ಸಾರಾಂಶ
ಹಳಿಯಾಳ: ಮುಂಬರುವ ಲೋಕಸಭಾ ಚುನಾವಣೆಯನ್ನು ಮೇ 7ರಂದು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು, ಚುನಾವಣಾ ಅಕ್ರಮಗಳನ್ನು ತಡೆಯಲು ಮಾದರಿ ನೀತಿ ಸಂಹಿತೆ ತಂಡವನ್ನು ರಚಿಸಿ ತೀವ್ರ ನಿಗಾ ವಹಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸ್ಟೆಲ್ಲಾ ವರ್ಗೀಸ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 183036 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು 91869, ಮಹಿಳಾ ಮತದಾರರು 91166 ಹಾಗೂ ತೃತೀಯ ಲಿಂಗಿಗಳು 1 ಇದ್ದಾರೆ. ಇವರಲ್ಲಿ 85 ವಯಸ್ಸು ಮೇಲ್ಪಟ್ಟ 1355 ಹಿರಿಯ ಮತದಾರರು, 100 ವಯಸ್ಸು ಮೇಲ್ಪಟ್ಟ 21 ಹಾಗೂ 2385 ಅಂಗವಿಕಲ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಬೂತ್‌ಗಳನ್ನು ಗುರುತಿಸಿ, ಮುಂಬರುವ ಲೊಕಸಭಾ ಚುನಾವಣೆಗೆ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.ಹಳಿಯಾಳ ವಿಧಾನಸಭಾ ಕ್ಷೇತ್ರವು ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ಒಳಗೊಂಡಿದ್ದು, ಒಟ್ಟು 215 ಮತಗಟ್ಟೆಗಳಿದ್ದು, ಹಳಿಯಾಳ ತಾಲೂಕಿನಲ್ಲಿ 103, ದಾಂಡೇಲಿ 54 ಮತ್ತು ಜೋಯಿಡಾ 58 ಮತಗಟ್ಟೆಗಳಿದ್ದು, ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಸುಸೂತ್ರವಾಗಿ ನಡೆಸುವ ದಿಸೆಯಲ್ಲಿ 26 ಸೆಕ್ಟರ್ ಆಫೀಸರ್, 9 ಸಂಚಾರಿ ತಂಡ, ವಿಎಸ್‌ಟಿ ತಂಡ 3 ಮತ್ತು ವಿವಿಟಿ 1 ತಂಡವು ಕಾರ್ಯನಿರ್ವಹಿಸಲಿದೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 7 ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.ಕಂಟ್ರೋಲ್ ರೂಮ್: ತಾಲೂಕು ಆಡಳಿತ ಸೌಧದಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೂ. 08284- 220134ಕ್ಕೆ ಕರೆ ಮಾಡಿ ತಮ್ಮ ಸಲಹೆ, ಸೂಚನೆ, ದೂರುಗಳನ್ನು ನೀಡಬಹುದು ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಬಹುದು ಎಂದರು.ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಆರ್.ಎಚ್. ಭಾಗವಾನ, ಜೋಯಿಡಾ ತಹಸೀಲ್ದಾರ್ ಮಂಜುನಾಥ ಮುನ್ನೊಳ್ಳಿ, ಹಳಿಯಾಳ ಸಿಪಿಐ ಜೈಪಾಲ ಪಾಟೀಲ ಇದ್ದರು.