ಬೀದರ್‌ ಲೋಕಸಭಾ ಚುನಾವಣೆಗೆ ಸರ್ವ ಸಿದ್ಧತೆ ಪೂರ್ಣ: ಜಿಲ್ಲಾಧಿಕಾರಿ

| Published : May 05 2024, 02:02 AM IST

ಬೀದರ್‌ ಲೋಕಸಭಾ ಚುನಾವಣೆಗೆ ಸರ್ವ ಸಿದ್ಧತೆ ಪೂರ್ಣ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಸಂಜೆ 6ರಿಂದ ಬಹಿರಂಗ ಪ್ರಚಾರ ಅಂತ್ಯ, ಮೆರವಣಿಗೆ, ಸಭೆ ನಿಷಿದ್ಧ. ಕಣದಲ್ಲಿ ಒಟ್ಟು 19 ಅಭ್ಯರ್ಥಿಗಳು. ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,92,962 ಜನ ಮತದಾರರು. ಶೇ.80ರಷ್ಟು ಮತದಾನದ ಗುರಿ, ನಿರ್ಭೀತಿಯಿಂದ ಮತದಾನಕ್ಕಾಗಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಮತದಾನ ಇದೆ ಮೇ 7ರಂದು ನಡೆಯಲಿದ್ದು ಇದಕ್ಕೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಶನಿವಾರ ಬೀದರ್‌ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ತಯಾರಿ ಕುರಿತಂತೆ ಅವರು ಮಾಹಿತಿ ನೀಡಿದರು.

ಭಾನುವಾರ ಸಂಜೆ 6 ಗಂಟೆಯಿಂದ ನಿಶಬ್ಧ ಅವಧಿ ಆರಂಭವಾಗುವುದರಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ವೇದಿಕೆ ಕಾರ್ಯಕ್ರಮ, ಮೆರವಣಿಗೆ, ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಅಭ್ಯರ್ಥಿಯು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ. ಅದಕ್ಕಾಗಿ ಕಲಂ 144 ಜಾರಿಯಲ್ಲಿ ಇರಲಿದ್ದು, ಇಂದು ಸಂಜೆ 6ರಿಂದ ಮದ್ಯದಂಗಡಿಗಳು ಮುಚ್ಚಲ್ಪಡುತ್ತವೆ. ಬೀದರ್‌ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಪ್ರಚಾರಕ್ಕಾಗಿ ಬಂದವರು ಕ್ಷೇತ್ರಬಿಟ್ಟು ತೆರಳಬೇಕು ಎಂದು ಸೂಚಿಸಿದರು.

ನಿಶಬ್ಧ ಅವಧಿಯಲ್ಲಿ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕಾದಲ್ಲಿ ಜಿಲ್ಲಾ ಎಂಸಿಎಂಸಿ ತಂಡದ ಅನುಮತಿ ಪಡೆಯಬೇಕು. ಒಬ್ಬ ಅಭ್ಯರ್ಥಿಗೆ ಒಟ್ಟು ಹತ್ತು ವಾಹನಗಳಿಗೆ ಮಾತ್ರ ಪ್ರಚಾರಕ್ಕೆ ಅನುಮತಿ ನೀಡಲಾಗುತ್ತದೆ. ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಚೆಕ್‌ ಪೋಸ್ಟ್‌ಗಳು ನಿರಂತರವಾಗಿ ಕೆಲಸ ಮಾಡುತ್ತಿವೆ ಹಾಗೂ ಪ್ಲಾಯಿಂಗ್‌ ಸ್ಕ್ವಾಡ್‌ಗಳು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,92,962 ಜನ ಮತದಾರರಿದ್ದು, 18 ಅಭ್ಯರ್ಥಿಗಳು ಹಾಗೂ ಒಂದು ನೋಟಾ ಸೇರಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್‌ ಮತಗಟ್ಟೆ, ಒಂದು ಯುವ ಮತಗಟ್ಟೆ, ಒಂದು ವಿಶೇಷ ಚೇತನರ ಮತಗಟ್ಟೆ ಹಾಗೂ ಒಂದು ವಿಷಯಾಧಾರಿತ ವಿಶೇಷ ಮತಗಟ್ಟೆ ಇರಲಿದೆ ಎಂದು ತಿಳಿಸಿದರು.

324 ಕ್ರಿಟಿಕಲ್‌ ಮತಗಟ್ಟೆ ಇರಲಿವೆ. 120 ವಿಡಿಯೋಗ್ರಾಫರ್‌ ಹಾಗೂ 150 ಮೈಕ್ರೊ ಅಬ್ಸರ್ವರ್‌ಗಳು ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಶೇ. 85ರಷ್ಟು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ: ಒಟ್ಟು 243 ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾಗೂ 250 ಕ್ರೂಸರ್‌ಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಕಾಯ್ದಿರಿಸಲಾಗಿದೆ. ಶೇ. 85ರಷ್ಟು ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 3.18 ಕೋಟಿ ರು. ಮೌಲ್ಯದ ಸಾಮಗ್ರಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಮೇ 7ರಂದು ಮತದಾನ ನಡೆಯಲಿದ್ದು ಜೂ.4ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ನೋಡಲ್‌ ಅಧಿಕಾರಿ ಡಾ. ಗಿರೀಶ ಬದೋಲೆ ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಬೀದರ್‌ ವತಿಯಿಂದ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಶೇ. 80ರಷ್ಟು ಮತದಾನ ಮಾಡಲು ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 35 ಸಾವಿರ ಯುವ ಮತದಾರರಿದ್ದು ಎಲ್ಲರೂ ಮತ ಚಲಾಯಿಸಬೇಕು ಎಂದು ತಿಳಿಸಿದರು.

ಈ ಬಾರಿ ಶೇ.80 ಪ್ರತಿಶತ ಮತದಾನವಾಗುವ ಗುರಿ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ 48 ವಿಶೇಷ ಮತಗಟ್ಟೆಗಳು ಇರಲಿವೆ. ಒಂದೇ ಕಡೆ ಎರಡು ಮೂರು ಮತಗಟ್ಟೆ ಇರುವ ಕ್ಲಸ್ಟರ್‌ಗಳಲ್ಲಿ ಮತಗಟ್ಟೆ ಸಹಾಯಕರನ್ನು ನಿಯೋಜನೆ ಮಾಡಲಾಗುತ್ತದೆ. ಅವರು ಯಾವ ಮತಗಟ್ಟೆಗಳಲ್ಲಿ ಮತದಾರರ ಹೆಸರು ಇದೆ ಎಂಬ ಮಾಹಿತಿಯನ್ನು ಮತದಾರರಿಗೆ ನೀಡುವುದರಿಂದ ಮತದಾರರಿಗೆ ಅನುಕೂಲವಾಗಲಿದೆ. ಈ ಸಲ ಶೇ.80ರಷ್ಟು ಮತದಾನ ಮಾಡುವ ಗುರಿ ನಮ್ಮದಾಗಿದೆ ಎಂದು ಸಿಇಒ ಡಾ. ಗಿರೀಶ ಬದೋಲೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್‌, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಶಿಲ್ದಾರ ಅಣ್ಣಾರಾವ್‌ ಪಾಟೀಲ್‌, ವಾರ್ತಾಧಿಕಾರಿ ಜಿ. ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.