ಸಾರಾಂಶ
ಹಿಂಗಾರು ಹಂಗಾಮಿಗೆ ಬೇಕಾಗುವಂತ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ನೀಡಲಾಗುತ್ತಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಸವದತ್ತಿ
ತಾಲೂಕಿನಾದ್ಯಂತ ಹಿಂಗಾರು ಬಿತ್ತನೆಯ ಹಂಗಾಮು ಪ್ರಾರಂಭಗೊಂಡಿದ್ದು, ಎಲ್ಲ ರೈತರು ಬಿತ್ತನೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿರುವುದರಿಂದ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ರಿಯಾಯತಿ ದರದಲ್ಲಿ ಪೂರೈಕೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಜಿಪಂ, ತಾಪಂ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಿಂಗಾರು ಹಂಗಾಮಿಗೆ ಬೇಕಾಗುವಂತ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ನೀಡಲಾಗುತ್ತಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಇಲಾಖೆಯ ಅಧಿಕಾರಿಗಳಿಂದ ಅವಶ್ಯಕ ಮಾಹಿತಿ ಪಡೆದು ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಬೇಕೆಂದರು.
ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, ತಾಲೂಕಿನ ನಾಲ್ಕು ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿನ ೧೩ ಉಪ ಮಾರಾಟ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗುತ್ತಿದೆ. ೧೦೦ ಕ್ವಿಂಟಲ್ ಜೋಳ, ೪೨೫೫ ಕ್ವಿಂಟಲ್ ಕಡಲೆ ಬೀಜಗಳ ದಾಸ್ತಾನು ಮಾಡಲಾಗಿದೆ. ಬರುವಂತ ದಿನಗಳಲ್ಲಿ ಸೂರ್ಯಕಾಂತಿ, ಮುಸಕಿನ ಜೋಳ, ಗೋಧಿ ಬೀಜಗಳನ್ನು ಸಂಗ್ರಹಿಸಿ ರೈತರಿಗೆ ಪೂರೈಕೆ ಮಾಡಲಾಗುತ್ತಿದೆ. ಎಲ್ಲ ಬಿತ್ತನೆ ಬೀಜಗಳನ್ನು ಗುಣಮಟ್ಟದಲ್ಲಿ ಪೂರೈಕೆ ಮಾಡಲಾಗುತ್ತಿದ್ದು, ರೈತರು ಬಿತ್ತನೆ ಬೀಜಗಳ ವಿತರಣೆಯ ಉಪ ಮಾರುಕಟ್ಟೆಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆದುಕೊಳ್ಳಬೇಕೆಂದರು.ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಶಿವಕುಮಾರ ರಾಠೋಡ, ಬಿ.ಎನ್.ಪ್ರಭುನವರ, ನೀಲಪ್ಪ ಅಣ್ಣಿಗೇರಿ, ಪ್ರವೀಣ ರಾಮಪ್ಪನವರ, ಫಕ್ಕೀರಪ್ಪ ಹದ್ದನ್ನವರ, ಡಿ.ಡಿ.ಟೋಪೋಜಿ, ಮಲ್ಲು ಜಕಾತಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.