ಮಡಿಕೇರಿ ದಸರಾ ಉತ್ಸವಕ್ಕೆ ಸಕಲ ಸಿದ್ಧತೆ: ಅನಿತಾ ಪೂವಯ್ಯ

| Published : Oct 15 2023, 12:45 AM IST

ಮಡಿಕೇರಿ ದಸರಾ ಉತ್ಸವಕ್ಕೆ ಸಕಲ ಸಿದ್ಧತೆ: ಅನಿತಾ ಪೂವಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಅ.24ರಂದು ರಾತ್ರಿ ದಶ ಮಂಟಪಗಳ ಶೋಭಾಯಾತ್ರೆ ನಡೆಯಲಿದೆ. ಈ ಬಾರಿ ಅತಿ ಹೆಚ್ಚು ಪ್ರದರ್ಶನ ನೀಡಿದ ಮಂಟಪಗಳಿಗೆ ದಸರಾ ಸಮಿತಿಯಿಂದ ಪ್ರಶಸ್ತಿಯನ್ನು ನೀಡಲಾಗುತ್ತದೆ. ಬರ ಹಿನ್ನೆಲೆಯಲ್ಲಿ ಕಡಿಮೆ ಅನುದಾನ ಘೋಷಣೆಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಸಕಲ ಸಿದ್ಧತೆಗಳು ಮಾಡಲಾಗಿದೆ. ಭಾನುವಾರ ಕರಗ ಉತ್ಸವ ಆರಂಭವಾಗಲಿದೆ. ಅ.16ರಿಂದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ದಸರಾ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಮಡಿಕೇರಿ ನಗರಸಭಾ ಅಧ್ಯಕ್ಷೆ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಹೇಳಿದ್ದಾರೆ. ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.15ರಂದು ಸಂಜೆ 4.30ಕ್ಕೆ ನಗರದ ಪಂಪಿನ ಕೆರೆಯಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಪೂಜೆ ಸಲ್ಲಿಸುವ ಮೂಲಕ ಕರಗ ಉತ್ಸವ ಆರಂಭವಾಗಲಿದೆ. ಈ ಮೂಲಕ ಮಡಿಕೇರಿ ದಸರಾಗೆ ಚಾಲನೆ ದೊರಕಲಿದೆ. ನಗರದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆಯನ್ನು ನಡೆಸಲಿದೆ ಎಂದು ತಿಳಿಸಿದರು. ಅ.24ರಂದು ರಾತ್ರಿ ದಶ ಮಂಟಪಗಳ ಶೋಭಾಯಾತ್ರೆ ನಡೆಯಲಿದೆ. ಈ ಬಾರಿ ಅತಿ ಹೆಚ್ಚು ಪ್ರದರ್ಶನ ನೀಡಿದ ಮಂಟಪಗಳಿಗೆ ದಸರಾ ಸಮಿತಿಯಿಂದ ಪ್ರಶಸ್ತಿಯನ್ನು ನೀಡಲಾಗುತ್ತದೆ. ಬರ ಹಿನ್ನೆಲೆಯಲ್ಲಿ ಕಡಿಮೆ ಅನುದಾನ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಮಂಟಪಗಳಿಗೆ ಹೆಚ್ಚಿನ ಅನುದಾನ ನೀಡುವ ನಿಟ್ಟಿನಲ್ಲಿ ದಸರಾ ಸಮಿತಿಯಿಂದ ವಂತಿಕೆಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. * ಸಾಂಸ್ಕೃತಿಕ ಕಾರ್ಯಕ್ರಮ ದಸರಾ ಹಿನ್ನೆಲೆಯಲ್ಲಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಅ.16ರಿಂದ 24ರ ವರೆಗೆ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆ, ರಾಜ್ಯ ಸೇರಿದಂತೆ ರಾಷ್ಟ್ರೀಯ ಕಲಾವಿದರು ತಮ್ಮ ಪ್ರತಿಭೆ ಅನಾವರಣ ಮಾಡಲಿದ್ದಾರೆ. ದಸರಾ ಹಿನ್ನೆಲೆಯಲ್ಲಿ ವಿವಿಧ ಉಪ ಸಮಿತಿಗಳಿಂದ ಕ್ರೀಡೆ, ಕವಿಗೋಷ್ಠಿ, ಮಕ್ಕಳ ದಸರಾ, ಮಹಿಳಾ ದಸರಾ, ಜನಪದ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವಂತೆ ಮನವಿ ಮಾಡಿದರು. ಈ ಬಾರಿ ದಸರಾದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ದರಿಂದ ಎಲ್ಲರೂ ಸ್ವಚ್ಛತೆಯನ್ನು ಕಾಪಾಡಬೇಕು. ನಗರಸಭೆಯಿಂದ ಈಗಾಗಲೇ ರಸ್ತೆ ರಿಪೇರಿ ಕಾರ್ಯವನ್ನು ಮಾಡಲಾಗಿದೆ. ಪ್ರಮುಖ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಶೌಚಾಲಯ ಸ್ವಚ್ಛಗೊಳಿಸಲು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. * 10 ದಿನವೂ ದೀಪಾಲಂಕಾರ ಈ ಬಾರಿ ಹತ್ತು ದಿನಗಳ ಕಾಲ ಕೂಡ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ನಗರದಲ್ಲಿರುವ ಅಂಗಡಿಯವರು ಕೂಡ ದೀಪಾಲಂಕಾರ ಮಾಡಬೇಕು. ವಿಜಯದಶಮಿಯಂದು ಮಡಿಕೇರಿ ದಸರಾ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ. ಆದ್ದರಿಂದ ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ, ಮೊಬೈಲ್ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು. ಈ ಬಾರಿ ಕಿರಿಕಿರಿ ತಪ್ಪಿಸುವ ನಿಟ್ಟಿನಲ್ಲಿ ಪೀಪಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಇದರ ಮಾರಾಟಕ್ಕೆ ಅವಕಾಶವಿಲ್ಲ. ಭದ್ರತೆಯ ದೃಷ್ಟಿಯಿಂದ ಮುಖವಾಡ ಮಾರಾಟ ಕೂಡ ನಿಷೇಧಿಸಲಾಗಿದೆ. ಮಂಟಪಗಳಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು. * ವಂತಿಗೆ ಸಂಗ್ರಹ ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಬಾರಿ ನಿರೀಕ್ಷೆಗೂ ಮೀರಿ ದಸರಾ ಉತ್ಸವ ಯಶಸ್ವಿಯಾಗಿ ಮಾಡಲು ನಿರ್ಧರಿಸಲಾಗಿತ್ತು. 2 ಕೋಟಿ ರು. ಅನುದಾನಕ್ಕೆ ಸರ್ಕಾರದಿಂದ ಬೇಡಿಕೆ ಇಡಲಾಗಿತ್ತು. ಆದರೆ ರಾಜ್ಯದಲ್ಲಿ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅನುದಾನವನ್ನು ಕಡಿಮೆ ಮಾಡಲಾಗಿದೆ. ಆದರೂ ಈ ಬಾರಿ ವಂತಿಕೆಯನ್ನು ಸಂಗ್ರಹಿಸಿ ದಶಮಂಟಪಗಳಿಗೆ ಅನುದಾನ ನೀಡುವುದರೊಂದಿಗೆ ಉತ್ತಮ ರೀತಿಯಲ್ಲಿ ದಸರಾ ಆಚರಿಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಉಪಾಧ್ಯಕ್ಷರಾದ ಜೀವನ್, ರಾಜೇಶ್, ಪ್ರಮುಖರಾದ ಲೋಕೇಶ್ ಹಾಜರಿದ್ದರು.