳ್ಳಿದ್ದಾರೆ. ಅಲ್ಲಿ ಗ್ಯಾಸ್‌ ಸಿಗುತ್ತದೆ-ಇಲ್ಲಿ ಗ್ಯಾಸ್‌ ಸಿಗುತ್ತದೆ ಎಂದು ಆಟೋಗಳನ್ನು ತಳ್ಳಿ ಚಾಲಕರು ಹೈರಾಣಾದರು.

ಸಿಎನ್‌ಜಿ ಅಭಾವದ ಆತಂಕ

ಆಟೋ ಗ್ಯಾಸ್‌ಗೆ ಸಂಕಷ್ಟ ಉಂಟಾದ ಬೆನ್ನಲ್ಲೇ ಸಿಎನ್‌ಜಿಗೂ ಸಂಕಷ್ಟ ಉಂಟಾಗುವುದೇ ಎಂಬ ಆತಂಕ ಕ್ಯಾಬ್‌ ಮಾಲೀಕರನ್ನು ಗುರುವಾರ ಕಾಡಿತು. ಈ ಮೊದಲು 10 ನಿಮಿಷದಲ್ಲಿ ಸಿಎನ್‌ಜಿ ಹಾಕಿಸಿಕೊಂಡು ಬರುತ್ತಿದ್ದವರು ಶೇಷಾದ್ರಿಪುರಂನ ಗ್ಯಾಸ್‌ ಸ್ಟೇಷನ್‌ನಲ್ಲಿ ಕನಿಷ್ಠ ಒಂದು ಗಂಟೆಯಾದರೂ ಕಾಯಬೇಕಾದ ಸ್ಥಿತಿ ಬಂದಿದ್ದು, ಈ ಆತಂಕಕ್ಕೆ ಕಾರಣವಾಯಿತು.

-ಬಾಕ್ಸ್‌-

ಟ್ರಾಫಿಕ್‌ ಪೊಲೀಸರೊಂದಿಗೆ ವಾಗ್ವಾದ

ಆಟೋ ಗ್ಯಾಸ್‌ ಸ್ಟಾಕ್‌ ಇಲ್ಲ ಎಂದು ಕೆಲವೆಡೆ ಬೋರ್ಡ್‌ ಹಾಕಿದ್ದರೂ ಆಟೋ ಚಾಲಕರು ಆಶಾಭಾವನೆಯಿಂದ ಬಂಕ್‌ಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯುತ್ತಿದ್ದರು. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತದೆ. ಆಟೋಗಳನ್ನು ತೆಗೆಯಿರಿ ಎಂದು ಸಂಚಾರ ಪೊಲೀಸರು ಹೇಳಿದ್ದು, ಕೆಲವೆಡೆ ಸಂಚಾರ ಪೊಲೀಸರು ಮತ್ತು ಆಟೋ ಚಾಲಕರ ನಡುವೆ ವಾಗ್ವಾದಕ್ಕೂ ಕಾರಣವಾಯಿತು.

ಕ್ಯಾಪ್ಷನ್‌....

ಶೇಷಾದ್ರಿಪುರಂನಲ್ಲಿ ಆಟೋ ಗ್ಯಾಸ್‌ ಸ್ಟೇಷನ್‌ನಲ್ಲಿ ಕಂಡು ಬಂದ ‘ನೋ ಸ್ಟಾಕ್‌’ ಬೋರ್ಡ್.

===========

ಪದ್ಮನಾಭನಗರದ ದೇವೇಗೌಡ ಪೆಟ್ರೋಲ್‌ ಬಂಕ್‌ನಲ್ಲಿ ಆಟೋ ಗ್ಯಾಸ್‌ಗಾಗಿ ಸಾಲಾಗಿ ನಿಂತಿದ್ದ ಆಟೋಗಳು.