ಬಸವಣ್ಣನವರ ಸಾಮಾಜಿಕ ಕ್ರಾಂತಿ ಫಲದಿಂದ ನಮ್ಮೆಲ್ಲರಿಗೆ ಗೌರವ

| Published : May 30 2024, 12:56 AM IST

ಬಸವಣ್ಣನವರ ಸಾಮಾಜಿಕ ಕ್ರಾಂತಿ ಫಲದಿಂದ ನಮ್ಮೆಲ್ಲರಿಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರ ಸಾಮಾಜಿಕ ಕ್ರಾಂತಿ ಫಲದಿಂದ ನಮ್ಮೆಲ್ಲರಿಗೆ ಗೌರವ ಎಂದು ಬಸವ ಜಯಂತಿಯ ಸಂಭ್ರಮೋತ್ಸವದಲ್ಲಿ ಶರಣಬಸವ ದೇವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

12ನೇ ಶತಮಾನದಲ್ಲಿ ವಿಶ್ವಗುರು ಬಸವೇಶ್ವರರು ಮಾಡಿದ ಸಾಮಾಜಿಕ ಕ್ರಾಂತಿಯ ಫಲದಿಂದ ಇಂದು ನಾವೆಲ್ಲರೂ ಈ ಸಮಾಜದಲ್ಲಿ ತಲೆ ಎತ್ತಿ ಬದುಕುತ್ತಿದ್ದೇವೆ ಎಂದು ಚರಮೂರ್ತಿ ಚರಂತೇಶ್ವರ ಮಠದ ಶರಣಬಸವ ದೇವರು ನುಡಿದರು.

ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ಚರಮೂರ್ತಿ ಚರಂತೇಶ್ವರ ವಿರಕ್ತಮಠದಲ್ಲಿ ಈಚೆಗೆ ಜರುಗಿದ ಶರಣ ಸಂಸ್ಕೃತಿ ಉತ್ಸವ ಹಾಗೂ ಬಸವ ಜಯಂತಿಯ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕ್ರಾಂತಿಕಾರಕ ಮನೋಭಾವ ಹೊಂದಿದವನು. ಅದಕ್ಕಾಗಿ ನನ್ನನ್ನು ಅನೇಕರು ದ್ವೇಷಿಸುತ್ತಾರೆ. ಬಸವ ಬೆಳವಿಯಂತಹ ಪುಟ್ಟ ಗ್ರಾಮದಲ್ಲಿ ದಶಕಗಳಿಂದ ಅನಾಥವಾಗಿದ್ದ ಶ್ರೀಮದ ಪುನರ್ ನಿರ್ಮಾಣದ ಸಂಕಲ್ಪ ತೊಟ್ಟಿದ್ದೇನೆ. ಬದುಕಲ್ಲಿ ಎಷ್ಟೇ ಕಷ್ಟ ಬಂದರು ಜಾತ್ಯಾತೀತವಾದ ಬಸವ ನೆಲೆಗಟ್ಟಿನಲ್ಲೇ ಮಠ ನಡೆಸುವೆ ಎಂದು ತಿಳಿಸಿದರು.

ಉಪನ್ಯಾಸಕ ಹನುಮಂತ ಠಕ್ಕನ್ನವರ ಕರ್ನಾಟಕ ಸಾಂಸ್ಕೃತಿಕ ನಾಯಕ‌ ಬಸವಣ್ಣವರು ಕುರಿತು ವಿಶೇಷ ಉಪನ್ಯಾಸ ನೀಡಿ, ಕಾಯಕ ಹಾಗೂ ದಾಸೋಹ ಪರಂಪರೆಯ ಮೂಲಕ ಇಡೀ ನಾಡಿಗೆ ಸಮಾನತೆಯ ಪಾಠ ಹೇಳಿಕೊಟ್ಟ ವಿಶ್ವಗುರು ಬಸವಣ್ಣನವರನ್ನು ರಾಜ್ಯ ಸರ್ಕಾರ ಕರ್ನಾಟಕ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಣೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.

ಅನುಭವ ಮಂಟದ ಮೂಲಕ ಸಮಾಜದ ಎಲ್ಲ ವರ್ಗದವರಿಗೆ ನ್ಯಾಯ ನೀಡುವ ಸಂಸತ್ತಿನ ಪರಿಕಲ್ಪನೆಯನ್ನು ಬಸವಣ್ಣನವರು 12ನೇ ಶತಮಾನದಲ್ಲಿ ಹುಟ್ಟು ಹಾಕಿದರು. ವಚನ ಸಾಹಿತ್ಯದ ಮೂಲಕ ಜನರ ನಡುವಿನ ಸಾಮಾಜಿಕ ಅಂತವರನ್ನು ಕಡಿಮೆ ಮಾಡಿ ಸಮಾನತೆ ಸಾರಿದರು. ಪ್ರತಿಯೊಬ್ಬರೂ ಬಸಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳಬೇಕು ಎಂದರು.

ಪತ್ರಕರ್ತ ವಿನಾಯಕ ಮಠಪತಿ ಮಾತನಾಡಿ, ಬಸವಣ್ಣನವರು ಒಂದು ಕಟ್ಟಿಟ್ಟ ಬುತ್ತಿ. ಸಕಲ‌ ಜೀವಾತ್ಮರಿಗೂ ಎಷ್ಟು ಸವಿದರೂ ಬಸವ ಬುತ್ತಿ ಖಾಲಿ ಆಗದು. ಸರ್ಕಾರಗಳು ಕೇವಲ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವುದಕ್ಕಿಂತ ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಬಸವಣ್ಣನವರ ಚಿಂತನೆ ಮೈಗೂಡಿಸಿಕೊಂಡು ಸಮಾಜಪರ ಕೆಲಸ ಮಾಡಬೇಕು. ಪ್ರಸ್ತುತ ಸಮಾಜದಲ್ಲಿ ಬಸವಣ್ಣನವರ ಚಿಂತನೆಯ ಪಾಠ ಅತ್ಯವಶ್ಯಕ. ಹಾಗೆಯೇ ಅವರನ್ನು ಕೇವಲ ಒಪ್ಪಿಕೊಳ್ಳದೇ ಅವರು ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಸುಭಾಷ್ ಶಿರಗಾಂವಿ, ವಕೀಲ ನಾಗೇಶ ಕಿವಡ, ಗುರುರಾಜ ಪೂಜೇರಿ, ಲಕ್ಷ್ಮೀಕಾಂತ ಗಿಜವನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.