ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಸಕಲ ಸಿದ್ಧತೆ

| Published : Jan 24 2025, 12:48 AM IST

ಸಾರಾಂಶ

ನೀರಿನ ಸಮಸ್ಯೆ ಬಾರದಂತೆ ಜಾಗೃತಿ ವಹಿಸಿ ಮಳವಳ್ಳಿ ಪಟ್ಟಣದಲ್ಲಿ ಸ್ವಚ್ಛತೆಗೆ ಇರುವ ಸಿಬ್ಬಂದಿ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ಮದ್ದೂರು, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ಪುರಸಭೆಗಳ ಸಿಬ್ಬಂದಿ ನಿಯೋಜನೆಗೆ ಪತ್ರ ಬರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮುಂದಿನ ತಿಂಗಳು ಮೊದಲ ವಾರದಲ್ಲಿ ಪಟ್ಟಣದಲ್ಲಿ ನಡೆಯುವ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಯಾವುದೇ ಸೌಲಭ್ಯಗಳ ಕೊರತೆ ಕಾಡದಂತೆ ಜಾಗೃತಿ ವಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ತಿಳಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ದಂಡಿನ ಮಾರಮ್ಮನ ಹಾಗೂ ಸಿಡಿಹಬ್ಬದ ಪೂರ್ವಭಾವಿಯಾಗಿ ನಡೆದ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಷಾಂತರ ಮಂದಿ ಭಾಗಿಯಾಗುವ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಸಿಡಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ನೀರಿನ ಸಮಸ್ಯೆ ಬಾರದಂತೆ ಜಾಗೃತಿ ವಹಿಸಿ ಪಟ್ಟಣದಲ್ಲಿ ಸ್ವಚ್ಛತೆಗೆ ಇರುವ ಸಿಬ್ಬಂದಿ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ಮದ್ದೂರು, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ಪುರಸಭೆಗಳ ಸಿಬ್ಬಂದಿ ನಿಯೋಜನೆಗೆ ಪತ್ರ ಬರೆಯಲಾಗಿದೆ ಎಂದರು.

ಸಭೆಯಲ್ಲಿ ಎಂ.ಟಿ.ಪ್ರಶಾಂತ್, ಎಂ.ಆರ್.ರಾಜಶೇಖರ್, ರವಿ, ಬಸವರಾಜು ಮಾತನಾಡಿ, ಹಿಂದಿನ ಸಭೆಯಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಜಾರಿಯಲ್ಲಿರುವ 24*7 ಕುಡಿಯುವ ನೀರಿನ ಯೋಜನೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸಮರ್ಪಕ ನೀರು ಪೂರೈಕೆ ಮಾಡುವ ಬಗ್ಗೆ ಎಲ್ಲ ಸದಸ್ಯರು ಚರ್ಚೆ ನಡೆಸಿದ್ದವು. ಆಗ ಸಭೆಯಲ್ಲಿದ್ದ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನದಾಫ್ ತಕ್ಷಣವೇ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ, 15 ದಿನಗಳು ಕಳೆದರೂ ಇದುವರೆಗೂ ಯಾವುದೇ ವಾರ್ಡ್ ಗೆ ಭೇಟಿ ನೀಡಿಲ್ಲ. ಇವತ್ತಿನ ಸಭೆಗೆ ಅವರು ಏಕೆ ಬಂದಿಲ್ಲ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.

ಸದಸ್ಯ ನೂರುಲ್ಲಾ ಮಾತನಾಡಿ, ನಮ್ಮ ವಾರ್ಡ್ ನಲ್ಲಿ ವಾರಕ್ಕೊಮ್ಮೆ ಮಾತ್ರ ಕಸವಿಲೇವಾರಿ ವಾಹನ ಬರುತ್ತಿದೆ. ಇದ್ದರಿಂದ ಕಸದ ರಾಶಿಗಳಿಗೆ ಜನರು ನಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ವಾಹನದ ಸೌಲಭ್ಯ ಕಲ್ಪಿಸಬೇಕು ಎಂದರು.

ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಪುಟ್ಟಸ್ವಾಮಿ ಸೂಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಎನ್.ಬಸವರಾಜು (ಜಯಸಿಂಹ), ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣ, ಪುರಸಭೆ ವ್ಯವಸ್ಥಾಪಕಿ ಎಸ್.ಜಿ.ನಾಗರತ್ನ ಭಾಗಿಯಾಗಿದ್ದರು.