ಕಲಬುರಗಿ ಲೋಕಸಭಾ ಕ್ಷೇತ್ರ ಮತದಾನಕ್ಕೆ ಸಕಲ ಸಿದ್ಧತೆ

| Published : May 05 2024, 02:03 AM IST

ಸಾರಾಂಶ

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಮೀಸಲು ಲೋಕಸಭೆ ಮತಕ್ಷೇತ್ರದ ಚುನಾವಾಣೆಗೆ ಮೇ 7ರಂದು ಬೆ.7ರಿಂದ ಸಂಜೆ 6 ರ ವರೆಗೂ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಈ ಕುರಿತತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಸಿ ಫೌಜಿಯಾ ತರನ್ನುಮ್‌ ಅವರು, ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಮತದಾರರನ್ನು ಸೆಳೆಯಲಿವೆ ಆಕರ್ಷಕ ಮತಗಟ್ಟೆಗಳು:

ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಬೂತ್, ತಲಾ ಒಂದು ಯುವ, ಪಿ.ಡಬ್ಲ್ಯೂ.ಡಿ. ಹಾಗೂ ಐತಿಹಾಸಿಕ ಹಿನ್ನೆಲೆ ಒಳಗೊಂಡ ಥೀಮ್ ಬೂತ್ ಸ್ಥಾಪಿಸಿ ಮತದಾರರನ್ನು ಆಕರ್ಷಿಸಲಾಗುತ್ತಿದೆ. ಈ ಬೂತ್‍ಗಳ ಸುಣ್ಣ-ಬಣ್ಣ ಕಾರ್ಯ ಈಗಾಗಲೆ ಭರದಿಂದ ಸಾಗಿದೆ.

ಮತ ಎಣಿಕೆ ಗುಲ್ಬರ್ಗ ವಿ.ವಿ.ಯಲ್ಲಿ: ಲೋಕಸಭಾ ಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಿದೆ. ಈಗಾಗಲೆ ಪಿ.ಆರ್.ಓ, ಎ.ಪಿ.ಆರ್.ಓ. ಗಳಿಗೆ ಎರಡು ಹಂತದ ತರಬೇತಿ ನೀಡಲಾಗಿದೆ. ಮತದಾನ ಮುಕ್ತಾಯದ ನಂತರ ಡಿ-ಮಸ್ಟರಿಂಗ್ ಸೆಂಟರ್ ಮೂಲಕ ಗುಲಬರ್ಗಾ ವಿ.ವಿ.ಯ ವಿವಿಧ ವಿಭಾಗದಲ್ಲಿ ಸ್ಥಾಪಿಸಲಾದ ಸ್ಟ್ರಾಂಗ್ ರೂಂಗಳಿಗೆ ಸೂಕ್ತ ಭದ್ರತೆಯಲ್ಲಿ ಮತಯಂತ್ರ ತಂದು ಸೀಲ್ ಮಾಡಲಾಗುತ್ತದೆ. ಇಲ್ಲಿಯೇ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

ಮತಗಟ್ಟೆಗಳ ಮುಂದೆ ಆ್ಯಂಬುಲೆನ್ಸ್‌: ಬಿಸಿಲಿನ ತಾಪ ಹೆಚ್ಚಿರುವ ಕಾರಣ ಪ್ರತಿ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಮತ್ತು ಮತದಾರರ ಆರೋಗ್ಯ ಕಾಳಜಿ ಬಗ್ಗೆ ವಿಶೇಷವಾಗಿ ಗಮನ ವಹಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಓ.ಆರ್.ಎಸ್., ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರಥಮ ಚಿಕಿತ್ಸಾ ಕಿಟ್ ಇಡಲಾಗಿದ್ದು, ಆಶಾ ಕಾರ್ಯಕರ್ತೆ, ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿರಲಿದ್ದಾರೆ. ನೆರಳಿಗೆ ಸಾಮಿಯಾನ ವ್ಯವಸ್ಥೆ, ವೇಟಿಂಗ್ ರೂಂ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಅರ್ಧ ಗಂಟೆಯಲ್ಲಿ ಅಂಬುಲೆನ್ಸ್ ದೊರೆಯುವಂತೆ ಜಿಲ್ಲೆಯಾದ್ಯಂತ 66 ಅಂಬುಲೆನ್ಸ್ ಗುರುತಿಸಲಾಗಿದ್ದು, ವಾಹನ ಚಾಲಕರ ಮೋಬೈಲ್ ಸಂಖ್ಯೆ ಪಿ.ಆರ್.ಓ.ಗಳಿಗೆ ನೀಡಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ-2, ಸಿ.ಹೆಚ್.ಸಿ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ-2 ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆ ಬಿಸಲಿನ ತಾಪ ಹಿನ್ನಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಮೀಸಲಿರಿಸಿದ್ದು, ಇಲ್ಲಿ 24 ಗಂಟೆ ವೈದ್ಯರು ಇರಲಿದ್ದಾರೆ ಎಂದು ಡಿ.ಚಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.

3.27 ಕೋಟಿ ಹಣ, 2.27 ಕೋಟಿ ಮೊತ್ತದ ವಸ್ತು ಜಪ್ತಿ: ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಆರಂಭದಿಂದ ಇಲ್ಲಿಯವರೆಗೆ ದಾಖಲೆ ಇಲ್ಲದ 3.27 ಕೋಟಿ ರೂ. ಹಣ ವಶಕ್ಕೆ ಪಡೆಯಲಾಗಿದೆ. 2.27 ಕೋಟಿ ರೂ. ಮೊತ್ತದ ಮದ್ಯ, ಡ್ರಗ್ಸ್, ಬಂಗಾರ, ಬೆಳ್ಳಿ, ಇತರೆ ಫ್ರೀಬೀಸ್ ಜಪ್ತಿ ಮಾಡಲಾಗಿದೆ. ಒಟ್ಟಾರೆ 1,103 ಎಂ.ಸಿ.ಸಿ. ಉಲ್ಲಂಘನೆ ಕಾರಣ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಡಿ.ಸಿ. ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾನ್ಯ ವೀಕ್ಷಕ ದೀಪನಕರ್ ಸಿನ್ಹಾ ಮತ್ತು ವೆಚ್ಚ ವೀಕ್ಷಕ ಸಿ.ಧರಿನಾಥ ವಿ.ಎಸ್., ಎಸ್.ಪಿ. ಅಕ್ಷಯ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.