ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

| Published : Mar 25 2024, 12:48 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷಾ ಪ್ರವೇಶ ಪತ್ರ ತೋರಿಸಿ ನಿಗಮದ ನಗರ ಹೊರವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ

ಗದಗ: ಜಿಲ್ಲಾದ್ಯಂತ ಮಾ.25ರ ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಪರೀಕ್ಷಾ ಆಕ್ರಮ, ಅನಗತ್ಯ ಗೊಂದಲ, ಅನಾನೂಕೂಲತೆ ಉಂಟಾಗದಂತೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಿ ಸುಗಮ ಪರೀಕ್ಷೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ.ಎಂ. ಎಲ್‌ ಹೇಳಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು 60 ಪರೀಕ್ಷಾ ಕೇಂದ್ರಗಳಿದ್ದು, 16325 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರದ ಸುತ್ತಲೂ 100 ಮೀಟರ್ ಅಂತರದಲ್ಲಿ ಕಲಂ 144 ಜಾರಿಗೊಳಿಸಲಾಗಿದೆ. ಪರೀಕ್ಷೆ ಶಾಂತಿ ಹಾಗೂ ಸುವ್ಯವಸ್ಥಿತವಾಗಿ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ.

200 ಮೀಟರ್ ಸಮೀಪದ ಝರಾಕ್ಸ್ ಕೇಂದ್ರಗಳನ್ನು ಮುಚ್ಚಲಾಗಿದ್ದು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಹಾಗೂ ಇತರೆ ಬಾಹ್ಯ ವ್ಯಕ್ತಿಗಳು ಸುತ್ತಾಡದಂತೆ ನಿಗಾ ವಹಿಸಲು ಸಿಸಿ ಕ್ಯಾಮೇರಾ ಅಳವಡಿಸಲಾಗಿದೆ.ಈ ವರ್ಷ ಸಿಸಿ ಕ್ಯಾಮೆರಾಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕ ಹಾಗೂ ಶಿಸ್ತಿನಿಂದ ಪರೀಕ್ಷೆ ನಡೆಸಲು ಸಿಸಿ ಕ್ಯಾಮೆರಾ ನಿಗಾ ವ್ಯವಸ್ಥೆ ಮಾಡಲಾಗಿದೆ. ಹೋಳಿ ಹಬ್ಬದ ಹಿನ್ನೆಲೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಮಾಡದಂತೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶ ಮಾಡಿಕೊಡಲು ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

ಪರೀಕ್ಷಾರ್ಥಿಗಳಿಗೆ ಬಸ್ ವ್ಯವಸ್ಥೆ:

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರಾರ ಸಂಸ್ಥೆ ನಿಗಮವು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಮಾ. 25 ರಿಂದ ಏ.6ರ ವರೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳು ತಮ್ಮ ವಾಸ ಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಮತ್ತು ವಾಸ ಸ್ಥಳಕ್ಕೆ ಹಿಂದಿರುಗುವಾಗ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ನಿಗಮದ ನಗರ ಹೊರವಲಯ, ಸಾಮಾನ್ಯ ಹಾಗೂ ವೇಗಧೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆ

ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ 60 ಪರೀಕ್ಷಾ ಕೇಂದ್ರಗಳಲ್ಲಿ ಮಾ. 25 ರಿಂದ ಏ.6ರ ವರೆಗೆ ಬೆಳಗ್ಗೆ 9.30 ರಿಂದ ಮಧ್ಯಾಹ್ನ 2.30ರ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ 5 ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್‍ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಬಂದ ಮಾಡಲು ಆದೇಶಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನು ತರುವುದನ್ನು ನಿಷೇಧಿಸಲಾಗಿದೆ.

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರ ಹೋಗುವ ಸಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು, ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಗದಗ ಜಿಲ್ಲೆಯಲ್ಲಿ ಪರೀಕ್ಷಾ ಕಾರ್ಯವು ಸುಗಮವಾಗಿ ನಡೆಯಲು ಅಗತ್ಯವಿರುವ ಸಕಲ ಸಿದ್ಧತೆ ಜಿಲ್ಲಾಡಳಿತದಿಂದ ಮಾಡಲಾಗಿದೆ. ಪರೀಕ್ಷಾ ಅಕ್ರಮ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಪರೀಕ್ಷೆ ವೇಳಾಪಟ್ಟಿ: ಮಾ. 25 ರಂದು ಬೆಳಗ್ಗೆ 10-15 ರಿಂದ ಮಧ್ಯಾಹ್ನ 1-30 ರ ವರೆಗೆ ಪ್ರಥಮ ಭಾಷೆ, ಮಾ. 27 ರಂದು ಬೆಳಗ್ಗೆ 10-15 ರಿಂದ 1-30ರ ವರೆಗೆ ಸಮಾಜ ವಿಜ್ಞಾನ, ಮಾ.30 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ವಿಜ್ಞಾನ, ಏ.2 ರಂದು ಬೆಳಗ್ಗೆ 10.30 ರಿಂದ ಮದ್ಯಾಹ್ನ 1.30ರ ವರೆಗೆ ಗಣಿತ, ಏ.3 ರಂದು ಬೆಳಗ್ಗೆ 10.15 ರಿಂದ ಮದ್ಯಾಹ್ನ 1.30ರ ವರೆಗೆ ಅರ್ಥಶಾಸ್ತ್ರ, ಏ. 4 ರಂದು ಬೆಳಗ್ಗೆ 10.30 ರಿಂದ ಮದ್ಯಾಹ್ನ 1.30ರ ವರೆಗೆ ತೃತೀಯ ಭಾಷೆ, ಏ. 6 ರಂದು ಬೆಳಗ್ಗೆ 10.15 ರಿಂದ ಮದ್ಯಾಹ್ನ 1.15ರ ವರೆಗೆ ದ್ವಿತೀಯ ಭಾಷೆ ಪರೀಕ್ಷೆಗಳು ಜರುಗಲಿವೆ.