ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. 17ನೇ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಮತ ಎಣಿಕೆ ಜೂ.4ರಂದು ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಅಂಚೆ ಮತ ಎಣಿಕೆ ಹಾಗೂ ಬಳಿಕ ಇವಿಎಂ ಮತ ಎಣಿಕೆ ಆರಂಭವಾಗಲಿದೆ. ಮತ ಎಣಿಕೆಗೆ ಬೇಕಾದ ಎಲ್ಲ ಸಿದ್ಧತೆಯನ್ನು ಸುರತ್ಕಲ್ ಎನ್‌ಐಟಿಕೆ ಕೇಂದ್ರದಲ್ಲಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರ ನೀಡಿದರು.
ಬೆಳಗ್ಗೆ 6 ರಿಂದ 7 ಗಂಟೆ ವರೆಗೆ ಸ್ಟ್ರಾಂಗ್ ರೂಂ ತೆರೆದು ಅಂಚೆ ಮತಪೆಟ್ಟಿಗೆ ಹಾಗೂ ಇವಿಎಂಗಳನ್ನು ಎಣಿಕಾ ಕೊಠಡಿಗೆ ತರಲಾಗುತ್ತದೆ. 8 ಗಂಟೆಯಿಂದ ಅಂಚೆ ಮತಗಳ ಎಣಿಕೆ ಆರಂಭವಾಗಲಿದೆ. 8.30ರಿಂದ ಇವಿಎಂ ಮತಗಳ ಎಣಿಕೆ ಶುರುವಾಗಲಿದೆ. ಇವೆಲ್ಲದರ ಎಣಿಕೆ ಪ್ರತ್ಯೇಕ ಕೊಠಡಿಗಳಲ್ಲಿ ನಡೆಯಲಿದೆ. ಎಲ್ಲವೂ ಸಿಸಿ ಕ್ಯಾಮರಾ ಕಣ್ಗಾವಲಲ್ಲಿ ಬಿಗು ಭದ್ರತೆಯಲ್ಲಿ ನಡೆಯಲಿದೆ. ಆಯಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಏಜಂಟರಿಗೆ ಪ್ರತ್ಯೇಕ ಬಣ್ಣದ ಕೋಡಿಂಗ್ ಸ್ಟಿಕ್ಕರ್ ನೀಡಲಾಗುತ್ತದೆ. ಅವರು ತಮ್ಮ ಕ್ಷೇತ್ರಗಳ ಎಣಿಕಾ ಕೇಂದ್ರಗಳಲ್ಲಿ ಮಾತ್ರ ಇರಬೇಕಾಗುತ್ತದೆ ಎಂದರು.ಮತ ಎಣಿಕೆ ಕೇಂದ್ರದ 100 ಮೀಟರ್ ಸುತ್ತಮುತ್ತ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಅಭ್ಯರ್ಥಿಗಳಿಗೆ, ಎಣಿಕೆ ಸಿಬ್ಬಂದಿಗಳಿಗೆ ಮತ ಎಣಿಕೆ ಕೇಂದ್ರದ ಒಳಗೆ ಪ್ರತ್ಯೇಕ ವಾಹನ ನಿಲುಗಡೆ ಕಲ್ಪಿಸಲಾಗಿದೆ ಎಂದರು.
ನಿಷೇಧಾಜ್ಞೆ, ಮೆರವಣಿಗೆ ಇಲ್ಲ: ನೈಋತ್ಯ ಪದವೀಧರ ಚುನಾವಣೆ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಜೂನ್ 1ರಿಂದ 4ರ ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರ ಸೇರಿದಂತೆ ಎಲ್ಲಿಯೂ ಮೆರವಣಿಗೆ, ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದರು.14 ಟೇಬಲ್‌ಗಳಲ್ಲಿ ಮತ ಎಣಿಕೆ: ದ.ಕ. ಲೋಕಸಭಾ ಕ್ಷೇತ್ರದಲ್ಲಿ 14,09,653 ಮತ ಚಲಾವಣೆಯಾಗಿದ್ದು, 8,537 ಅಂಚೆ ಮತಗಳಿವೆ. 514 ಸರ್ವಿಸ್ ಮತಗಳಿದ್ದು, ಈವರೆಗೆ 231 ಮತಗಳು ಬಂದಿವೆ. ಮತ ಎಣಿಕೆಗೆ ಒಂದು ಗಂಟೆ ಮೊದಲು ವರೆಗೂ ಈ ಮತಗಳನ್ನು ಸ್ವೀಕರಿಸಲಾಗುತ್ತದೆ ಎಂದರು.
ದ.ಕ. ಲೋಕಸಭೆಯ ಪ್ರತಿ ಕ್ಷೇತ್ರಗಳಿಗೆ ತಲಾ 14 ಟೇಬಲ್‌ಗಳನ್ನು ಮತ ಎಣಿಕೆಗೆ ಸಿದ್ಧಪಡಿಸಲಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ 19 ಸುತ್ತು ಹಾಗೂ ಕನಿಷ್ಛ ಮಂಗಳೂರು ಕ್ಷೇತ್ರದಲ್ಲಿ 15 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಂಚೆ ಮತಗಳನ್ನು 20 ಟೇಬಲ್‌ಗಳಲ್ಲಿ ಎಣಿಕೆ ಮಾಡಲಾಗುವುದು. ಮತ ಎಣಿಕೆಗೆ ಒಟ್ಟು 554 ಸಿಬ್ಬಂದಿ ಇರಲಿದ್ದು, 50 ಮಂದಿ ಟ್ಯಾಬುಲೇಷನ್‌ಗೆ ಸೇರಿ ಒಟ್ಟು 650 ಮಂದಿ ಎಣಿಕಾ ಕಾರ್ಯ ನಡೆಸಲಿದ್ದಾರೆ ಎಂದರು.ದೂರುಗಳಿದ್ದರೆ ಕರೆ ಮಾಡಿ: ಮಾಧ್ಯಮಕ್ಕೆ ಪ್ರತ್ಯೇಕ ಕೇಂದ್ರ ಇರಲಿದ್ದು, ಕಾಲಕಾಲಕ್ಕೆ ಫಲಿತಾಂಶವನ್ನು ಬಿತ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದ ಹೊರಗೂ ಫಲಿತಾಂಶ ಬಿತ್ತರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಅಂತಿಮ ಫಲಿತಾಂಶವನ್ನು ಚುನಾವಣಾ ವೀಕ್ಷಕರ ಹಾಗೂ ಆಯೋಗದ ಅನುಮೋದನೆ ಬಳಿಕವೇ ಪ್ರಕಟಿಸಲಾಗುತ್ತದೆ. ಮತ ಎಣಿಕೆಗೆ ಸಂಬಂಧಿಸಿ ಯಾವುದೇ ದೂರುಗಳಿದ್ದರೆ ನಿಯಂತ್ರಣ ಕೊಠಡಿ ಸಂಖ್ಯೆ 1950ಕ್ಕೆ ಕರೆ ಮಾಡಬಹುದು ಎಂದರು.
ಬಿಗು ಭದ್ರತೆ ವ್ಯವಸ್ಥೆ: ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಮಾತನಾಡಿ, ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತಗಳಲ್ಲಿ ಭದ್ರತೆ ಒದಗಿಸಲಾಗುತ್ತದೆ. ಸ್ಥಳೀಯ ಪೊಲೀಸರಲ್ಲದೆ, ಪ್ಯಾರಾ ಮಿಲಿಟರಿ ಹಾಗೂ ಕೆಎಸ್‌ಆರ್‌ಪಿ ತುಕಡಿ ಭದ್ರತೆ ನೀಡಲಾಗಿದೆ. ಮಾಧ್ಯಮ ಹೊರತುಪಡಿಸಿ ಯಾರಿಗೂ ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಇಲ್ಲ. ಚುನಾವಣಾ ಆಯೋಗದ ಎಲ್ಲ ಸೂಚನೆಗಳನ್ನು ಪಾಲಿಸಬೇಕು ಎಂದರು.
ಮೂರು ಡಿಸಿಪಿ, ಆರು ಎಸಿಪಿ, 26 ಇನ್‌ಸ್ಪೆಕ್ಟರ್, 850 ಸಿಬ್ಬಂದಿ, ಕೆಎಸ್‌ಆರ್‌ಪಿ, ಪ್ಯಾರಾ ಮಿಲಿಟರಿ ತುಕಡಿ ಕಾರ್ಯನಿರ್ವಹಿಸಲಿದೆ ಎಂದರು. ಜೂ.3ರಂದು ದ.ಕ.ದಲ್ಲಿ ಪದವೀಧರ ಕ್ಷೇತ್ರ ಮತದಾನನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3ರಂದು ನಡೆಯಲಿದೆ. ಮತದಾನ ಬೆಳಗ್ಗೆ 8ರಿಂದ ಸಂಜೆ 4 ಗಂಟೆ ವರೆಗೆ ನಡೆಯಲಿದೆ. ಜೂ.6ರಂದು ಮತಗಳ ಎಣಿಕೆ ಮೈಸೂರಿನಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ದ.ಕ. ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ 24 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಎಲ್ಲ ತಾಲೂಕು ಕಚೇರಿಗಳಲ್ಲಿ ಸೇರಿ 16 ಕಡೆಗಳಲ್ಲಿ ಮತದಾನ ಕೇಂದ್ರ ತೆರೆಯಲಾಗಿದೆ. ಪದವೀಧರ ಕ್ಷೇತ್ರದಲ್ಲಿ 19,971 ಮಂದಿ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 8,189 ಮಂದಿ ಮತದಾರರಿದ್ದಾರೆ. ಈ ಚುನಾವಣೆಗೆ ಸಂಬಂಧಿಸಿ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದು ಬ್ಯಾಲೆಟ್ ಪೇಪರ್‌ನಲ್ಲಿ ನಡೆಯುವ ಚುನಾವಣೆಯಾಗಿದೆ. ಇಲ್ಲಿ ಆದ್ಯತೆ ಮೇರೆಗೆ ಮತ ಚಲಾಯಿಸಬೇಕಿದ್ದು, ಪ್ರಥಮ ಪ್ರಾಶಸ್ತ್ಯ ಮತಕ್ಕೆ 1, ಎರಡನೇ ಪ್ರಾಶಸ್ತ್ಯದ ಮತಕ್ಕೆ ಅಭ್ಯರ್ಥಿ ಎದುರು 2 ಎಂದು ನಮೂದಿಸಬೇಕು. ಇಲ್ಲದಿದ್ದರೆ ಅಂತಹ ಮತಗಳು ಅಸಿಂಧುಗೊಳ್ಳುತ್ತವೆ. ಈ ಚುನಾವಣೆಯಲ್ಲಿ ಮತದಾರರ ಬಲಗೈ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಮತದಾನಕ್ಕೆ ಆಗಮಿಸುವಾಗ ಮತದಾರ ನೋಂದಣಿಯ ಸ್ಲಿಪ್ ಹಾಗೂ ವೋಟರ್ ಐಡಿ ತರಬೇಕು ಎಂದರು.